ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬೇಸಗೆಯದೊಂದು ದಿನ
ನೀರಲುಗದ ಕೊಳದ ತಡಿಯಲಿ
ಆನಂದ ದುಃಖ ಕೂತು ಮಾತಾಡುತಿದ್ದವು
ಈ ಲೋಕದ ಚೆಲುವು
ಗಿರಿಯ ಮೇಲಿನ ಕಾಡಿನಲಿ ಕಾಣುವ ದಿನ ದಿನದ ಬೆರಗು
ಹಗಲಲಿ ಸಂಜೆಯಲಿ ಕೇಳುವ ಹಾಡುಗಳ ಕುರಿತು ಹೇಳಿತು ಆನಂದ`
ಆನಂದ ಹೇಳಿದುದೆಲ್ಲ ನಿಜವೆಂದೊಪ್ಪಿತು ದುಃಖ
ಕಾಲದ ಚೆಲುವಿನ ಮಾಟ ದುಃಖಕೆ ತಿಳಿದಿತ್ತು
ಹೊಲ ಗದ್ದೆಗಳ ಚೆಲುವನು ದುಃಖ ಬಾಯಿತುಂಬ ಬಣ್ಣಿಸಿತು
ಇಬ್ಬರೂ ಮಾತಾಡುತಾ
ಒಬ್ಬರು ಹೇಳಿದ ಮಾತನು ಇನ್ನೊಬ್ಬರು ನಿಜವೆಂದು ಒಪ್ಪುತಾ
ಬಹಳ ಹೊತ್ತು ಹಾಗೇ ಕೂತಿದ್ದರು
ಕೊಳದ ಆ ಬದಿಯಲಿದ್ದರು ಇಬ್ಬರು ಬೇಟೆಗಾರರು
ಕೊಳದ ಈ ದಂಡೆಯಲಿದ್ದ ಆನಂದ ದುಃಖವನು ನೋಡಿದರು
ಅಲ್ಲಿ ಕೂತಿದಾರಲ್ಲಾ ಇಬ್ಬರು ಯಾರಿರಬಹುದು
ಒಬ್ಬನು ಕೇಳಿದ
ಇಬ್ಬರಿದ್ದಾರಾ? ನನಗೆನೋ ಒಬ್ಬರೇ ಕಾಣುತಿರುವುದು
ಇನ್ನೊಬ್ಬನು ಹೇಳಿದ.
ಇಬ್ಬರಿದ್ದಾರೆ ಅಂದ ಒಬ್ಬ
ಇಲ್ಲ ನೀರಿನಲ್ಲಿ ಒಂದೇ ನೆರಳಿದೆ ಇರುವುದು ಒಬ್ಬನೇ
ಅಂದ ಇನ್ನೊಬ್ಬ
ಉಹ್ಞೂ ಇಬ್ಬರಿದಾರೆ ನೀರಿನಲ್ಲಿ ಎರಡು ನೆರಳಿವೆ ನೋಡು
ಅಂದ ಒಬ್ಬ
ನನಗೆ ಕಾಣುವುದು ಒಂದೇ ಅಂದ ಇನ್ನೊಬ್ಬ
ಇಬ್ಬರೂ ಸ್ಪಷ್ಟವಾಗಿ ಕಾಣುತಿದಾರೆ ಅಂದ ಒಬ್ಬ
ಇವತ್ತಿಗೂ ಕೂಡ
ಬೇಟೆಗಾರರಲ್ಲಿ ಒಬ್ಬಾತ ಅಲ್ಲಿರುವುದು ಇಬ್ಬರು ಅನ್ನುತಾನೆ
ನನ್ನ ಗೆಳೆಯನಿಗೆ ಕಣ್ಣು ಸರಿಯಾಗಿ ಕಾಣದು ಮಂಜು ಅನ್ನುತಾನೆ ಇನ್ನೊಬ್ಬ

