ಕೋಪದಿಂದ ಸೃಜನಶೀಲತೆಯತ್ತ ಶಿಫ್ಟ್ ಆಗಿ, ಆಗ ತಕ್ಷಣ ನಿಮ್ಮೊಳಗೆ ಒಂದು ದೊಡ್ಡ ಬದಲಾವಣೆ ಹುಟ್ಟಿಕೊಳ್ಳುವುದನ್ನು ನೀವು ಗಮನಿಸುವಿರಿ. ನಾಳೆ ಅವೇ ಸಂಗತಿಗಳು ನಿಮ್ಮ ಸಿಟ್ಟಿನ ಕಾರಣಗಳಾಗಿರುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಿಟ್ಟಿನ ಕಾಯಿಲೆಯಿಂದ ಬಳಲುತ್ತಿರುವ ೧೦೦ ಜನರಲ್ಲಿ ೫೦ ಜನ, ತಮ್ಮ ಅತಿಯಾದ ಸೃಜನಶೀಲ ಸಾಮರ್ಥ್ಯವನ್ನು ಯಾವುದಕ್ಕೂ ಉಪಯೋಗಿಸಲಾರದೇ ತಮ್ಮೊಳಗೇ ಅದುಮಿಟ್ಟುಕೊಂಡವರು. ವಾಸ್ತವದಲ್ಲಿ ಅವರ ಸಮಸ್ಯೆ ಕೋಪ ಅಲ್ಲ, ಆದರೆ ತಮ್ಮ ಬದುಕಿನುದ್ದಕ್ಕೂ ಅವರು ಹಾಗೆಂದು ತಿಳಿದುಕೊಂಡಿದ್ದಾರೆ. ಒಮ್ಮೆ ಈ ಸಮಸ್ಯೆಯನ್ನು ಸರಿಯಾಗಿ ಡೈಗ್ನೊಸ್ಡ್ ಮಾಡಿಬಿಟ್ಟರೆ, ಅರ್ಧ ಸಮಸ್ಯೆ ಆಗಲೇ ಪರಿಹಾರವಾದಂತೆ.
ನಿಮ್ಮ ಎಲ್ಲ ಸಾಮರ್ಥ್ಯಗಳನ್ನು ಸೃಜನಶೀಲತೆಯಲ್ಲಿ ತೊಡಗಿಸಿಕೊಳ್ಳಿ. ಕೋಪ ಒಂದು ಸಮಸ್ಯೆ ಎನ್ನುವುದನ್ನ ಮರೆತುಬಿಡಿ ; ಅದನ್ನು ನಿರ್ಲಕ್ಷ ಮಾಡಿಬಿಡಿ. ನಿಮ್ಮ ಎಲ್ಲ ಸಾಮರ್ಥ್ಯವನ್ನು ಕ್ರಿಯೇಟಿವಿಟಿಯತ್ತ ತೆಗೆದುಕೊಂಡು ಹೋಗಿ. ನೀವು ಯಾವುದನ್ನು ಪ್ರೀತಿಸುತ್ತೀರೋ ಅದರಲ್ಲಿ ನಿಮ್ಮನ್ನು ನೀವು ಸುರಿದುಕೊಳ್ಳಿ. ಕೋಪವನ್ನು ನಿಮ್ಮ ಸಮಸ್ಯೆ ಮಾಡಿಕೊಳ್ಳುವುದರ ಬದಲಾಗಿ, ಕ್ರಿಯೇಟಿವಿಟಿ ನಿಮ್ಮ ಧ್ಯಾನದ ಕೇಂದ್ರವಾಗಲಿ.
ಕೋಪದಿಂದ ಸೃಜನಶೀಲತೆಯತ್ತ ಶಿಫ್ಟ್ ಆಗಿ, ಆಗ ತಕ್ಷಣ ನಿಮ್ಮೊಳಗೆ ಒಂದು ದೊಡ್ಡ ಬದಲಾವಣೆ ಹುಟ್ಟಿಕೊಳ್ಳುವುದನ್ನು ನೀವು ಗಮನಿಸುವಿರಿ. ನಾಳೆ ಅವೇ ಸಂಗತಿಗಳು ನಿಮ್ಮ ಸಿಟ್ಟಿನ ಕಾರಣಗಳಾಗಿರುವುದಿಲ್ಲ, ಏಕೆಂದರೆ ನಿಮ್ಮ ಎನರ್ಜಿ ಈಗ ಚಲನಶೀಲವಾಗಿದೆ. ಅದು ತನ್ನನ್ನು ತಾನು ಆನಂದಿಸುತ್ತಿದೆ, ತನ್ನ ಸ್ವಂತದ ಡಾನ್ಸ್ ನಲ್ಲಿ ಖುಶಿಯನ್ನು ಕಾಣುತ್ತಿದೆ. ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಯಾರು ತಾನೇ ಕೇರ್ ಮಾಡುತ್ತಾರೆ?
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಬಳಿ ಹೋಗಿ ಅವರ ಸಲಹೆ ಕೇಳಿದ.
“ಮಾಸ್ಟರ್, ನನ್ನ ಸಿಟ್ಟು ಹತೋಟಿಗೆ ಸಿಗುತ್ತಿಲ್ಲ, ಏನಾದರೂ ಉಪಾಯ ಹೇಳಿ “
ಮಾಸ್ಟರ್ : ಹಂ, ಇದೇನೋ ವಿಚಿತ್ರವಾಗಿದೆಯಲ್ಲ, ಎಲ್ಲಿ ಒಮ್ಮೆ ನಿನ್ನ ಸಿಟ್ಟು ತೋರಿಸು, ಹೇಗಿದೆ ನೋಡೋಣ.
ಶಿಷ್ಯ : ಆದರೆ ಮಾಸ್ಟರ್, ನನಗೀಗ ಸಿಟ್ಟು ಬಂದಿಲ್ಲ, ಹೇಗೆ ತೋರಿಸಲಿ?
ಮಾಸ್ಟರ್ : ಹಾಗಾದ್ರೆ ಯಾವಾಗ ತೋರಸ್ತೀಯಾ?
ಶಿಷ್ಯ : ಅಯ್ಯೋ ಅದು ಹಾಗೆ ಹೇಳಕ್ಕಾಗಲ್ಲ, ಅಚಾನಕ್ ಆಗಿ ಬರತ್ತೆ.
ಮಾಸ್ಟರ್ : ಹಾಗಾದ್ರೆ ಅದು ನಿನ್ನ ಸ್ವಂತದ್ದಲ್ಲ. ಸ್ವಂತದ್ದಾಗಿದ್ರೆ ಕೇಳಿದಾಗೆಲ್ಲ ನೀನು ಅದನ್ನ ನನಗೆ ತೋರಿಸಬಹುದಾಗಿತ್ತು. ಅದು ಹುಟ್ಟಿನಿಂದ ಬಂದದ್ದಲ್ಲ, ಅಪ್ಪ ಅಮ್ಮ ಕೊಟ್ಟಿದ್ದಲ್ಲ. ನಿನ್ನದಲ್ಲ ಅಂದ ಮೇಲೆ ನಿನ್ನ ಹತೋಟಿಗೆ ಹೇಗೆ ಬರತ್ತೆ ಆ ಸಿಟ್ಟು?
ಈ ಸಮಜಾಯಿಶಿ ಕೇಳಿ ಶಿಷ್ಯ ಕುಣಿದು ಕುಪ್ಪಳಿಸಿಬಿಟ್ಟ.
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/04/osho-460/


[…] ನೆನ್ನೆಯ ಕಂತು ಇಲ್ಲಿದೆ:https://aralimara.com/2025/02/05/osho-461/ […]
LikeLike