ಸರಿ ತಪ್ಪುಗಳ ಗೊಂದಲ (Non Judgement) : ಓಶೋ 365 Day#8

ಯಾವಾಗ ನೀವು ಜಡ್ಜ್ ಮಾಡುತ್ತೀರೋ ಆಗಲೇ ವಿಭಜನೆ ಶುರು ಆಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ಗೆಳೆಯನೊಂದಿಗೆ ಗಾಢ ಸಂವಾದದಲ್ಲಿ ತೊಡಗಿರುವಾಗ ಅಚಾನಕ್ ಆಗಿ ನಿಮಗೆ ಮಾತು ನಿಲ್ಲಿಸಬೇಕು ಅನಿಸುತ್ತದೆ, ಮಾತು ಮುಂದುವರೆಸಲು ನಿಮಗೆ ಸುತರಾಂ ಮನಸ್ಸಿಲ್ಲ. ಸಂವಾದದ ನಡುವೆಯೇ ನಿಮಗೆ, ಸಾಕು ಈ ಮಾತುಕತೆ ಅನಿಸುತ್ತದೆ. ಹೀಗೆ ಅನಿಸಿದ ತಕ್ಷಣ, ಮುಂದೆ ಒಂದು ಮಾತನ್ನೂ ಆಡಬೇಡಿ, ಏಕೆಂದರೆ ಹಾಗೆ ಮಾಡುವುದು ಪ್ರಕೃತಿಗೆ ವಿರುದ್ಧ.

ಆದರೆ ನಂತರ ಜಡ್ಜಮೆಂಟ್ ಎದುರಾಗುತ್ತದೆ. ಸಂವಾದದ ನಡುವೆಯೇ ಮಾತು ನಿಲ್ಲಿಸಿದರೆ  ಜನ ಏನೆನ್ನಬಹುದು ಎಂದು ನಿಮಗೆ ಮುಜುಗರವಾಗುತ್ತದೆ. ತಕ್ಷಣ ನೀವು ಸುಮ್ಮನಾಗಿಬಿಟ್ಟರೆ, ಜನರಿಗೆ ಏನೂ ಅರ್ಥವಾಗುವುದಿಲ್ಲ. ಹಾಗಾಗಿ ನೀವು ಏನೋ ಮ್ಯಾನೇಜ್ ಮಾಡಿ ಆಡುತ್ತಿರುವ ಮಾತು ಪೂರ್ಣ ಮಾಡಿಬಿಡುತ್ತೀರಿ. ಮಾತುಕತೆಯಲ್ಲಿ ಆಸಕ್ತಿ ಇರುವಂತೆ ನಾಟಕ ಮಾಡಿ ಕೊನೆಗೆ ನೀವು ಮಾತುಕತೆಯಿಂದ ತಪ್ಪಿಸಿಕೊಂಡುಬಿಡುತ್ತೀರಿ. ನಿಮ್ಮ ಈ ವರ್ತನೆ ನಿಮಗೆ ದುಬಾರಿಯಾಗಿ ಪರಿಣಮಿಸಬಹುದು, ನೀವು ಹೀಗೆ ಮಾಡುವ ಅವಶ್ಯಕತೆಯಿಲ್ಲ.  ಸಂವಾದ ಮುಂದುವರೆಸಲು ನಿಮಗೆ ಯಾವ ವಿಷಯ ಹೊಳೆಯುತ್ತಿಲ್ಲವೆಂದು ಕಾರಣ ನೀಡಿ,  ನೀವು ಮಾತುಕತೆಯಿಂದ ಹಿಂದೆ ಸರಿಯಬಹುದು. ನಿಮ್ಮ ಗೆಳೆಯನ ಕ್ಷಮೆ ಯಾಚಿಸಬಹುದು.

ಸ್ವಲ್ಪ ದಿನ ಹೀಗೆ ಮಾಡುವುದು ನಿಮಗೆ ಕಠಿಣ ಅನಿಸಬಹುದು. ಆದರೆ ನಂತರ ನಿಧಾನವಾಗಿ ಜನ ನಿಮ್ಮನ್ನ ಅರ್ಥ ಮಾಡಿಕೊಳ್ಳಲು ಶುರು ಮಾಡುತ್ತಾರೆ. ಮಾತಿನ ಮಧ್ಯೆ ಹೀಗೆ ಸುಮ್ಮನಾಗಿಬಿಡುವುದು ಒಳ್ಳೆಯದಲ್ಲ ಎಂದು ನಿಮ್ಮನ್ನು ನೀವು ಜಡ್ಜ್ ಮಾಡಿಕೊಳ್ಳಬೇಡಿ. ಎಲ್ಲವೂ ಒಳ್ಳೆಯದೇ. ಆಳ ಒಪ್ಪಿಕೊಳ್ಳುವಿಕೆಯಲ್ಲಿ ಎಲ್ಲವೂ ನಿಮಗೆ ವರವಾಗಿ ಪರಿಣಮಿಸುತ್ತವೆ. ನಿಮ್ಮ ಇಡೀ ಅಸ್ತಿತ್ವಕ್ಕೆ ಸುಮ್ಮನಾಗುವ ಮನಸ್ಸಾಯಿತು. ಹಾಗಾಗಿ ನೀವು  ನಿಮ್ಮ ಇಡೀ ಅಸ್ತಿತ್ವದ ಮಾತು ಕೇಳಿ, ನಿಮ್ಮ ಪೂರ್ಣತೆಯ ನೆರಳಿನಂತೆ ವರ್ತನೆ ಮಾಡಿ. ಅದು ಕರೆದುಕೊಂಡು ಹೋದಲ್ಲಿ ಅದನ್ನು ಹಿಂಬಾಲಿಸಿ. ಏಕೆಂದರೆ ನಿಮಗೆ ಬೇರೆ ಯಾವ ಪ್ರತ್ಯೇಕ ಗುರಿಗಳಿಲ್ಲ. ಆಗ ನಿಮಗೆ ನಿಮ್ಮ ಸುತ್ತ ಅದ್ಭುತ ಹಗುರಾಗುವಿಕೆಯ (relaxation) ಅನುಭವವಾಗತೊಡಗುತ್ತದೆ.

ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ  ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ.

ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು

ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ.

ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.


ನೆನ್ನೆಯದು ಇಲ್ಲಿದೆ: https://aralimara.com/2025/01/25/osho-449/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.