ಬದುಕು ಬಹಳ ಸರಳ. ಗಿಡಮರಗಳೂ ಬದುಕುತ್ತಿವೆಯೆಂದರೆ ಬದುಕು ಸರಳವಾಗಿರಲೇ ಬೇಕು. ಆದರೆ ನಮಗೆ ಮಾತ್ರ ಯಾಕೆ ಜಟಿಲವಾಗಿದೆ ಬದುಕು ? ಏಕೆಂದರೆ ನಾವು ಬದುಕನ್ನು ಸಿದ್ಧಾಂತವನ್ನಾಗಿಸಿಕೊಳ್ಳ ಬಲ್ಲೆವು, ಅದರ ಕುರಿತು ಹಲವು ವ್ಯಾಖ್ಯಾನ ಮಾಡಬಲ್ಲೆವು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿನ ಗಾಢತೆಯನ್ನು ಅನುಭವಿಸಲು, ಬದುಕಿನ ತೀವ್ರತೆ ಮತ್ತು ಉತ್ಕಟತೆಯನ್ನು ಅನುಭವಿಸಲು, ಬದುಕಿನ ಕುರಿತಾದ ಎಲ್ಲ ಫಿಲಾಸೊಫಿಗಳನ್ನು ನಾವು ಡ್ರಾಪ್ ಮಾಡಿಬಿಡಬೇಕು. ಇಲ್ಲವಾದರೆ ನೀವು ಪದಗಳ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತೀರ.
ಶತಪದಿಯ ಕುರಿತಾದ ಒಂದು ಕಥೆಯನ್ನು ಕೇಳಿದ್ದೀರಾ? ಒಂದು ಸುಂದರ ಮುಂಜಾನೆ ಶತಪದಿ ಬಹಳ ಖುಶಿಯಲ್ಲಿತ್ತು, ಅದರ ಹೃದಯದಾಳದಿಂದ ಅದ್ಭುತವಾದ ಹಾಡುಗಳು ಹೊರಬರುತ್ತಿದ್ದವು. ಬೆಳಗಿನ ವಾತಾವರಣ ಶತಪದಿಯನ್ನು ಮಂತ್ರಮುಗ್ಧವಾಗಿಸಿತ್ತು. ಇಷ್ಟು ಖುಶಿಯಾಗಿದ್ದ ಶತಪದಿಯನ್ನು ನೋಡಿ ಅಲ್ಲಿಯೇ ಇದ್ದ ಕಪ್ಪೆಯೊಂದಕ್ಕೆ ಆಶ್ಚರ್ಯವಾಯಿತು. ಬಹುಶಃ ಅದು ತತ್ವಜ್ಞಾನಿ ಕಪ್ಪೆಯಿರಬೇಕು. ಕಪ್ಪೆ , ಶತಪದಿಯನ್ನು ಪ್ಪಶ್ನೆ ಮಾಡಿತು, “ನೂರು ಕಾಲುಗಳಿಂದ ನಡೆಸುವುದು ನನಗಂತೂ ಪವಾಡ ಅನಿಸುತ್ತದೆ ನನಗೆ. ಇದನ್ನೆಲ್ಲ ಹ್ಯಾಗೆ ಮ್ಯಾನೇಜ್ ಮಾಡುತ್ತೀಯ? ಯಾವ ಕಾಲು ಮೊದಲು ಮುಂದೆ ಇಡ್ತಿಯಾ? ಯಾವ ಕಾಲು ಆಮೇಲೆ ? ಯಾವ ಕಾಲು ಯಾವಾಗ ಮುಂದೆ ಇಡಬೇಕೆನ್ನುವುದು ನಿನಗೆ ಹೇಗೆ ಗೊತ್ತಾಗುತ್ತದೆ? ನಿನ್ನ ನಡೆ ನಿನಗೆ ಬೆರಗು ಹುಟ್ಟಿಸಲ್ವಾ? ಇದನ್ನೆಲ್ಲ ಹ್ಯಾಗೆ ಮ್ಯಾನೇಜ್ ಮಾಡುತ್ತೀಯ? “
ಶತಪದಿ ಉತ್ತರಿಸಿತು, “ ಮಹಾಸ್ವಾಮಿ, ಈ ಬಗ್ಗೆ ನಾನು ಯಾವತ್ತೂ ವಿಚಾರ ಮಾಡಿಲ್ಲ. ಇರಿ ಈಗ ನೀವು ಈ ಕುರಿತು ಪ್ರಶ್ನೆ ಕೇಳಿರುವುದರಿಂದ, ಈ ಕುರಿತು ವಿಚಾರ ಮಾಡಿ ನಿಮಗೆ ಉತ್ತರಿಸುತ್ತೇನೆ.”
ಬದುಕಿನಲ್ಲಿ ಮೊಟ್ಟ ಮೊದಲಬಾರಿಗೆ ಆಲೋಚನೆಯೊಂದು ಸೆಂಟಿಪೇಡ್ ನ ಪ್ರಜ್ಞೆಯನ್ನು ಪ್ರವೇಶ ಮಾಡಿತು. ಸೆಂಟಿಪೇಡ್ ಅಲ್ಲಿಯೇ ನಿಂತು ಆಳವಾದ ಯೋಚನೆಯಲ್ಲಿ ಮುಳುಗಿತು. ನಾನು ಯಾವ ಕಾಲು ಮೊದಲು ಎತ್ತಿಡುತ್ತೇನೆ ಮತ್ತು ಯಾಕೆ ? ಸೆಂಟಿಪೇಡ್ ತೀವ್ರ ಗೊಂದಲದಲ್ಲಿ ಮುಳುಗಿತು. ಸೆಂಟಿಪೇಡ್ ಗೆ ಒಂದು ಹೆಜ್ಜೆಯನ್ನೂ ಮುಂದಿಡಲಾಗಲಿಲ್ಲ, ಅದು ನಡುಗುತ್ತ ಕುಸಿದು ಉರುಳಿ ಬಿತ್ತು. ಕೆಳಗೆ ಬೀಳುತ್ತಿದ್ದಂತೆಯೇ ಸೆಂಟಿಪೇಡ್ ಕಪ್ಪೆಯನ್ನು ಕುರಿತು ಮಾತನಾಡಿತು…..
“ತತ್ವಜ್ಞಾನಿಗಳೇ, ನೀವು ನನಗೆ ಕೇಳಿದ ಪ್ರಶ್ನೆಯನ್ನ ಇನ್ನೊಂದು ಸೆಂಟಿಪೇಡ್ ಗೆ ಕೇಳಬೇಡಿ. ನಾನು ಜೀವನದುದ್ದಕ್ಕೂ ನಡೆಯುತ್ತಲೇ ಇದ್ದೇನೆ ಆದರೆ ನಡೆಯುವುದು ನನಗೆ ಯಾವತ್ತೂ ಸಮಸ್ಯೆಯಾಗಿರಲಿಲ್ಲ. ಈಗ ಇಂಥದೊಂದು ಪ್ರಶ್ನೆ ಕೇಳಿ ನನ್ನನ್ನು ಚಲಿಸದಂತೆ ಮಾಡಿದ್ದೀರಿ. ನನಗೆ ನೂರು ಕಾಲುಗಳಿವೆ, ಈ ಕಾಲುಗಳನ್ನ ಮ್ಯಾನೇಜ್ ಮಾಡುವ ಸಮಸ್ಯೆ ನನ್ನನ್ನು ಈಗ ತೀವ್ರವಾಗಿ ಕಾಡುತ್ತಿದೆ”.
ಫಿಲಾಸೊಫಿ ಬದುಕನ್ನು ಪ್ಯಾರಾಲೈಸ್ ಮಾಡುತ್ತದೆ. ಬದುಕಿಗೆ ಯಾವ ಫಿಲಾಸೊಫಿಯ ಅಗತ್ಯ ಇಲ್ಲ, ಅದು ತನಗೆ ತಾನೇ ಸಮರ್ಥ. ಬದುಕಿಗೆ ಯಾವ ಊರುಗೋಲು, ಯಾವ ಸಹಾಯದ ಅವಶ್ಯಕತೆಯಿಲ್ಲ, ಅದು ತನಗೆ ತಾನೇ ಪರಿಪೂರ್ಣ.
ಒಂದು ದಿನ, ಕೆಡುಕಿನ ಅಧಿಪತಿ ಮಾರ ತನ್ನ ಸೇವಕರೊಡನೆ ಭಾರತ ದೇಶದ ಹಳ್ಳಿಯೊಂದರ ಮೂಲಕ ಹಾಯ್ದು ಪ್ರಯಾಣ ಮಾಡುತ್ತಿದ್ದ.
ಹೀಗೆ ಪ್ರಯಾಣ ಮಾಡುವಾಗ, ಧ್ಯಾನದಲ್ಲಿ ತಲ್ಲೀನನಾಗಿದ್ದ ಒಬ್ಬ ಮನುಷ್ಯ ಅವನ ಕಣ್ಣಿಗೆ ಬಿದ್ದ. ಅವರು ನೋಡ ನೋಡುತ್ತಿದ್ದಂತೆಯೇ, ಧ್ಯಾನಿಯ ಮುಖ ಪ್ರಖರ ತೇಜಸ್ಸಿನಿಂದ ಹೊಳೆಯತೊಡಗಿತು.
ಯಾಕೆ ಆ ಮನುಷ್ಯನ ಮುಖದ ಸುತ್ತ ಈ ದಿವ್ಯ ಪ್ರಭಾವಳಿ ಎಂದು ಸೇವಕರು ಮಾರನನ್ನು ಕೇಳಿದರು.
“ ಅವನು ಈಗ ತಾನೇ ಸತ್ಯವೊಂದನ್ನು ಕಂಡು ಕೊಂಡಿದ್ದಾನೆ” ಮಾರ ಉತ್ತರಿಸಿದ.
“ಓ ! ಕೆಡಕಿನ ಅಧಿಪತಿ, ಅವನು ಸತ್ಯವೊಂದನ್ನು ಕಂಡುಕೊಂಡಿದ್ದಾನೆ ಎಂದರೆ ನಿನಗೆ ಇನ್ನು ಚಿಂತೆ ಶುರು “
ಸೇವಕನೊಬ್ಬ ಕೇಳಿದ.
“ ಬಹುತೇಕ ಸತ್ಯವನ್ನು ಕಂಡುಕೊಂಡ ಜನ ಮರು ಘಳಿಗೆಯಲ್ಲೇ ಅದರಿಂದ ನಂಬಿಕೆಯೊಂದನ್ನು ಹುಟ್ಟು ಹಾಕುತ್ತಾರೆ, ಆ ಸತ್ಯದ ಕುರಿತು ಸಿದ್ಧಾಂತವನ್ನು ಸೃಷ್ಟಿ ಮಾಡುತ್ತಾರೆ. ನಂತರ ಸತ್ಯ ಹಿಂದೆ ಉಳಿದು ಸಿದ್ಧಾಂತವಷ್ಟೇ ಮೆರೆಯುತ್ತದೆ. ಕಂಡುಕೊಂಡ ಸತ್ಯವನ್ನು ಅವರೇ ನಾಶ ಮಾಡಿಬಿಡುತ್ತಾರೆ. ಹಾಗಾಗಿ ನನಗೇನು ಭಯವಿಲ್ಲ “
ಮಾರ ನಗುತ್ತ ಉತ್ತರಿಸಿದ.
ನೆನ್ನೆಯ ಕಂತು ಇಲ್ಲಿ ಓದಿ: https://aralimara.com/2025/02/20/osho-477/

