ಅಜ್ಞಾನಿಯಾಗಿಯೇ ಇರಿ ( Remain Ignorant ): ಓಶೋ 365 #Day 33

ಭಯದ ಕುರುತಾಗಿ ಯಾವ ದೃಷ್ಟಿಕೋನವನ್ನೂ ಬೆಳೆಸಿಕೊಳ್ಳಬೇಡಿ ; ಅಷ್ಟೇ ಅಲ್ಲ ಅದನ್ನು ಭಯ ಎಂದು ಕರೆಯಲೂ ಬೇಡಿ. ನೀವು ಅದನ್ನು ಭಯ ಎಂದು ಹೆಸರಿಸಿದ ಕ್ಷಣದಲ್ಲಿಯೇ, ನೀವು ಅದರ ಕುರಿತಾಗಿ ಒಂದು ದೃಷ್ಟಿಕೋನವನ್ನು ( attitude ) ಬೆಳೆಸಿಕೊಂಡು ಬಿಡುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಪ್ರತಿಯೊಂದು ಸಂಗತಿಯನ್ನು ಹೆಸರಿನಿಂದ ಗುರುತಿಸದೇ ಇರುವುದು ಬಹಳ ಮಹತ್ವದ ವಿಷಯ. ಸುಮ್ಮನೇ ಆ ಭಾವವನ್ನು ಅದು ಇರುವ ಹಾಗೆ ವಾಚ್ ಮಾಡಿ. ಅದು ನಿಮ್ಮನ್ನು ಆವರಿಸಿಕೊಳ್ಳಲು ಅವಕಾಶ ಮಾಡಿಕೊಡಿ, ಅದನ್ನು ಯಾವ ಹೆಸರಿನಿಂದಲೂ ಗುರುತಿಸದೇ ಅಜ್ಞಾನಿಗಳಾಗಿಯೇ ಇದ್ದುಬಿಡಿ. ಅಜ್ಞಾನ ಎನ್ನುವುದು ಒಂದು ಪ್ರಚಂಡ ಧ್ಯಾನಸ್ಥ ಸ್ಥಿತಿ. ಅಜ್ಞಾನಿಯಾಗಿಯೇ ಇರುವಂತೆ ನಿಮ್ಮ  ಮೇಲೆ ನೀವೇ  ಒತ್ತಾಯ ಹೇರಿಕೊಳ್ಳಿ, ಮೈಂಡ್ ಗೆ ನಿಮ್ಮನ್ನು ಮ್ಯಾನುಪ್ಯುಲೇಟ್ ಮಾಡುವ ಅವಕಾಶ ಮಾಡಿಕೊಡಬೇಡಿ. ಮೈಂಡ್ ಗೆ ಭಾಷೆ,  ಪದ ಬಳಸುವ, ಲೇಬಲ್ ಮತ್ತು ವರ್ಗೀಕರಣ ಮಾಡುವ  ಎಲ್ಲ ಅವಕಾಶಗಳನ್ನು ನಿರಾಕರಿಸಿಬಿಡಿ. ಏಕೆಂದರೆ ಇದರಿಂದಾಗಿ ಒಂದು ಇಡೀ ಪ್ರೊಸೆಸ್ ಹೊಸದಾಗಿ ಶುರುವಾಗ ಬೇಕಾಗುತ್ತದೆ. ಒಂದು ಸಂಗತಿ ಇನ್ನೊಂದು ಸಂಗತಿಯೊಂದಿಗೆ ಬೆರೆತುಕೊಂಡು ಇದು ಮುಂದುವರೆಯುತ್ತಲೇ ಹೋಗುತ್ತದೆ.

ಸಂಗತಿಯನ್ನು ಸುಮ್ಮನೇ ಗಮನಿಸಿ – ಅದಕ್ಕೆ ಭಯ ಎನ್ನುವ ಹೆಸರು ಇಡಲು ಹೋಗಬೇಡಿ. ಆ ಭಾವ ನಿಮ್ಮನ್ನು ಆವರಿಸಿಕೊಂಡಾಗ, ಭಯಭೀತರಾಗಿ ಮತ್ತು ನಡುಗಿ , ಇದು ಬಹಳ ಸುಂದರ. ಮೂಲೆಯಲ್ಲಿ ಹೋಗಿ ಅವಿತುಕೊಳ್ಳಿ, ಕೈಗೆ ಏನಾದರೂ ಸಿಕ್ಕರೆ ಅದನ್ನೇ ಹೊದ್ದುಕೊಳ್ಳಿ . ಭಯಗೊಂಡ ಪ್ರಾಣಿ ಏನೇಲ್ಲ  ಮಾಡುತ್ತದೆಯೋ ಹಾಗೆಯೇ ಮಾಡಿ. ಭಯಕ್ಕೆ ನಿಮ್ಮನ್ನು ಅವರಿಸಿಕೊಳ್ಳಲು ಅವಕಾಶ ಮಾಡಿಕೊಡುವಿರಾದರೆ ಕೊನೆಗೆ, ನಿಮ್ಮ ಮೈ ಕೂದಲು ನಿಮಿರಿಕೊಳ್ಳುವುವು. ಆಗ ನಿಮಗೆ ಮೊದಲ ಬಾರಿಗೆ ಭಯ ಎಂಥ ಸುಂದರ ವಿದ್ಯಮಾನ ಎನ್ನುವುದು ಅರಿವಿಗೆ ಬರುತ್ತದೆ. ನಿಮ್ಮೊಳಗೆ ಎಲ್ಲೋ ನೀವು ಇನ್ನೂ ಕೊಂಚವೂ ಸ್ಪರ್ಶಿಸಿದ ಜಾಗವಿದೆ ಎನ್ನುವುದು, ಈ ಪ್ರಕ್ಷುಬ್ದತೆಯಲ್ಲಿ, ಈ ಸುಂಟರಗಾಳಿಯಲ್ಲಿ ನಿಮ್ಮ ಅರಿವೆಗೆ ಬರುತ್ತದೆ.

ಒಂದು ಝೆನ್ ಆಶ್ರಮದಲ್ಲಿ,  ಶಿಷ್ಯರಿಗೆಲ್ಲ ಅಲ್ಲಿದ್ದ  ಒಬ್ಬ ವೃದ್ಧ ಸನ್ಯಾಸಿಯ ಬಗ್ಗೆ ಅಪಾರ ಕುತೂಹಲ.  ಆ ವೃದ್ಧ,  ಯಾವುದಕ್ಕೂ ಪ್ರತಿಕ್ರಯಿಸುತ್ತಿರಲಿಲ್ಲ, ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ. 

ಶಿಷ್ಯರಿಗೆ  ಸನ್ಯಾಸಿಯ ಈ ವರ್ತನೆ, ಅಸಹಜ ಅನಿಸಿತ್ತು, ಅವನನ್ನು ಕಂಡು ಅವರಿಗೆ ಒಮ್ಮೊಮ್ಮೆ ಹೆದರಿಕೆಯಾಗುತ್ತಿತ್ತು.

ಒಂದು ದಿನ ಎಲ್ಲ ಶಿಷ್ಯರು ಸೇರಿ ಆ ಸನ್ಯಾಸಿಯನ್ನು ಪರೀಕ್ಷೆ ಮಾಡಬೇಕೆಂದು ನಿರ್ಧರಿಸಿದರು. ಒಂದು ಕತ್ತಲ ದಾರಿಯ ತಿರುವಿನಲ್ಲಿ ಅಡಗಿಕೊಂಡು ಆ ಸನ್ಯಾಸಿ ಬರುವುದನ್ನೇ ಕಾಯತೊಡಗಿದರು. ಸನ್ಯಾಸಿ ಬಿಸಿ ಚಹಾದ ಬಟ್ಟಲು ಹಿಡಿದುಕೊಂಡು ಅದೇ ದಾರಿಯಲ್ಲಿ ಬಂದ. ಅವ ಹತ್ತಿರ ಬರುತ್ತಿದ್ದಂತೆಯೇ  ಶಿಷ್ಯರೆಲ್ಲ ದೊಡ್ಡ ಶಬ್ದ ಮಾಡಿ ಸನ್ಯಾಸಿಯನ್ನು ಹೆದರಿಸಲು ಪ್ರಯತ್ನಿಸಿದರು. ಅಚಾನಕ್ ಆಗಿ ಆದ ಈ ಗದ್ದಲಕ್ಕೆ  ಸನ್ಯಾಸಿ ಪ್ರತಿಕ್ರಯಿಸಲೇ ಇಲ್ಲ. ಸುಮ್ಮನೇ ಎರಡು ಫರ್ಲಾಂಗ್ ಮುಂದೆ ನಡೆದು ಹೋಗಿ ಅಲ್ಲಿದ್ದ ಟೇಬಲ್ ಮೇಲೆ ಚಹಾದ ಕಪ್ ಇಟ್ಟು, ಗೋಡೆಗೆ ಬೆನ್ನು ಹಚ್ಚಿ ಜೋರಾಗಿ ಹೋ ಎಂದು ಕಿರಚಿಕೊಂಡ. ಅವನ ಮುಖದಲ್ಲಿ ಹೆದರಿಕೆ ಎದ್ದು ಕಾಣುತ್ತಿತ್ತು.

ಶಿಷ್ಯರು, ಸನ್ಯಾಸಿಯ ಈ ವರ್ತನೆ ಕಂಡು ಬೆಕ್ಕಸ ಬೆರಗಾದರು.


ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/19/osho-476/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.