ಹಣೆ ಪಟ್ಟಿಗಳು ( Labels ) : ಓಶೋ 365 #Day 28


ಖುಶಿ ( happiness) ಮತ್ತು ದುಃಖ ( unhappiness) ಎನ್ನುವ ಪದಗಳನ್ನು ಉಪಯೋಗಿಸಬೇಡಿ, ಏಕೆಂದರೆ ಈ ಪದಗಳು ಜಡ್ಜಮೆಂಟ್ ನ ಭಾರ ಹೊತ್ತಿವೆ. ಈ ಭಾವಗಳನ್ನ ಯಾವ ಜಡ್ಜಮೆಂಟ್ ಇಲ್ಲದೇ ಸುಮ್ಮನೇ ಗಮನಿಸುತ್ತ ಹೋಗಿ. ಈ ಭಾವಗಳಿಗೆ  ಹೆಸರಿಡಲೇ ಬೇಕಾದರೆ, ಸುಮ್ಮನೇ ಮೂಡ್ A , ಮೂಡ್ B ಎಂದು ಹೇಳಿ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

“A” ಮೂಡ್ ಮಾಯವಾಗುತ್ತಿದ್ದಂತೆಯೇ, “B” ಮೂಡ್ ಕಾಣಿಸಿಕೊಳ್ಳುತ್ತದೆ, ಹಾಗು ನೀವು ಈ ಮೂಡ್ ಗಳ ಬಂದು ಹೋಗುವಿಕೆಯನ್ನು ಸುಮ್ಮನೇ ಗಮನಿಸುತ್ತಿದ್ದೀರ. ಆಗ ನಿಮಗೆ ತಕ್ಷಣ ಗೊತ್ತಾಗುತ್ತದೆ, ಯಾವಾಗ ಖುಶಿಯನ್ನ ನೀವು ಮೂಡ್ “A” ಎಂದು ಕರೆಯುತ್ತೀರೋ ಆಗ ಖುಶಿ ಅಷ್ಟು ಖುಶಿಯಲ್ಲ. ಯಾವಾಗ ದುಃಖವನ್ನ ನೀವು ಮೂಡ್ “B” ಎಂದು ಗುರುತಿಸುತ್ತೀರೋ ಆಗ ದುಃಖ  ಅಷ್ಟು ದುಃಖವಲ್ಲ. ಕೇವಲ ಈ ಭಾವಗಳನ್ನು ಮೂಡ್ A, ಮೂಡ್ B ಎಂದು ಗುರುತಿಸುವುದರಿಂದ ನೀವು ಅವುಗಳ ನಡುವೆ ಒಂದು ಅಂತರವನ್ನು ಸೃಷ್ಟಿ ಮಾಡಿದ್ದೀರಿ.

ಯಾವಾಗ ನೀವು ಒಂದು ಭಾವವನ್ನು ಖುಶಿ ಎಂದು ಗುರುತಿಸುತ್ತೀರೋ ಆಗ, ಆ ಪದಕ್ಕೆ ಬಹಳಷ್ಟು ಅರ್ಥಗಳು, ಇತಿಹಾಸಗಳು  ಬಂದು ಸೇರಿಕೊಳ್ಳುತ್ತವೆ. ಹಾಗೆ ಹೇಳುವ ಮೂಲಕ ನೀವು ಆ ಪದಕ್ಕೆ ಅಂಟಿಕೊಳ್ಳಲು ಬಯಸುತ್ತಿದ್ದೀರಿ, ಅದನ್ನು ಕಳೆದುಕೊಳ್ಳಲು ನೀವು ಇಚ್ಛಿಸುತ್ತಿಲ್ಲ. ಯಾವಾಗ ನೀವು ಒಂದು ಭಾವವನ್ನು ದುಃಖ ಎನ್ನುವ ಪದದಿಂದ ಗುರುತಿಸುತ್ತೀರೋ ಆಗ ನೀವು ಕೇವಲ ಆ ಪದವನ್ನು ಬಳಸುತ್ತಿಲ್ಲ, ಆ ಪದದ ಜೊತೆ ಬಹಳಷ್ಟು ಸಂಗತಿಗಳನ್ನು ಹೇಳುತ್ತಿದ್ದೀರಿ. ಈ ಭಾವ ನಿಮಗೆ ಬೇಡವೆಂದು ಹೇಳುತ್ತಿದ್ದೀರಿ, ಈ ಭಾವ ಇರಲೇಬಾರದು ಎಂದು ನೀವು ಬಯಸುತ್ತಿದ್ದೀರಿ. ಈ ಎಲ್ಲವೂ ಸಂಭವಿಸುತ್ತಿರುವುದು ಅಪ್ರಜ್ಞಾಪೂರ್ವಕವಾಗಿ.

ಆದ್ದರಿಂದ ನಿಮ್ಮ ಮೂಡ್ ಗಳಿಗೆ ಈ ಹೊಸ ಟರ್ಮಿನಾಲಜಿಯನ್ನ ಏಳು ದಿನ ಬಳಸಿ ನೋಡಿ. ಸುಮ್ಮನೇ ಈ ಭಾವಗಳನ್ನು ಹೆಸರಿಸದೇ ಗಮನಿಸುತ್ತೀರಿ, ಬೆಟ್ಟದ ಮೇಲೆ ಕುಳಿತು ಎಲ್ಲವನ್ನೂ ಗಮನಿಸುತ್ತಿರುವಂತೆ, ಕಣಿವೆಯಲ್ಲಿ ಮೋಡಗಳು, ಸೂರ್ಯೋದಯ, ಸೂರ್ಯಾಸ್ತ ಬಂದು ಹೋಗುತ್ತಿರುವಂತೆ, ಕೆಲವೊಮ್ಮೆ ರಾತ್ರಿಯಾದಂತೆ ಕೆಲವೊಮ್ಮೆ ಬೆಳಕು ಮೂಡಿದಂತೆ… ಸುಮ್ಮನೇ ಬೆಟ್ಟದ ಮೇಲೆ ಕುಳಿತು ಎಲ್ಲವನ್ನೂ ದೂರದಿಂದ ಗಮನಿಸುತ್ತಿರುವಂತೆ ವಾಚ್ ಮಾಡುತ್ತಿರಿ.

ಒಮ್ಮೆ ಗೆಳೆಯ,  ನಸ್ರುದ್ದೀನ್ ನ ಪ್ರಶ್ನೆ ಮಾಡಿದ.

“ರಾತ್ರಿ ನಿನ್ನ ಮನೆಯಿಂದ ಜೋರು ಜೋರಾಗಿ ನಗುವಿನ ಸದ್ದು ಕೇಳಿಸತ್ತೆ, ಅಷ್ಟು ರಾತ್ರಿ ಏನು ನಡಿಯತ್ತೆ ನಿನ್ನ ಮನೆಯಲ್ಲಿ?”

“ರಾತ್ರಿಯಾದರೆ ನನಗೂ ನನ್ನ ಹೆಂಡ್ತಿಗೂ ಜೋರು ಜಗಳ “

ಉತ್ತರಿಸಿದ ನಸ್ರುದ್ದೀನ್.

“ಮತ್ತೆ ನಗುವಿನ ಸದ್ದು?“ ಗೆಳೆಯನಿಗೆ ಕುತೂಹಲ ಹೆಚ್ಚಾಯಿತು.

“ ಸಿಟ್ಟಿನಲ್ಲಿ ಹೆಂಡ್ತಿ ತನ್ನ ಕೈ ಗೆ ಸಿಕ್ಕ ವಸ್ತುವನ್ನ ನನ್ನ ಮೇಲೆ ಎಸಿತಾಳೆ. ಆ ವಸ್ತು ನನಗೆ ತಾಕಿದಾಗ ಅವಳು ನಗ್ತಾಳೆ, ತಾಕದೇ ಹೋದಾಗ ನಾನು ಜೋರಾಗಿ ನಗ್ತೀನಿ. “

ನಸ್ರುದ್ದೀನ್ ತನ್ನ ಮನೆಯ ನಗುವಿನ ರಹಸ್ಯ ಬಿಡಿಸಿಟ್ಟ.


ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/14/osho-469/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.