Source: Hanshan Zen poetry | ಭಾವಾನುವಾದ: ಚೇತನಾ ತೀರ್ಥಹಳ್ಳಿ
ಮಂಜಿನ ಬೆಟ್ಟಕ್ಕೆ ದಾರಿ ಎಲ್ಲಿದೆ?
ಮಂಜಿನ ಬೆಟ್ಟಕ್ಕೆ? ದಾರಿ ಎಲ್ಲಿದೆ!
ಬರೀ ಹೆಜ್ಜೆಯಿಟ್ಟರಾಗದು ನನ್ನ ಬೆನ್ನ ಹಿಂದೆ,
ಸೂರ್ಯನ ಉರಿಗೈಗೂ ಸರಿಸಲಾಗದ
ಬರ್ಫದ ದುಪ್ಪಟಿ ತೂರಿ ಸಾಗಬೇಕು,
ಅಥವಾ
ನಿನ್ನ ಕಣ್ಣು ತೆರೆಯಬೇಕು
ನನ್ನ ಎದೆಯೊಳಗೆ!
ಆಗ
ಕಂಡೀತು ದಾರಿ,
ಸಿಕ್ಕೀತು ಮಂಜಿನ ಬೆಟ್ಟ,
ನಿನಗೆ ನಾನು
ಮತ್ತು
ನೀನು.
– 3 –
ಏರಿದರೂ ಹಾಗೊಮ್ಮೆ ಮಂಜಿನಬೆಟ್ಟ ತುದಿ,
ಅರಗಲಾರದು ಬೆರಗಿನ ನೋಟ ಸರಣಿ.
ಬೆಚ್ಚುವರು ಕಂಡವರು;
ಚಂದ್ರಪಾತ್ರೆಯು ತುಂಬಿ ತುಳುಕಿ ಹೊಳೆಯುವುದಲ್ಲಿ,
ನಿಡುಸುಯ್ದು ಹಾಡುವುದು ಹಸಿರು ಹುಲ್ಲು.
ಕಾವಳವೆ ಹೂವಾಗಿ ತುಂಬುವುದು ಲೀಜಿ ಮರ,
ಬೆತ್ತಲನು ಮುಚ್ಚುವುದು ಮೋಡದೆಲೆ ದಂಡು.
ಭೋರೆಂದು ಬಾನು ಬಿರಿದು ಸುರಿಯುವುದಲ್ಲಿ,
ತಲುಪಲಾರೆ ಬಿಡು ನೀನು ತುದಿಯನೆಂದೂ!
– 4 –
ಸಾವಿರ ಸಾವಿರ ಮೋಡ, ಸಾವಿರಾರು ತೊರೆ,
ಇಂಥಲ್ಲಿ ನಾನು ಒಬ್ಬಂಟಿ ಅಲೆಮಾರಿ,
ತಿರುಗುವೆನು ದಿನವಿಡೀ ಹಸಿರು ದಿಬ್ಬಗಳ ಸುತ್ತ,
ಕಳೆಯುವೆನು ಇರುಳೆಲ್ಲ ಬಂಡೆಗಳ ನಡುವೆ.
ಶಿಶಿರ – ವಸಂತಗಳು ಬಂದು ಹೋದವೆಷ್ಟೋ
ದೂಳು ತೊಳೆದೆನ್ನ ಒಳಗು ಬೆಳಗಿ.
ಮತ್ತೇನೂ ಬೇಡವಿನ್ನು ಅನ್ನುವುದೇ ಸಗ್ಗಸವಿ,
ವಸಂತದಲಿ ಹರಿವ ನದಿಯಂತೆ ಮನ ಮೌನಿ.
– 5 –
ಎತ್ತರ, ಎತ್ತರ ತುದಿ ಶಿಖರ,
ನೋಟದ ಹರಹಿಗೆ ಮಿತಿಯೇ ಇಲ್ಲ!
ಅರಿಯರು ಯಾರೂ ನನ್ನಿರುವು ಇಲ್ಲಿ,
ಹೆಪ್ಪುಗಟ್ಟಿದ ತೊರೆ, ಒಂಟಿ ಚಂದ್ರನ ಹೊರತು.
ಈ ತೊರೆಯಲ್ಲಿ, ಚಂದ್ರ ಇರುವನೆಲ್ಲಿ?
ಅವನಿರುವನು ಸದಾ ಬಾನಿನಲ್ಲಿ.
ನನ್ನಿಂದ ಈ ಪದ್ಯ ಬರೆಸಿಕೊಂಡಿದೆ ತನ್ನ,
ಸಿಗಲಾರದು ನಿಮಗೆ ಇದರೊಳಗೆ ಧ್ಯಾನ.

