ತನಗೆ ಸುಳ್ಳು ಹೇಳಿದವರಿಗೆ ತಿರುಗೇಟು ಕೊಡದೆ ಸುಮ್ಮನಿರ್ತಾನಾ ನಸ್ರುದ್ದೀನ್? : ಕನ್ನಡಕ್ಕೆ: ಚಿದಂಬರ ನರೇಂದ್ರ
ಬಹಳ ದಿನಗಳ ನಂತರ ನಸ್ರುದ್ದೀನ್ ತನ್ನ ಗೆಳೆಯನ ಮನೆಗೆ ಹೊರಟಿದ್ದ.
ಮಹಡಿಯ ಮೇಲಿನ ಕಿಟಕಿಯಿಂದ ನಸ್ರುದ್ದಿನ್ ಬರುವುದನ್ನ ಗಮನಿಸಿದ ಗೆಳೆಯ, ತನ್ನ ಹೆಂಡತಿಗೆ ಕೂಗಿ ಹೇಳಿದ, “ ನಸ್ರುದ್ದೀನ್ ನಮ್ಮ ಮನೆಗೆ ಬರ್ತಾ ಇದ್ದಾನೆ, ನಾನು ಮನೆಲಿ ಇಲ್ಲ ಅಂತ ಅವನಿಗೆ ಹೇಳು ”.
ನಸ್ರುದ್ದೀನ್, ಗೆಳೆಯನ ಮನೆ ಬಾಗಿಲು ತಟ್ಟಿದ. ಬಾಗಿಲು ತೆರೆದ ಗೆಳೆಯನ ಹೆಂಡತಿ, ತನ್ನ ಗಂಡ ಮನೆಯಲ್ಲಿ ಇಲ್ಲ ಎಂದು ನಸ್ರುದ್ದೀನ್ ಗೆ ಸುದ್ದಿ ಮುಟ್ಟಿಸಿದಳು.
ನಸ್ರುದ್ದೀನ್ ತಲೆಯತ್ತಿ ನೋಡಿದಾಗ ಅವನಿಗೆ ಮಹಡಿಯ ಮೇಲಿನ ಕಿಟಕಿಯಲ್ಲಿ, ಗೆಳೆಯನ ತಲೆ ಕಾಣಿಸಿತು.
ನಸ್ರುದ್ದೀನ್, ಗೆಳೆಯನ ಹೆಂಡತಿಯನ್ನು ಉದ್ದೇಶಿಸಿ ಮಾತನಾಡಿದ, “ ಸರಿ ಹಾಗಾದರೆ ನಾನು ಬಂದ ವಿಷಯ ಅವನಿಗೆ ತಿಳಿಸು, ಇನ್ನೊಮ್ಮೆ ಬರುತ್ತೇನೆ. ಮತ್ತೊಂದು ವಿಷಯ ನಿನ್ನ ಗಂಡನಿಗೆ ಹೇಳು, ಮನೆ ಬಿಟ್ಟು ಹೋಗುವಾಗ ತನ್ನ ತಲೆಯನ್ನು ಕಿಟಕಿಗೆ ನೇತು ಹಾಕಿ ಹೊರಗೆ ಹೋಗುವುದರ ಬದಲಿಗೆ ತನ್ನ ಜೊತೆಗೆ ತೆಗೆದುಕೊಂಡು ಹೋಗಲಿಕ್ಕೆ”.

