ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಮಧ್ಯಾಹ್ನದ ಹೊತ್ತಿನಲ್ಲಿ ಒಂದು ದಿನ
ತನ್ನ ಮೇಲೆ ಬಿದ್ದಿದ್ದ ಮರದ ನೆರಳಿಗೆ ಹುಲ್ಲು ಹೇಳಿತು
ಅತ್ತಾ ಇತ್ತಾ ಒನೆದಾಡುತೀಯ
ನನ್ನ ನೆಮ್ಮದಿ ಕೆಡಿಸುತೀಯ
ಸುಮ್ಮನೆ ಇರಬಾರದೇ
ನೆರಳು ಹೇಳಿತು
ನಾನಲ್ಲ ನಾನಲ್ಲ ಅತ್ತ ಇತ್ತ ಒನೆದಾಡುವುದು
ತಲೆ ಎತ್ತಿ ನೋಡು
ಗಾಳಿ ಬೀಸಿ ಮರ ತೊನೆಯುತಿದೆ
ಒಮ್ಮೆ ಆಕಾಶಕ್ಕೆ ಇನ್ನೊಮ್ಮೆ ನೆಲಕ್ಕೆ
ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ
ಹುಲ್ಲು ತಲೆ ಎತ್ತಿ ನೋಡಿತು
ಮರವನ್ನು ಮೊಟ್ಟ ಮೊದಲ ಬಾರಿಗೆ ಕಂಡಿತು
ನನಗಿಂದ ದೊಡ್ಡ ಹುಲ್ಲು ಅಲ್ಲಿ ಮೇಲೆ ಬೆಳೆದಿದೆ
ಅಂದುಕೊಂಡು ಮಾತಿಲ್ಲದೆ ಸುಮ್ಮನಾಯಿತು

