ಅಮರು ಶತಕ : ಕೊನೆಯ ಕಂತು

ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ ಕೊನೆಯ ಭಾಗ ಇಲ್ಲಿದೆ…

93

ಪ್ರಿಯತಮನನ್ನು ಕರೆತರಲು ಹೋಗಿದ್ದ
ಗೆಳತಿ ವಾಪಸ್ಸು ಬಂದಾಗ, ಅವಳ ಅವಸ್ಥೆ ನೋಡಿ …..

ನಿನ್ನ ಮುಖದಲ್ಲೇಕೆ ಇಷ್ಟು ಬೆವರು?
ಎಷ್ಟು ಬಿಸಿಲಿದೆ ನೋಡಿದೆಯಾ?

ಕಣ್ಣು ಯಾಕೆ ಕೆಂಪಾಗಿವೆ?
ಅವನ ಸೊಕ್ಕಿನ ಮಾತುಗಳ ಕೇಳಿ.

ಕೂದಲು ಯಾಕೆ ಹೀಗೆ ಅಸ್ತವ್ಯಸ್ತ?
ಹೊರಗೆ ಎಷ್ಟು ಗಾಳಿ ಇದೆ ಗೊತ್ತಾ?

ಹಣೆಯ ಕುಂಕುಮ ಯಾಕೆ ಅಳಿಸಿದೆ?
ಬಹುಶಃ ಬರುವಾಗ ಪರದೆ ತಾಕಿರಬಹುದು

ಯಾಕೆ ಏದುಸಿರು ?
ಓಡುತ್ತ ಬಂದೆ

ಸರಿ, ತುಟಿಯ ಮೇಲಿನ ಗಾಯ?

******************************

94

ಕಲ್ಲು ಹೃದಯದ ಹುಡುಗಿ,
ಕಳಚಿ ಇಟ್ಟುಬಿಡು ಈ ಸಂಶಯಗಳನ್ನು,
ಸುಳ್ಳು ನನ್ನ ಬಗ್ಗೆ ನೀನು ಕೇಳಿರುವ ಕಥೆಗಳೆಲ್ಲ,
ನಮ್ಮ ಸಂಸಾರವನ್ನು ಒಂಡೆಯಲೆಂದೇ
ಹುಟ್ಟಿಕೊಂಡಿವೆ ಗಾಳಿ ಮಾತಗಳು.
ತೀರ್ಮಾನ ಮಾಡಿಬಿಟ್ಟಿರುವೆಯಾದರೆ
ಮಾಡು ನಿನಗೆ ಇಷ್ಟ ಬಂದಂತೆ
ಸಿಗಲಿ ನಿನಗಾದರೂ ನಿನ್ನ ಮನಸಿನ
ಸಮಾಧಾನ.

***********************

95

ಕೊನೆಗೂ,
ಹುಬ್ಬು ಗಂಟಿಕ್ಕುವುದನ್ನ ಕಲಿತೆ,
ಕಣ್ತಪ್ಪಿಸುವುದನ್ನೂ,
ಮಾದಕ ನಗೆಯನ್ನು ಮುಚ್ಚಿಕೊಳ್ಳುವುದರಲ್ಲೂ
ತರಬೇತಿ ಪಡೆದಾಯ್ತು,
ಮೌನದ ಯೋಗದಲ್ಲೂ ಪ್ರವೀಣೆ ನಾನೀಗ,
ಗಟ್ಟಿಯಾಗಿ ಬೇರೂರಿದೆ ಧೈರ್ಯ ಈಗ
ನನ್ನ ಹೃದಯದಲ್ಲಿ.
ಸಿದ್ಧವಾಗಿದೆ ವೇದಿಕೆ ಸಕಲ ಸರಂಜಾಮುಗಳೊಂದಿಗೆ,
ನಿಂತಿದ್ದಾರೆ ತಯಾರಾಗಿ ಕೋಪದ ಕಾಲಾಳುಗಳು
ತಮ್ಮ ಆಯುಧಗಳೊಂದಿಗೆ ಸಜ್ಜಾಗಿ
ಎಲ್ಲ ಭಗವಂತನ ಕೈಯಲ್ಲಿ ಈಗ
ಸೋಲು ಗೆಲವು.

*****************************

96

ನನ್ನ ಪಾದಗಳ ಮೇಲೆ ಬೀಳುತ್ತಾನೆ,
ಕಣ್ಣೀರು ಹಾಕುತ್ತ ಆಣೆ ಪ್ರಮಾಣಗಳನ್ನು ಮಾಡುತ್ತಾನೆ,
ಸಿಹಿಯಾದ ಮಾತುಗಳನ್ನಾಡಿ ಮನಸ್ಸನ್ನು
ಮುದಗೊಳಿಸುತ್ತಾನೆ,
ಪ್ರೇಮ ವಂಚಿತ ಮೈಯನ್ನು ತಬ್ಬಿ ಮುದ್ದಾಡಿ
ಹೊಸ ಹರೆಯ ಉಕ್ಕಿಸುತ್ತಾನೆ,
ನನ್ನ ಸಿಟ್ಟು ಸಾಧ್ಯ ಮಾಡುತ್ತದೆ ಎಷ್ಟೆಲ್ಲ
ಬಹುಮಾನಗಳನ್ನ !
ಆದರೂ ಅಪಾಯದ ದಾರಿಯಲ್ಲವೆ ಇದು?
ಹೃದಯಕ್ಕೆ ಬಹಳ ಹತ್ತಿರವಾದವನು ನನ್ನ ಪ್ರೇಮಿ
ಪ್ರೇಮದ ಜೊತೆ ಆಡಬಹುದೆ ಹೀಗೆ ನಾನು
ಆಟ?

**************************

97

ಅವನ ಹಾಸಿಗೆ ಹತ್ತಿರವಾಗುತ್ತಿದ್ದಂತೆಯೇ
ಸಡಿಲವಾಯಿತು ನಾನು  ಸೊಂಟಕ್ಕೆ ಉಟ್ಟ ಬಟ್ಟೆ,
ಹೊತ್ತುಕೊಂಡಿತ್ತು ಒಡ್ಯಾಣ
ಎಲ್ಲ ನೈತಿಕತೆ, ಅನೈತಿಕತೆಯ ಜವಾಬ್ದಾರಿ.
ಅವನು ಎದ್ದು ಬಂದು ಅಪ್ಪಿಕೊಂಡಾಗ,
ಅವನ ತೋಳುಗಳಲ್ಲಿ
ಮರೆತು ಹೋಯಿತು ನಾನು ಯಾರೆನ್ನುವುದು,
ಅವನು ಯಾರೆನ್ನುವುದು.
ಮುಂದಿನದು ಯಾವುದೂ ನೆನಪಿಲ್ಲ ನನಗೆ
ಸುಖದ ಹೊರತಾಗಿ.

***************************

98

ಈ ನಿಟ್ಟುಸಿರುಗಳಿಂದಾಗಿ
ಒಣಗಿ ಕಪ್ಪಾಗಿವೆ ತುಟಿಗಳು,
ಹೃದಯ ಕಳೆದುಕೊಂಡಿದೆ ಹಿಡಿತ,
ನಿದ್ದೆಯಿಲ್ಲ ಕಣ್ಣಿಗೆ,
ಪ್ರಿಯತಮನೂ ಬರುತ್ತಿಲ್ಲ ಕನಸಿಗೆ,
ಹಗಲು ರಾತ್ರಿ
ನಡುಗುತ್ತಿದೆ ಈ ಒಣಗಿದ ದೇಹ,
ಪ್ರೇಮಿ ನನ್ನ ಪಾದ ಹಿಡಿದುಕೊಂಡಿರುವಾಗಲೂ
ನಾನು ನೋಡುತ್ತಿಲ್ಲ ಅವನತ್ತ.
ಗೆಳತಿಯರೆ ಯಾಕೆ ಹೇಳಿಕೊಟ್ಟಿರಿ
ಅವನನ್ನು ನಿರಾಕರಿಸುವುದನ್ನ
ಏನು ಉಪಯೋಗವಾಗಬಹುದೆಂದು?

*********************

99 *

ಅವಳು ಮಾಡಲಿಲ್ಲ
ಬಾಗಿಲು ಮುಚ್ಚಿಕೊಳ್ಳುವ ಯಾವ ಪ್ರಯತ್ನವನ್ನೂ,
ಮುಖ ತಿರುಗಿಸಿಕೊಳ್ಳಲಿಲ್ಲ,
ಒಡೆದು ಹೋಗಬಹುದಾಗಿದ್ದ ಯಾವ ಮಾತೂ
ಇರಲಿಲ್ಲ ಅಲ್ಲಿ,
ಪಿಳುಕಿಸದ ಕಣ್ರೆಪ್ಪೆಗಳ ಕೆಳಗೆ ನಿರಂತರವಾಗಿತ್ತು
ಅವಳ ಅನಾಸಕ್ತ ನೋಟ,
ಅವಳ ಎದುರಿರುವವನೂ ಯಾರೇ ಆಗಿದ್ದರೂ.

**************************

100

ಪ್ರೇಮ ಯುದ್ಧದ ನಂತರ
ತೃಪ್ತಿಯ ಧ್ವಜವನ್ನು ಹಾರಿಸಲಾಗಿತ್ತಾದರೂ,
ಅವನು ಕಾಡತೊಡಗಿದ ಅವಳನ್ನು
ಆಕೆಯ ಬಟ್ಟೆ ಎತ್ತಿಟ್ಟುಕೊಂಡು.
ಪರಿಪರಿಯಾಗಿ ಅವಳು ಅವನೆದರು ದೀನಳಾಗಿ
ಬೇಡಿಕೊಳ್ಳುತ್ತಿರುವುದನ್ನು ನೋಡಿ,
ಯುದ್ಧ ಮುಗಿಯಿತೆಂದು
ಜಾಗ ಖಾಲೀ ಮಾಡಿದ್ದ ಕಾಮದೇವ
ಮತ್ತೆ  ಹಾಜರಾದ ತನ್ನ
ಎಲ್ಲ ಆಯುಧಗಳೊಂದಿಗೆ.

*****************************

101

ಅವನು ಏನು ತಪ್ಪು ಮಾಡಿದ್ದನೋ?
ಕಡಗ, ಮಂದರಂಗಿಗಳಿಂದ
ಅಲಂಕೃತವಾಗಿದ್ದ ತನ್ನ ಕೋಮಲ ಪಾದಗಳಿಂದ
ಆಕೆ ಒದ್ದಳು ಅವನ ಎದೆಗೆ.
ಆ ಮಕರ ಧ್ವಜ ಯಾರಿಗೆ ಹೇಗೆ
ಕೃಪೆ ಮಾಡುತ್ತಾನೆ ಎನ್ನುವುದು
ಇನ್ನೂ ಗೊತ್ತಿಲ್ಲ ಯಾರಿಗೂ.


(ಮುಕ್ತಾಯ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.