ಯಾವುದು ಸರಿ, ಯಾವುದು ತಪ್ಪು ಎಂದು ಯಾರನ್ನೂ ಕೇಳಲು ಹೋಗಬೇಡಿ… ಬದುಕು ಒಂದು ಪ್ರಯೋಗಶಾಲೆ, ಇದನ್ನು ಕಂಡುಕೊಳ್ಳಲು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರತೀ ವ್ಯಕ್ತಿಯೂ ಎಚ್ಚರಿಕೆಯಿಂದ ಇರಬೇಕು, ಜಾಗರೂಕರಾಗಿರಬೇಕು ಮತ್ತು ಬದುಕಿನ ಜೊತೆ ಪ್ರಯೋಗ ಮಾಡುತ್ತ ತಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನ ತಾವೇ ಕಂಡುಕೊಳ್ಳಬೇಕು. ಯಾವುದು ನಿಮಗೆ ಖುಶಿ, ಸಮಾಧಾನವನ್ನು ತಂದುಕೊಡುತ್ತದೆಯೋ, ಯಾವುದು ನಿಮಗೆ ಪ್ರಶಾಂತತೆಯನ್ನು ಸಾಧ್ಯ ಮಾಡುತ್ತದೆಯೋ, ಯಾವುದು ನಿಮ್ಮನ್ನ ಅಸ್ತಿತ್ವದ ಮತ್ತು ಅದರ ಅಪಾರ ಸೌಹಾರ್ದತೆಯ ಹತ್ತಿರಕ್ಕೆ ಕರೆದುಕೊಂಡು ಬರುತ್ತದೆಯೋ ಅದು ನಿಮಗೆ ಒಳ್ಳೆಯದು. ಯಾವುದು ನಿಮ್ಮಲ್ಲಿ ನೋವು, ಸಂಕಟ, ಬಿಕ್ಕಟ್ಟನ್ನು ಉಂಟು ಮಾಡುತ್ತದೆಯೋ ಅದು ನಿಮಗೆ ಒಳ್ಳೆಯದಲ್ಲ. ಈ ಸರಿ ತಪ್ಪುಗಳನ್ನ ನಿಮಗಾಗಿ ಬೇರೆ ಯಾರೋ ನಿರ್ಧರಿಸುವುದು ಸರಿ ಅಲ್ಲ, ಏಕೆಂದರೆ ಪ್ರತೀ ವ್ಯಕ್ತಿಗೂ ತನ್ನದೇ ಆದ ಜಗತ್ತು ಇದೆ, ತನ್ನದೇ ಆದ ಸಂವೇದನೆ ಇದೆ. ಪ್ರತಿಯೊಬ್ಬರೂ ಅನನ್ಯ. ಹಾಗಾಗಿ ಯಾವ ಫಾರ್ಮುಲಾ ಗಳೂ ಇಲ್ಲಿ ಕೆಲಸ ಮಾಡುವುದಿಲ್ಲ. ಇಡೀ ಜಗತ್ತು ಈ ಮಾತುಗಳಿಗೆ ಸಾಕ್ಷಿ ಎಂಬಂತೆ ಇದೆ.
ಯಾವುದು ಸರಿ, ಯಾವುದು ತಪ್ಪು ಎಂದು ಯಾರನ್ನೂ ಕೇಳಲು ಹೋಗಬೇಡಿ. ಬದುಕು ಒಂದು ಪ್ರಯೋಗಶಾಲೆ ಇದನ್ನು ಕಂಡುಕೊಳ್ಳಲು. ಕೆಲವೊಮ್ಮೆ ನೀವು ತಪ್ಪು ಮಾಡಬಹುದು, ಆದರೆ ಅದು ನಿಮಗೆ ಅನುಭವವನ್ನು ನೀಡುತ್ತದೆ. ಮುಂದಿನ ಬಾರಿ ಯಾವುದನ್ನು ಮಾಡಬಾರದು ಎನ್ನುವ ತಿಳುವಳಿಕೆಯನ್ನು ನೀಡುತ್ತದೆ. ಕೆಲವೊಮ್ಮೆ ನೀವು ಒಳ್ಳೆಯದನ್ನು ಮಾಡಬಹುದು ಮತ್ತು ಅದರಿಂದ ಲಾಭ ಪಡೆಯಬಹುದು, ಇದೂ ಕೂಡ ನಿಮಗೆ ಬದುಕಿನ ತಿಳುವಳಿಕೆಯೇ. ಬಹುಮಾನ ಮತ್ತು ಶಿಕ್ಷೆ ಈ ಬದುಕಿಗೆ ಸಂಬಂಧಿಸಿದ್ದು, ಸ್ವರ್ಗ ನರಕಗಳಿಗೆ ಅಲ್ಲ. ಏನೇ ಆದರೂ ಅದು ಇಲ್ಲಿಯೇ ಆಗುತ್ತದೆ, ಈಗಲೇ ಆಗುತ್ತದೆ.
ನಿಮ್ಮ ಪ್ರತೀ ಕ್ರಿಯೆಗೂ ಒಂದು ತಕ್ಷಣದ ಫಲಿತಾಂಶ ಸಾಧ್ಯವಿದೆ. ಸುಮ್ಮನೇ ಜಾಗರೂಕರಾಗಿ ಗಮನಿಸಿ. ಪ್ರಬುದ್ಧ ಜನ ಯಾರೆಂದರೆ ಇದನ್ನು ಜಾಗರೂಕತೆಯಿಂದ ಗಮನಿಸಿ ತಾವೇ ಸ್ವತಃ ತಿಳುವಳಿಕೆಯನ್ನು ಪಡೆದುಕೊಂಡವರು. ತಮಗೆ ಯಾವುದು ಸರಿ ಯಾವುದು ತಪ್ಪು, ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನು ತಾವೇ ನಿರ್ಧರಿಸಿದವರು. ಮತ್ತು ಹೀಗೆ ಇವನ್ನು ತಾವೇ ಕಂಡುಕೊಂಡಿರುವುದರಿಂದ, ಇವರುಗೆ ಒಂದು ವಿಶೇಷ ಅಥಾರಿಟಿ ಇವರಿಗೆ ಪ್ರಾಪ್ತವಾಗಿದೆ. ಇಡೀ ಜಗತ್ತು ಬೇರೆ ಏನೇ ಹೇಳಿದರೂ ಅದು ಇವರಿಗೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಇವರಿಗೆ ತಮ್ಮದೇ ಆನುಭವಗಳಿವೆ ಮತ್ತು ಇಷ್ಟು ಸಾಕು ಇವರಿಗೆ.
ಒಂದು ದಿನ, ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು.
ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.
ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”
ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ? “
ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ.
“ ಹೌದು, ನೀನು ಹೇಳೋದೂ ಸರಿನೇ “
ನೆನ್ನೆಯ ಕಂತು ಇಲ್ಲಿದೆ : https://aralimara.com/2025/02/09/osho-465/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/10/osho-466/ […]
LikeLike