ವಿಮರ್ಶಾತ್ಮಕ ಮನಸ್ಸು ಯಾವಾಗಲೂ ಅಪಾಯಕಾರಿ ಎಂದು ನಾನು ಹೇಳುತ್ತಿಲ್ಲ. ನೀವು ವಿಜ್ಞಾನದ ಪ್ರೊಜೆಕ್ಟ್ ಮೇಲೆ ಕೆಲಸ ಮಾಡುತ್ತಿರುವಿರಾದರೆ ನೀವು ಕ್ರಿಟಿಕಲ್ ಆಗಲೇ ಬೇಕಾಗುತ್ತದೆ, ಆಗ ಅದು ಅಪಾಯಕಾರಿ ಅಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ವಿಜ್ಞಾನದ ಜೊತೆ ಕೆಲಸ ಮಾಡುತ್ತಿರುವಿರಾದರೆ ವಿಮರ್ಶಾತ್ಮಕ ಮನಸ್ಸು ಬಹಳ ಅವಶ್ಯಕ. ಆದರೆ ಇದೇ ಕ್ರಿಟಿಕಲ್ ಮೈಂಡ್ ನೀವು ನಿಮ್ಮ ಆಂತರ್ಯ (interiority) ಮತ್ತು ನಿಮ್ಮ ಸ್ವಂತದ ವ್ಯಕ್ತಿನಿಷ್ಠತೆಯನ್ನು (subjectivity) ತಲುಪಲು ಪ್ರಯತ್ನಿಸುತ್ತಿರುವಾಗ ತಡೆಗೋಡೆಯಾಗಿಬಿಡುತ್ತದೆ. ವಸ್ತುನಿಷ್ಠ ( objective) ಜಗತ್ತಿನ ಜೊತೆ ಕ್ರಿಟಿಕಲ್ ಆಗಿರುವುದು ಪರ್ಫೆಕ್ಟ್. ಇದರ ಹೊರತಾಗಿ ವಿಜ್ಞಾನಕ್ಕೆ ಜಾಗ ಇಲ್ಲ ; ಆದರೆ ಇದನ್ನು ಒಳಗೊಂಡು ಧಾರ್ಮಿಕತೆ ಸಾಧ್ಯವೇ ಇಲ್ಲ. ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಅವಶ್ಯಕ. ವಸ್ತುನಿಷ್ಠವಾಗಿರುವಾಗ ಕ್ರಿಟಿಕಲ್ ಆಗುವ ಮತ್ತು ವ್ಯಕ್ತಿನಿಷ್ಠವಾಗಿರುವಾಗ ವಿಮರ್ಶಾತ್ಮಕತೆಯನ್ನು ಬದಿಗಿರಿಸುವ ಕಲೆ ಮನುಷ್ಯನಿಗೆ ಗೊತ್ತಿರಬೇಕು. ಕ್ರಿಟಿಕಲ್ ಮೈಂಡ್ ನ ಒಂದು ಸಾಧನವಾಗಿ ಬಳಸಬೇಕೇ ಹೊರತು ಅದು ನಮಗೆ ಆದರ್ಶದ ಗೀಳಾಗಬಾರದು. ಇದನ್ನು ಬಳಸುವ ಅಥವಾ ಬಳಸದೇ ಇರುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಬೇಕು.
ಕ್ರಿಟಿಕಲ್ ಮೈಂಡ್ ನೊಂದಿಗೆ ಅಂತರಂಗದ ಜಗತ್ತನ್ನು ಪ್ರವೇಶಿಸುವುದು ಸಾಧ್ಯವಾಗುವುದಿಲ್ಲ. ನಂಬಿಕೆ ಹೇಗೆ ವಿಜ್ಞಾನ ಕ್ಷೇತ್ರದಲ್ಲಿ ತಡೆಗೋಡೆಯೋ ಹಾಗೆಯೇ ಇಲ್ಲಿ ಅನುಮಾನ ಅಡ್ಡಗಾಲು. ನಂಬಿಕೆಯ ಮನುಷ್ಯ ವಿಜ್ಞಾನದ ಜಗತ್ತಿನಲ್ಲಿ ಬಹಳ ದೂರ ಹೋಗಲಾರ. ಆದ್ದರಿಂದಲೇ, ಧಾರ್ಮಿಕತೆ ಜಗತ್ತಿನಲ್ಲಿ ಹೆಚ್ಚು ಪ್ರಧಾನವಾಗಿದ್ದಾಗ ಅದು ಹೆಚ್ಚು ಅವೈಜ್ಞಾನಿಕವಾಗಿಯೇ ಉಳಿದಿತ್ತು. ಚರ್ಚೆ ಮತ್ತು ವಿಜ್ಞಾನದ ನಡುವೆ ಹುಟ್ಟಿಕೊಂಡ ಬಿಕ್ಕಟ್ಟು ಆಕಸ್ಮಿಕವೇನಲ್ಲ ; ಅದು ಬಹಳ ಮೂಲಭೂತವಾದದ್ದು. ನಿಜದಲ್ಲಿ ಅದು ವಿಜ್ಞಾನ ಮತ್ತು ಧರ್ಮದ ನಡುವಿನ ಬಿಕ್ಕಟ್ಟು ಆಗಿರಲಿಲ್ಲ ; ಅದು ಇರುವಿಕೆಯ ( being ) ಎರಡು ವಿಭಿನ್ನ ಆಯಾಮಗಳ ನಡುವಿನ ಬಿಕ್ಕಟ್ಟು ಆಗಿತ್ತು, ಆ ಎರಡು ಆಯಾಮಗಳು ವಸ್ತು ನಿಷ್ಠತೆ (objectivity) ಮತ್ತು ವ್ಯಕ್ತಿ ನಿಷ್ಠತೆ ( subjectivity). ಈ ಎರಡೂ ಸಂಗತಿಗಳು ಕೆಲಸ ಮಾಡುವ ರೀತಿಯೇ ವಿಭಿನ್ನ.
ಜಪಾನ್ ನ ಮಹತ್ವದ ಝೆನ್ ಸಾಧಕರಲ್ಲಿ ಮಾಸ್ಟರ್ ಬಾಂಕಿಯೂ ಒಬ್ಬ. ವರ್ಷಗಟ್ಟಲೆ ಋಷಿಯಂತೆ ಬದುಕಿದ್ದ ಬಾಂಕಿ, ತನಗೆ ಜ್ಞಾನೋದಯವಾದ ಮೇಲೂ , ಝೆನ್ ಸಂಸ್ಥಾನಗಳ ಗೌರವ ಪದವಿಗಳನ್ನು ತಿರಸ್ಕರಿಸಿ, ಅಡುಗೆ ಮನೆಯಲ್ಲಿ ಬಾಣಸಿಗರಿಗೆ ಸಹಾಯ ಮಾಡುತ್ತ, ತನ್ನ ಶಿಷ್ಯರಿಗೆ ಪಾಠ ಹೇಳಿಕೊಂಡು ಸಾಮಾನ್ಯರಂತೆ ಬದುಕಿದ್ದ. ಬಾಂಕಿಯ ಅಪಾರ ಜ್ಞಾನದ ಅರಿವಿದ್ದ ಜನ ದೂರದ ಊರುಗಳಿಂದ ಅವನ ಮಾತು ಕೇಳಲು ಬರುತ್ತಿದ್ದರು.
ಹೀಗಿರುವಾಗ ಒಮ್ಮೆ ಅವನ ಶಿಷ್ಯನೊಬ್ಬ ಕಳ್ಳತನ ಮಾಡುವಾಗ ಉಳಿದ ಶಿಷ್ಯರ ಕೈಗೆ ಸಿಕ್ಕು ಬಿದ್ದ. ಒಬ್ಬ ಯುವ ಸನ್ಯಾಸಿ ಕಳ್ಳ ಶಿಷ್ಯನನ್ನು ಎಳೆದುಕೊಂಡು ಬಂದು ಬಾಂಕಿಯ ಮುಂದೆ ನಿಲ್ಲಿಸಿದ. ಆ ಕಳ್ಳ ಶಿಷ್ಯನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವುದು ಉಳಿದ ಎಲ್ಲರ ಅಪೇಕ್ಷೆಯಾಗಿತ್ತು. ಆದರೆ ಮಾಸ್ಟರ್ ಬಾಂಕಿ ತನ್ನ ಶಿಷ್ಯರ ದೂರನ್ನು ನಿರ್ಲಕ್ಷ ಮಾಡಿದ.
ಕೆಲ ದಿನಗಳ ನಂತರ ಕಳ್ಳ ಶಿಷ್ಯ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ. ಈ ಬಾರಿಯೂ ಬಾಂಕಿ ಕಳ್ಳನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವ ಇತರೆ ಶಿಷ್ಯರ ಫಿರ್ಯಾದನ್ನು ವಜಾ ಮಾಡಿದ.
ಬಾಂಕಿಯ ಈ ವರ್ತನೆಯಿಂದ ಅಸಮಾಧಾನಗೊಂಡ ಶಿಷ್ಯರೆಲ್ಲ ಸೇರಿ ಮಾಸ್ಟರ್ ಬಾಂಕಿಗೊಂದು ಪತ್ರ ಬರೆದರು. ಆ ಕಳ್ಳನನ್ನು ಆಶ್ರಮ ಬಿಟ್ಟು ಹೊರಗೆ ಹಾಕದಿದ್ದರೆ, ತಾವೆಲ್ಲ ಆಶ್ರಮ ತೊರೆದು ಹೋಗುವುದಾಗಿ ಬೆದರಿಕೆ ಹಾಕಿದ್ದರು.
ಪತ್ರ ಓದಿದ ಮಾಸ್ಟರ್ ಬಾಂಕಿ ತನ್ನ ಎಲ್ಲ ಶಿಷ್ಯರನ್ನೂ ಸುತ್ತ ಕೂರಿಸಿಕೊಂಡು ಮಾತನಾಡತೊಡಗಿದ.
“ ನೀವೆಲ್ಲ ಜ್ಞಾನಿಗಳಿದ್ದೀರಿ, ನಿಮಗೆ ಸರಿ ತಪ್ಪುಗಳ ಅರಿವಾಗುತ್ತದೆ. ಬೇಕಾದರೆ, ನೀವು ಬೇರೆ ಆಶ್ರಮಕ್ಕೆ ಹೋಗಿ ಅಭ್ಯಾಸ ಮುಂದುವರೆಸಬಹುದು. ಆದರೆ ನೀವು ಯಾರನ್ನ ಕಳ್ಳ ಎಂದು ದೂಷಿಸುತ್ತಿದ್ದೀರೋ ಆ ಪಾಪದ ಮನುಷ್ಯನಿಗೆ ಸರಿ – ತಪ್ಪು ಗಳು ಗೊತ್ತಾಗುವುದಿಲ್ಲ. ನಾನೂ ಅವನನ್ನು ಆಶ್ರಮದಿಂದ ಹೊರಗೆ ಕಳುಹಿಸಿ ಬಿಟ್ಟರೆ, ಅವನಿಗೆ ಬೇರೆ ಯಾರು ಹೇಳಿಕೊಡುತ್ತಾರೆ? ಅವನಿಗೆ ಸರಿ ತಪ್ಪುಗಳ ನಡುವೆ ತಾರತಮ್ಯ ಮಾಡುವುದು ಗೊತ್ತಾಗುವ ತನಕ ನಾನು ಅವನನ್ನು ಬಿಟ್ಟು ಕೊಡುವುದಿಲ್ಲ. “
ಮಾಸ್ಟರ್ ಬಾಂಕಿಯ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ, ಕಳ್ಳ ಶಿಷ್ಯನ ಕಣ್ಣುಗಳು ತುಂಬಿ ಬಂದವು. ಆ ಕ್ಷಣದಲ್ಲಿಯೇ ಅವನ ಕಳ್ಳತನದ ಚಟ ಕರಗಿ ಹೋಗಿ ಬಿಟ್ಟಿತು.
ನೆನ್ನೆಯದು ಇಲ್ಲಿದೆ: https://aralimara.com/2025/01/27/osho-451/


[…] ನೆನ್ನೆಯದ್ದು ಇಲ್ಲಿದೆ: https://aralimara.com/2025/01/28/osho-452/ […]
LikeLike