ಕಾರ್ನಾಡರು ಬೇಂದ್ರೆಯವರ ಸಾಕ್ಷ್ಯ ಚಿತ್ರದ ಚಿತ್ರೀಕರಣ ಮಾಡ್ತಿದ್ದ ಸಂದರ್ಭದ ಸ್ವಾರಸ್ಯ… । ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಗಿರೀಶ್ ಕಾರ್ನಾಡರು ಬೇಂದ್ರೆಯವರ ಸಾಕ್ಷ್ಯ ಚಿತ್ರದ ಚಿತ್ರೀಕರಣ ಮಾಡ್ತಾ ಇರ್ತಾರೆ. ಚಿತ್ರೀಕರಣ ಬೇಂದ್ರೆಯವರ ಸಾಧನೆಕೇರಿಯ ಮನೆಯ ಅಂಗಳದಲ್ಲಿ ನಡೆದಿರ್ತದ. ಬಹುಶಃ ಆ ಸಾಕ್ಷ್ಯ ಚಿತ್ರದ ಛಾಯಾಗ್ರಹಣದ ಹೊಣೆ ಹೊತ್ತವರು ಗೋವಿಂದ ನಿಹಲಾನಿ.
ಗಿರೀಶ್ ರ ನಿರ್ದೇಶನ ದಂತೆ ಬೇಂದ್ರೆ ನಡೆದುಕೊಳ್ಳುತ್ತ ಶೂಟಿಂಗ್ ಸಾಂಗವಾಗಿ ನಡೆಯುತ್ತಿದ್ದಾಗ, ಒಂದು ಮಂಗ ಬಂದು ಅಲ್ಲಿಯ ಮರದ ಮೇಲೆ ಕುಳಿತುಕೊಳ್ಳುತ್ತದೆ. ಬೇಂದ್ರೆ ಮಂಗನ ಜೊತೆ ಮಾತನಾಡುತ್ತಿರುವಂತೆ, ಅದಕ್ಕೆ ಹಣ್ಣು ಕೊಡುವಂತೆ ಗಿರೀಶ್ ದೃಶ್ಯವನ್ನ ಚಿತ್ರೀಕರಣ ಮಾಡುತ್ತಾರೆ. ನಂತರ ಮಂಗ ಅಲ್ಲಿಂದ ಜಿಗಿದು ಇನ್ನೊಂದು ಕಡೆ ಹೋಗಿ ಕುಳಿತುಕೊಳ್ಳುತ್ತದೆ.
ಏನೋ ತಾಂತ್ರಿಕ ತೊಂದರೆಯಿಂದಾಗ ದೃಶ್ಯ ಸರಿ ಬರಲಿಲ್ಲ, ಮತ್ತೊಮ್ಮೆ ಆ ದೃಶ್ಯ ಶೂಟ್ ಮಾಡಬೇಕು ಅಂತ, ತಂಡದವರೆಲ್ಲ ಮಂಗನಿಗೆ ಮತ್ತೆ ಆ ಮರದ ಮೇಲೆ ಬಂದು ಕುಳಿತುಕೊಳ್ಳಲು ಆಮಿಷ ಒಡ್ಡಲಿಕ್ಕೆ ಶುರು ಮಾಡ್ತಾರೆ. ಆದರೆ ಏನು ಮಾಡಿದರೂ ಮಂಗ ಇವರ ಮಾತು ಕೇಳುವುದಿಲ್ಲ.
ಈ ಪ್ರಸಂಗವನ್ನು ಸ್ವಲ್ಪ ಹೊತ್ತು ಸಾವಧಾನವಾಗಿ ಗಮನಿಸಿದ ಬೇಂದ್ರೆಯವರು ಕೊನೆಗೆ ತಾಳ್ಮೆ ಕಳೆದುಕೊಂಡು, “ ಏಯ್ ಗಿರೀಶಾ, ನೀ ಹೇಳಿದಂಗ ಕೇಳ್ಲಿಕ್ಕೆ ಆ ಮಂಗ್ಯಾ ಏನು ಬೇಂದ್ರೆ ಅಂತ ತಿಳಕೊಂಡಿ?” ಅಂತ ಗಿರೀಶ್ ರನ್ನ ದಬಾಯಿಸುತ್ತಾರೆ.

