ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಖಡಾ ಖಂಡಿತವಾದಿ ಮನುಷ್ಯರನ್ನು ಕರೆಕ್ಟ್ ಮಾಡುವುದು ಬಹಳ ಕಷ್ಟ ಆದರೆ ಅವರಿಂದ ಕೂಡ ವಿಸ್ತಾರವಾದ ಸತ್ಯವನ್ನು ಅನ್ವೇಷಣೆ ಮಾಡಿಸಬಲ್ಲಂಥ ದಾರಿ ಇದೆ. ಅದು ಯಾವುದೆಂದರೆ ಅವರ ಅಂತರ್ ಶಕ್ತಿಗೆ ಒಳಗಿನಿಂದ ಸವಾಲು ಹಾಕಿ ಅವರು ಬೆಳೆಯುವಂತೆ, ಬದಲಾಗುವಂತೆ ಪ್ರಚೋದಿಸುವುದು. ಆಗ ಅವರು ದ್ವಂದ್ವದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆಗ ನೀವು ಅವರಿಗೆ ಸಹಾಯ ಹಸ್ತ ನೀಡಿ ಹೊರಗೆ ಎಳೆಯಿರಿ. ಅವರು ತಮ್ಮನ್ನು ಹೊಸ ನಿಜ ಆಯಾಮದಲ್ಲಿ ನೋಡಿಕೊಳ್ಳುವಂತೆ ಮಾಡಿರಿ. ಅವರು ಜನರಿಗೆ ಏನು ಮಾಡುತ್ತಾರೋ ಅದು ಅವರಿಗೆ ಕೂಡ ಅನ್ವಯಿಸುತ್ತದೆ ಎನ್ನುವುದು ಅವರಿಗೆ ಗೊತ್ತಾಗಲಿ.
ನನಗೊಂದು ಕಥೆ ನೆನಪಾಗುತ್ತಿದೆ.
ಒಮ್ಮೆ ದರವೇಶಿಯೊಬ್ಬ ತನ್ನ ತೋಟದಿಂದ ಅಂಜೂರದ ಹಣ್ಣಿಗಳನ್ನು ಕದಿಯುವುದನ್ನ ನಸ್ರುದ್ದೀನ್ ಗಮನಿಸಿದ.
ಓಡಿ ಹೋಗಿ ಆ ಫಕೀರನನ್ನು ಹಿಡಿದುಕೊಂಡು ನಸ್ರುದ್ದೀನ್ ಪ್ರಶ್ನೆ ಮಾಡಿದ, “ನೀನು ಏನು ಮಾಡುತ್ತಿರುವೆ ಎನ್ನುವುದು ನಿನಗೇನಾದರೂ ಗೊತ್ತಿದೆಯಾ?”
“ನಾನು ಮಾಡುತ್ತಿರುವುದಲ್ಲಿ ತಪ್ಪೇನಿಲ್ಲ. ನಾನು ಅಲ್ಲಾಹ್ ನ ಪ್ರೀತಿಯ ಸೇವಕ. ಅಲ್ಲಾಹ್ ಗಾರ್ಡನ್ ನಲ್ಲಿ, ಅಲ್ಲಾಹ್ ನ ಮರದಿಂದ ಹಣ್ಣು ಕಿತ್ತು ಅಲ್ಲಾಹ್ ನ ಸೇವಕನ ಹೊಟ್ಚೆ ತುಂಬಿಸುತ್ತಿರುವೆ. ಈ ಹಣ್ಣುಗಳು ಅಲ್ಲಾಹನ ಸೇವಕರಿಗೆ ಸಲ್ಲಬೇಕು” ಆ ದರವೇಶಿ ಅತ್ಯಂತ ಆತ್ಮ ವಿಶ್ವಾಸದಿಂದ ಉತ್ತರಿಸಿದ.
“ ಓಹ್ ಹೌದಾ ಹಾಗಾದರೆ ತಡೀ ಈಗ ನೋಡು” ಎನ್ನುತ್ತ ಮುಲ್ಲಾ ನಸ್ರುದ್ದೀನ್ ಆ ಫಕೀರನನ್ನು ಗಟ್ಟಿ ಕೋಲಿನಿಂದ ಒಂದೇ ಸವನೇ ಬಾರಿಸತೊಡಗಿದ.
“ನಂಬಿಕೆ ದ್ರೋಹಿ, ಅಲ್ಲಾಹನ ಸೇವಕನ ಹಲ್ಲೆ ಮಾಡುತ್ತಿದ್ದೀಯ? ಸಂತನೊಬ್ಬನ ಮೇಲೆ ಕೈ ಮಾಡುವಷ್ಟು ಧೈರ್ಯವೇ ನಿಮಗೆ? “ ದರವೇಶಿ ಕಿರುಚಿಕೊಂಡ.
“ನಾನು ಮಾಡುತ್ತಿರುವುದರಲ್ಲಿ ತಪ್ಪೇನಿಲ್ಲ. ನಾನು ಅಲ್ಲಾಹನ ಗಾರ್ಡನ್ ನ ಕಾಪಾಡಲು, ಅಲ್ಲಾಹನ ಕೋಲಿನಿಂದ, ಅಲ್ಲಾಹ ನ ಮರದ ಕೆಳಗೆ ನಿಂತು ದರವೇಶಿಯೊಬ್ಬನನ್ನು ಹೊಡೆಯುತ್ತಿದ್ದೇನೆ. ಅಲ್ಲಾಹ್ ನನ್ನ ಮೇಲೆ ಇಟ್ಟ ನಂಬಿಕೆಯಂತೆ ನಾನು ನಡೆಯುತ್ತಿದ್ದೇನೆ”. ನಸ್ರುದ್ದೀನ್ ಉತ್ತರಿಸಿದ.
ಮುಲ್ಲಾನ ಮಾತು ಕೇಳಿಸುತ್ತಿದ್ದಂತೆಯೇ ದರವೇಶಿಗೆ ಜ್ಞಾನೋದಯವಾಯಿತು.

