ದಾರಿ ತೋರುವ ದಿವ್ಯ ಗಂಟೆಯ ಸದ್ದು

ಅಲ್ಲಿಯೇ ನಿಂತು ನೀವು ಈ ಗೆಳೆಯರನ್ನು ಗಮನಿಸಿದಾಗ ನಿಮಗೆ ಗೊತ್ತಾಗುತ್ತದೆ, ಹೇಗೆ ಗಂಟೆಯ ಕುದುರೆ ತಾನು ಇರುವ ಜಾಗದ ಬಗ್ಗೆ ತನ್ನ ಅಂಧ ಗೆಳೆಯನಿಗೆ ಸೂಚನೆ ಕೊಡುತ್ತದೆ ಮತ್ತು ಹೇಗೆ ಅಂಧ ಕುದುರೆ ತನ್ನ ಗೆಳೆಯ ತನ್ನನ್ನು ಒಂಟಿಯಾಗಿ ಬಿಟ್ಟು ಹೋಗುವುದಿಲ್ಲ ಎನ್ನುವ ತುಂಬು ವಿಶ್ವಾಸದಿಂದ ತನ್ನ ಗೆಳೆಯನನ್ನು ಹಿಂಬಾಲಿಸುತ್ತದೆ ಎನ್ನುವುದುಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ನನ್ನ ಮನೆಯಿಂದ ನೀವು ಸ್ವಲ್ಪ ಮೇಲೆ ಹೋದರೆ ಉತ್ತರ ದಿಕ್ಕಿಗೆ ಅಲ್ಲೊಂದು ವಿಶಾಲ ಬಯಲು ಇದೆ. ಅಲ್ಲಿ ಎರಡು ಕುದುರೆಗಳಿವೆ. ದೂರದಿಂದ ನೋಡಿದರೆ ಅವು ಎಲ್ಲ ಕುದುರೆಗಳಂತೆ ಸಾಮಾನ್ಯ ಕುದುರೆಗಳು. ಆದರೆ ನೀವು ನಿಮ್ಮ ಕಾರ್ ಸ್ಟಾಪ್ ಮಾಡಿ ಅಥವಾ ವಾಕ್ ಮಾಡಿಕೊಂಡು ಹತ್ತಿರ ಹೋಗಿ ನೋಡಿದರೆ ನಿಮಗೆ ಅಲ್ಲೊಂದು ಅಚ್ಚರಿ ಕಾದಿದೆ. ಒಂದು ಕುದುರೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನಿಮಗೆ ಗೊತ್ತಾಗುತ್ತದೆ, ಅದು ಕುರುಡು ಕುದುರೆಯೆಂದು. ಅದರ ಮಾಲಿಕ ಆ ಕುದುರೆಯನ್ನು ಬಳಸಲು ಇಚ್ಛಿಸದೆ ಹೋದರೂ ಅದಕ್ಕೊಂದು ಒಳ್ಳೆಯ ಜಾಗ ನೋಡಿ ಮನೆ ಮಾಡಿಕೊಟ್ಟಿದ್ದಾನೆ. ಇದು ಬಹಳ ಒಳ್ಳೆಯ ವಿಷಯ.

ಆ ಅಂಧ ಕುದುರೆಯ ಹತ್ತಿರ ಇದ್ದಾಗ ಆಗಾಗ ನಿಮಗೆ ಒಂದು ಗಂಟೆಯ ಸದ್ದು ಕೇಳಿಸುತ್ತದೆ. ಆ ಸದ್ದು ಎಲ್ಲಿಂದ ಬಂತು ಎನ್ನುವುದನ್ನ ನೋಡಿದಾಗ, ಅದು ಅಲ್ಲಿಯೇ ಬಯಲಲ್ಲಿರುವ ಇನ್ನೊಂದು ಕುದುರೆಯ ಕೊರಳಿನಿಂದ ಬರುತ್ತಿದೆ. ಗಂಟೆಯ ಕುದುರೆ ತನ್ನ ಅಂಧ ಗೆಳೆಯನಿಗೆ ತಾನು ಇರುವ ಜಾಗದ ಬಗ್ಗೆ ಆಗಾಗ್ಗೆ ಗಂಟೆಯ ಸದ್ದು ಕೇಳಿಸಿ ಸೂಚನೆ ಕೊಡುತ್ತದೆ. ಆ ಸದ್ದು ಅಂಧ ಕುದುರೆಗೆ ತನ್ನ ಗೆಳೆಯನನ್ನು ಹಿಂಬಾಲಿಸಲು ಸಹಾಯ ಮಾಡುತ್ತದೆ.

ಅಲ್ಲಿಯೇ ನಿಂತು ನೀವು ಈ ಗೆಳೆಯರನ್ನು ಗಮನಿಸಿದಾಗ ನಿಮಗೆ ಗೊತ್ತಾಗುತ್ತದೆ, ಹೇಗೆ ಗಂಟೆಯ ಕುದುರೆ ತಾನು ಇರುವ ಜಾಗದ ಬಗ್ಗೆ ತನ್ನ ಅಂಧ ಗೆಳೆಯನಿಗೆ ಸೂಚನೆ ಕೊಡುತ್ತದೆ ಮತ್ತು ಹೇಗೆ ಅಂಧ ಕುದುರೆ ತನ್ನ ಗೆಳೆಯ ತನ್ನನ್ನು ಒಂಟಿಯಾಗಿ ಬಿಟ್ಟು ಹೋಗುವುದಿಲ್ಲ ಎನ್ನುವ ತುಂಬು ವಿಶ್ವಾಸದಿಂದ ತನ್ನ ಗೆಳೆಯನನ್ನು ಹಿಂಬಾಲಿಸುತ್ತದೆ ಎನ್ನುವುದು.

ಗಂಟೆಯ ಕುದುರೆ ಸಂಜೆ ಬಯಲಲ್ಲಿ ಹುಲ್ಲು ಮೇಯ್ದು ತನ್ನ ಆಶ್ರಯದ ಜಾಗೆಗೆ ಮರಳುವಾಗ, ಆಗಾಗ್ಗೆ ನಿಂತು ಹಿಂದೆ ಹಿಂತಿರುಗಿ ನೋಡುತ್ತದೆ, ತನ್ನ ಅಂಧ ಗೆಳೆಯ ಗಂಟೆಯ ಸದ್ದು ಕೇಳಿಸದಷ್ಟು ದೂರ ಇಲ್ಲವಲ್ಲಾ ಎನ್ನುವುದನ್ನ ಖಾತ್ರಿ ಮಾಡಿಕೊಳ್ಳಲು.

ಕೆಲವೊಮ್ಮೆ ನಾವು ಆ ಅಂಧ ಕುದುರೆಯಂತೆ ಮತ್ತು ನಾವು ದಾರಿ ತಪ್ಪದಂತೆ ನೋಡಿಕೊಳ್ಳಲು ಬದುಕು ನಮ್ಮ ಜೀವನದಲ್ಲಿ ಒಂದು ಗಂಟೆಯ ಗೆಳೆಯನನ್ನು ಗೊತ್ತು ಮಾಡಿದೆ. ಅಥವಾ ಒಮ್ಮೊಮ್ಮೆ ಬದುಕಿನಲ್ಲಿ ನಾವು ಗಂಟೆಯ ಗೆಳೆಯನ ಪಾತ್ರ ನಿರ್ವಹಿಸುತ್ತ ನಮ್ಮ ಅಂಧ ಗೆಳೆಯನಿಗೆ ಸಹಾಯ ಮಾಡುತ್ತಿರುತ್ತೇವೆ.

ಒಳ್ಳೆಯ ಗೆಳೆಯರು ಹೀಗೆ. ಅವರು ಯಾವಾಗಲೂ ನಿಮಗೆ ಕಾಣಿಸಿಕೊಳ್ಳುವುದಿಲ್ಲ ಆದರೆ ನಿಮಗೆ ಗೊತ್ತು ಅವರು ನಿಮ್ಮ ಸುತ್ತಲೇ ಇದ್ದು ನಿಮ್ಮನ್ನು ನೋಡಿಕೊಳ್ಳುತ್ತಿದ್ದಾರೆಂದು. ಇಂಥ ಒಂದು ದಿವ್ಯ ಗಂಟೆಯ ಸದ್ದು ನಿಮ್ಮ ಬದುಕಿನಲ್ಲಿ ಇರುವುದಾದರೆ ನೀವು ಅದೃಷ್ಟಶಾಲಿಗಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.