ಸ್ವಲ್ಪ ಸಮಯದ ನಂತರ ಕೋರ್ಟ್ ಪ್ರವೇಶಿಸಿದ ನಸ್ರುದ್ದೀನ್, ಹೆಂಡತಿಯ ಹಣೆ ಚೆಕ್ ಮಾಡುವಂತೆ ಆದೇಶ ನೀಡಿದ. ಆಮೇಲೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಅವತ್ತು ಕೋರ್ಟ್ ನಲ್ಲಿ ಗಂಡ ಹೆಂಡತಿ ಜಗಳದ ಕೇಸ್ ಜಡ್ಜ್ ನಸ್ರುದ್ದೀನ್ ನ ಮುಂದೆ ಬಂದಿತ್ತು.
“ನನ್ನ ಗಂಡ ನನ್ನ ಕಿವಿ ಕಚ್ಚಿದ” ಹೆಂಡತಿ ಗಂಡನ ಮೇಲೆ ಆರೋಪ ಮಾಡಿದಳು.
“ನಾನು ಕಚ್ಚಿಲ್ಲ, ನಿನ್ನ ಕಿವಿ ಕಚ್ಚಿಕೊಂಡಿದ್ದು ನೀನೇ” ಗಂಡ ಜವಾಬು ನೀಡಿದ.
ಗಂಡ ಹೆಂಡತಿಯ ಆರೋಪ ಪ್ರತ್ಯಾರೋಪಗಳಿಂದ ಅಪ್ರತಿಭನಾದ ನಸ್ರುದ್ದೀನ್, ಕೋರ್ಟ್ ಗೆ ಅಲ್ಪ ವಿರಾಮ ನೀಡಿ ತನ್ನ ಚೇಂಬರ್ ಒಳಗೆ ಹೋದ.
ಚೆಂಬರ್ ಒಳಗೆ ಹೋದ ನಸ್ರುದ್ದೀನ್, ತನ್ನ ಕಿವಿ ತಾನೇ ಕಚ್ಚಿಕೊಳ್ಳಲು ಹರ ಸಾಹಸ ಮಾಡಿದ, ಆದರೆ ವಿಫಲನಾಗಿ ನೆಲದ ಮೇಲೆ ಬಿದ್ದು ಹಣೆ ಒಡೆದುಕೊಂಡ.
ಸ್ವಲ್ಪ ಸಮಯದ ನಂತರ ಕೋರ್ಟ್ ಪ್ರವೇಶಿಸಿದ ನಸ್ರುದ್ದೀನ್, ಹೆಂಡತಿಯ ಹಣೆ ಚೆಕ್ ಮಾಡುವಂತೆ ಆದೇಶ ನೀಡಿದ. ಹೆಂಡತಿಯ ಹಣೆ ಚೆಕ್ ಮಾಡಿದ ಜನ, ಅವಳ ಹಣೆಯ ಮೇಲೆ ಯಾವ ಗಾಯದ ಗುರುತು ಇಲ್ಲವೆಂದು ರಿಪೋರ್ಟ್ ಸಲ್ಲಿಸಿದರು.
ರಿಪೋರ್ಟ್ ನೋಡುತ್ತಲೇ ನಸ್ರುದ್ದೀನ್ ತನ್ನ ತೀರ್ಮಾನ ಪ್ರಕಟಿಸಿದ, “ ಹೆಂಡತಿಯ ಹಣೆ ಮೇಲೆ ಯಾವ ಗಾಯದ ಗುರುತಿಲ್ಲ, ಆದ್ದರಿಂದ ಹೆಂಡತಿ ತನ್ನ ಕಿವಿ ತಾನೇ ಕಚ್ಚಿಕೊಂಡಿದ್ದಾಳೆಂಬ ಗಂಡನ ಆರೋಪ ಸುಳ್ಳು. ಹೆಂಡತಿಯ ಕಿವಿ ಕಚ್ಚಿದ ಅಪರಾಧಕ್ಕೆ ಗಂಡನಿಗೆ ಮೂರು ತಿಂಗಳು ಜೈಲು ವಾಸದ ಶಿಕ್ಷೆ ಘೋಷಿಸುತ್ತೇನೆ”.

