ಖುಶಿ ಮತ್ತು ದುಃಖಕ್ಕೆ ಹೊರಗಿನ ಕಾರಣಗಳು ಯಾವುದೂ ಇಲ್ಲ : ಅವು ಕೇವಲ ನೆಪಗಳು, ಸಮರ್ಥನೆಗಳು. ನಿಧಾನವಾಗಿ ನಮಗೆ ಗೊತ್ತಾಗುತ್ತದೆ, ನಮ್ಮ ಒಳಗಿನ ಸಂಗತಿಗಳೇ ಬದಲಾಗುತ್ತಿವೆ ಎನ್ನುವುದು, ಮತ್ತು ಹೊರಗಿನ ಸಂದರ್ಭಗಳು ಯಾವುದೇ ಕಾರಣ ಅಲ್ಲ ಎನ್ನುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮಗೆ ಹೇಗೆ ಅನಿಸುತ್ತಿದೆ, ಏನು ಅನಿಸುತ್ತಿದೆ ಎನ್ನುವುದರ ಕಾರಣ ನಿಮ್ಮ ಒಳಗೆಯೇ ಇದೆ, ಮತ್ತು ಈ ಚಕ್ರ ಸುತ್ತುತ್ತಲೇ ಇರುತ್ತದೆ. ಸುಮ್ಮನೇ ಗಮನಿಸಿ, ಬಹಳ ಸುಂದರವಾಗಿದೆ ಇದು. ಏಕೆಂದರೆ ಈ ಕುರಿತು ಅರಿವು ಹೊಂದುವುದೇ ಒಂದು ದೊಡ್ಡ ಸಾಧನೆ. ಈಗ ನಿಮಗೆ ಗೊತ್ತಿದೆ ಹೊರಗಿನ ನೆಪಗಳಿಂದ ನೀವೀಗ ಮುಕ್ತರಾಗಿದ್ದೀರಿ. ಏಕೆಂದರೆ ಹೊರಗಿನ ಸಂದರ್ಭಗಳಲ್ಲಿ ಯಾವ ಬದಲಾವಣೆ ಇಲ್ಲದಿರುವಾಗಲೂ ನಿಮ್ಮ ಮೂಡ್ ಖುಶಿಯಿಂದ ದುಃಖಕ್ಕೆ ಬದಲಾಗಿದೆ, ಅಥವಾ ದುಃಖದಿಂದ ಖುಶಿಗೆ.
ಹಾಗಾಗಿ ಖುಶಿ ಮತ್ತು ದುಃಖಗಳು ನಿಮ್ಮ ಮೂಡ್ ಗಳೇ ಹೊರತು ಹೊರಗಿನ ಯಾವ ಸಂದರ್ಭಗಳೂ ಇದಕ್ಕೆ ಕಾರಣವಲ್ಲ. ಇದು ನಾವು ಅರ್ಥ ಮಾಡಿಕೊಳ್ಳಬೇಕಾದ ಮೂಲಭೂತ ಸಂಗತಿ. ಆಗ ಮಾತ್ರ ನಾವು ಹೆಚ್ಚಿನದರತ್ತ ಹೆಜ್ಜೆ ಹಾಕಬಹುದು. ಮತ್ತು ನಾವು ಅರ್ಥಮಾಡಿಕೊಳ್ಳಬೇಕಾದ ಎರಡನೇಯ ಮುಖ್ಯ ಸಂಗತಿಯೆಂದರೆ, ನಿಮ್ಮ ಮೂಡ್ ಗಳು ಅವಲಂಬಿತವಾಗಿರೋದು ನಿಮ್ಮ ತಿಳುವಳಿಕೆಯ ಕೊರತೆಯ ( unawareness) ಮೇಲೆ. ಆದ್ದರಿಂದ ಈ ಪ್ರಕ್ರಿಯೆ ಯನ್ನ ಸುಮ್ಮನೇ ಗಮನಿಸಿ ಮತ್ತು ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಿ. ನೀವು ಖುಶಿಯನ್ನು ಅನುಭವಿಸುತ್ತೀರಾದರೆ ಸುಮ್ಮನೇ ಅದನ್ನು ಗಮನಿಸಿ , ಅದರ ಜೊತೆ ಗುರುತಿಸಿಕೊಳ್ಳಲು ಹೋಗಬೇಡಿ. ಹಾಗೆಯೇ ದುಃಖದ ಜೊತೆಗೆ, ಸುಮ್ಮನೇ ಗಮನಿಸುತ್ತ ಹೋಗಿ, ಅಂಟಿಕೊಳ್ಳಲು ಹೋಗಬೇಡಿ. ಇವು ಹಗಲು ಮತ್ತು ರಾತ್ರಿಯ ಹಾಗೆ. ಮುಂಜಾನೆ ನೀವು ಸೂರ್ಯ ಉದಯಿಸುವುದನ್ನ ನೋಡಿ ಖುಶಿ ಪಡುತ್ತೀರಿ. ಸೂರ್ಯ ಮುಳುಗುತ್ತಲೇ, ರಾತ್ರಿಯಾಗುತ್ತದೆ ಮತ್ತು ಕತ್ತಲು ಆವರಿಸಿಕೊಳ್ಳುತ್ತದೆ, ಇದನ್ನೂ ಹಾಗೆಯೇ ನೋಡಿ ಖುಶಿ ಅನುಭವಿಸಿ.
95 ನೇ ಹುಟ್ಟು ಹಬ್ಬದ ದಿನ ನಸ್ರುದ್ದೀನ್ ನನ್ನು ಪತ್ರಕರ್ತನೊಬ್ಬ ಮಾತನಾಡಿಸಿದ,
“ ವಯಸ್ಸಾಗುತ್ತಿರುವುದರ ಬಗ್ಗೆ ನಿನಗೆ ಬೇಸರ ಇಲ್ಲವೆ ನಸ್ರುದ್ದೀನ್ ? “
“ ಖಂಡಿತ ಇಲ್ಲ. ಬದಲಾಗಿ ನನಗೆ ಖುಶಿ ಇದೆ. ಅಕಸ್ಮಾತ್ ನನಗೆ ವಯಸ್ಸಾಗದೇ ಹೋಗಿದ್ದರೆ ನಾನು ಸತ್ತು ಹೋಗಿರುತ್ತಿದ್ದೆ. “ ನಸ್ರುದ್ದೀನ್ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ.
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/10/osho-466/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/11/osho-467/ […]
LikeLike