ನಾವು ಯಾಕೆ ಹಿಂಜರಿಯುತ್ತೇವೆ? ಎಲ್ಲವನ್ನೂ ಈಗಲೇ ಕೊಟ್ಟುಬಿಟ್ಟರೆ, ಈಗ ನಾವು ಹಿಂಜರಿಯದಿದ್ದರೆ, ಮತ್ತೆ ಕೊಡಲು ನಮ್ಮ ಬಳಿ ಬಾಕಿ ಏನೂ ಉಳಿಯುವುದಿಲ್ಲ ಎನ್ನುವ ಭಯ ನಮ್ಮನ್ನು ಕಾಡುತ್ತಿರುತ್ತದೆ. ಆದ್ದರಿಂದಲೇ ನಾವು ಇಡಿಯಾಗಿ ಎಲ್ಲವನ್ನೂ ಕೊಡಲು ಮುಂದಾಗುವುದಿಲ್ಲ, ನಮ್ಮ ಕೊಡುವಿಕೆ ಹಂತ ಹಂತದಲ್ಲಿರುತ್ತದೆ. ನಾವು ಯಾವಾಗಲೂ ನಿಗೂಢವಾಗಿರಲು ಬಯಸುತ್ತೇವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ನಿಮ್ಮ ಇಡೀ ಅಸ್ತಿತ್ವವನ್ನು ಪ್ರವೇಶಿಸಲು, ಮತ್ತು ಅದನ್ನು ತಿಳಿದುಕೊಳ್ಳಲು ಇನ್ನೊಬ್ಬರಿಗೆ ಯಾಕೆ ಪೂರ್ಣ ಅವಕಾಶ ನೀಡುವುದಿಲ್ಲವೆಂದರೆ, ಒಮ್ಮೆ ಅವನಿಗೆ ಅಥವಾ ಅವಳಿಗೆ ನೀವು ಪೂರ್ತಿಯಾಗಿ ಅರ್ಥ ಆಗಿಬಿಟ್ಟರೆ ಅವರು ನಿಮ್ಮ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ ಎನ್ನುವ ಭಯ ನಿಮ್ಮನ್ನು ಕಾಡುತ್ತಿರುತ್ತದೆ. ಆದ್ದರಿಂದ ಇನ್ನೊಬ್ಬರು ನಿಮ್ಮ ಬಗ್ಗೆ ಸದಾ ಬೆರಗನ್ನು ಉಳಿಸಿಕೊಳ್ಳಲು ನೀವು ನಿಮ್ಮ ಕೆಲವು ಮೂಲೆಗಳನ್ನು ( corner) ಮುಚ್ಚಿಟ್ಟುಕೊಂಡು ಬಿಡುತ್ತೀರ.
ಆ ಮೂಲೆಗಳು ಯಾವವು? ನಿಮ್ಮ ಬಳಿ ಕೊಡವಂಥದು ಮತ್ತೇ ಏನು ಬಾಕಿ ಇದೆ? ಇನ್ನೊಬ್ಬರಿಗೆ ನಿಮ್ಮಲ್ಲಿ ಹುಡುಕಲು, ಬಯಸಲು ಮತ್ತು ನಿಮ್ಮನ್ನು ಒಲಿಸಿಕೊಳ್ಳಲು ಬೇರೆ ಏನಿದೆ? ….. ಹಾಗೆಯೇ ಅವರು ಕೂಡ ತಮ್ಮನ್ನು ಇಡಿಯಾಗಿ ತೆರೆದುಕೊಳ್ಳುವುದಿಲ್ಲ, ಅವರಲ್ಲಿಯೂ ನಿಮ್ಮದೇ ರೀತಿಯ ಹಿಂಜರಿತ ಕಂಡು ಬರುತ್ತದೆ.
ಒಮ್ಮೆ ಸಂಗತಿಯ ರಹಸ್ಯ ಗೊತ್ತಾಗಿಬಿಟ್ಚರೆ ಮುಂದೆ ಅದು ನಮಗೆ ಇದ್ದೂ ಇಲ್ಲದಂತೆ ಎನ್ನುವ animal understanding ನಮ್ಮದು. ನಮಗೆ ನಿಗೂಢತೆಯ ಬಗ್ಗೆ ಪ್ರೀತಿ, ನಮಗೆ ಅಜ್ಞಾತ ಎಂದರೆ ಇಷ್ಟ. ಒಮ್ಮೆ ನಮಗೆ ರಹಸ್ಯ ಗೊತ್ತಾಗಿಬಿಟ್ಚರೆ, ನಾವು ಅದರ ಆಳ ಅಗಲಗಳನ್ನು ಗೊತ್ತುಮಾಡಿಕೊಂಡು ಬಿಟ್ಟರೆ ನಮಗೆ ಅದರಲ್ಲಿನ ಆಸಕ್ತಿ ತೀರಿಹೋಗಿಬಿಡುತ್ತದೆ, ಮುಂದೆ ಅದು ನಮಗೆ ಇದ್ದೂ ಇಲ್ಲದಂತೆ.
ಮುಂದೆ ತಿಳಿದುಕೊಳ್ಳುವಂಥದು ಏನೂ ಇಲ್ಲವಾದಾಗ ನಿಮ್ಮ ಸಾಹಸಿ ಮನಸ್ಸು ಇನ್ನೊಂದು ಗಂಡಸಿಗಾಗಿ ಅಥವಾ ಹೆಂಗಸಿಗಾಗಿ ಹುಡುಕಾಡಲು ಮುಂದಾಗುತ್ತದೆ. ಲಕ್ಷಾಂತರ ಹೆಂಡತಿಯರು, ಗಂಡಂದಿರು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ಪೂರ್ತಿಯಾಗಿ ಇಲ್ಲವಾಗಿಬಿಟ್ಟಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ಆತ್ಮಹೀನ ( soul less) ರಾಗಿಬಿಟ್ಟಿದ್ದಾರೆ. ಏಕೆಂದರೆ ರಹಸ್ಯ ಮನೆ ಮಾಡಿಕೊಂಡಿರುವುದು ಆತ್ಮದಲ್ಲಿಯೇ. ರಹಸ್ಯವೇ ಉಳಿದಿಲ್ಲವೆಂದ ಮೇಲೆ ಅವರಿಬ್ಬರ ನಡುವೆ ಆತ್ಮಗಳೂ ಉಳಿದಿಲ್ಲ.
ಒಬ್ಬರು ಇನ್ನೊಬ್ಬರಲ್ಲಿ ಆಸಕ್ತಿ ಕಳೆದುಕೊಳ್ಳಲು ಈ ತರ್ಕ ಸರಿಯಾದರೂ ನೀವು ಸಂಪೂರ್ಣವಾಗಿ ಸ್ವತಂತ್ರರಾಗಿದ್ದಾಗ, ಪ್ರೇಮ ದೇವತೆಗೆ ಪೂರ್ತಿಯಾಗಿ ಶರಣಾಗಿದ್ದಾಗ ಮಾತ್ರ ನೀವು ಒಬ್ಬರಿಗೊಬ್ಬರೂ ಇಡಿಯಾಗಿ ತೆರೆದುಕೊಳ್ಳಬಹುದು. ಮತ್ತು ಇಂಥ ತೆರೆದುಕೊಳ್ಳುವುಕೆಯಲ್ಲಿಯೇ ನೀವಿಬ್ಬರೂ ಒಂದಾಗುತ್ತೀರ. ಯಾವಾಗ ಇಬ್ಬರು ಪರಸ್ಪರ ಪೂರ್ತಿಯಾಗಿ ತೆರೆದುಕೊಳ್ಳುತ್ತಾರೋ ಆಗ ಅವರು ಇಬ್ಬರಾಗಿ ಉಳಿಯುವುದಿಲ್ಲ. ಯಾವಾಗ ನಡುವಿನ ಗೋಡೆ ಇರುವುದಿಲ್ಲವೂ ಆಗ ಎರಡು ಕೋಣೆಗಳೂ ಇರುವುದಿಲ್ಲ. ಆಗ ಸಂಭವಿಸುವುದು ನಿಜವಾದ ಪೂರ್ಣತೆ, ನಿಜವಾದ ಸಂತೃಪ್ತಿ. ಇಂಥ ಪೂರ್ಣತೆಯನ್ನೇ ಪ್ರತೀ ಪ್ರೇಮಿ ಬಯಸುತ್ತಿರುವುದು, ಹುಡುಕುತ್ತಿರುವುದು, ಕನಸುತ್ತಿರುವುದು. ಆದರೆ ಇದು ಸರಿಯಾಗಿ ಅರ್ಥವಾಗಿಲ್ಲದಿದ್ದಾಗ ನಿಮ್ಮ ಹುಡುಕಾಟ, ಬಯಸುವಿಕೆ, ಕನಸುವಿಕೆ ಎಲ್ಲವೂ ತಪ್ಪು ದಿಕ್ಕಿನಲ್ಲಿರುತ್ತದೆ.
ಒಂದು ದಿನ ನಸ್ರುದ್ದೀನ್ ತನ್ನ ಹೆಂಡತಿಗೆ ಕೂಗಿ ಹೇಳಿದ,
“ ಮನೆಗೆ ನನ್ನ ಕೆಲವು ಗೆಳೆಯರು ಬರ್ತಿದಾರೆ ಮನೆಯೊಳಗಿನ ಎಲ್ಲ ಕಿಮ್ಮತ್ತಿನ ವಸ್ತುಗಳನ್ನ ಮುಚ್ಚಿಡು “
“ ಯಾಕೆ ನಿನ್ನ ಗೆಳೆಯರು ಕಳುವು ಮಾಡ್ತಾರಾ? “
ಹೆಂಡತಿ ಆಶ್ಚರ್ಯದಿಂದ ಕೇಳಿದಳು
“ ಇಲ್ಲ ಗುರುತು ಹಿಡಿದು ಬಿಡುತ್ತಾರೆ “
ನಸ್ರುದ್ದೀನ್ ಆತಂಕದಿಂದ ಉತ್ತರಿಸಿದ.
ನೆನ್ನೆಯ ಕಂತು ಇಲ್ಲಿ ಓದಿ:https://aralimara.com/2025/02/06/osho-462/


[…] ನೆನ್ನೆಯ ಕಂತು ಇಲ್ಲಿ ಓದಿ: https://aralimara.com/2025/02/07/osho-463/ […]
LikeLike