ಕೇಂದ್ರದಲ್ಲಿ ಸ್ಥಿರವಾಗುವುದು ಮತ್ತು ದಾರಿ ತಪ್ಪುವುದರ ನಡುವೆ ಬಿಕ್ಕಟ್ಟನ್ನು ಸೃಷ್ಟಿಮಾಡಕೊಳ್ಳಬೇಡಿ. ತೇಲುತ್ತಿರಿ. ದಾರಿ ತಪ್ಪುವುದರ ಬಗ್ಗೆ ಭಯ ಬೆಳೆಸಿಕೊಳ್ಳುವಿರಾದರೆ, ಖಂಡಿತವಾಗಿ ನೀವು ದಾರಿ ತಪ್ಪುತ್ತೀರಿ ; ಯಾವುದನ್ನು ನೀವು ಹತ್ತಿಕ್ಕುವುದಕ್ಕೆ ಪ್ರಯತ್ನ ಮಾಡುತ್ತಿರೋ ಅದು ನಿಮಗೆ ಮಹತ್ವದ್ದಾಗುತ್ತ ಹೋಗುತ್ತದೆ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ಯಾವುದನ್ನ ನೀವು ನಿರಾಕರಿಸುವ ಪ್ರಯತ್ನ ಮಾಡುತ್ತ ಹೋಗುತ್ತಿರೋ ಅದು ನಿಮಗೆ ಆಕರ್ಷಕವಾಗುತ್ತ ಹೋಗುತ್ತದೆ. ಆದ್ದರಿಂದ ದಾರಿ ತಪ್ಪುವುದರ ಬಗ್ಗೆ ಖಂಡನಾತ್ಮಕ ಭಾವವನ್ನು ಬೆಳೆಸಿಕೊಳ್ಳಬೇಡಿ. ಈ ಭಾವದೊಂದಿಗೆ ಮುಂದುವರೆಯಿರಿ. ಅದು ಸಂಭವಿಸುತ್ತಿದೆಯಾದರೆ, ಸಂಭವಿಸಲು ಅವಕಾಶ ಮಾಡಿಕೊಡಿ. ಇದರಲ್ಲಿ ಯಾವ ತಪ್ಪೂ ಇಲ್ಲ. ಅದು ಸಂಭವಿಸುತ್ತಿದೆಯಾದರೆ ಅದರಲ್ಲಿ ಏನೋ ಒಂದು ಮಹತ್ವದ್ದು ಇರಲೇಬೇಕು. ಕೆಲವೊಮ್ಮೆ ದಾರಿತಪ್ಪುವುದು ಕೂಡ ಒಳ್ಳೆಯದು. ಯಾರು ತಮ್ಮ ಕೇಂದ್ರದಲ್ಲಿ ಸ್ಥಿರವಾಗಿರಲು ಬಯಸುತ್ತಾರೋ ಅವರು ಆ ಬಗ್ಗೆ ಚಿಂತೆ ಮಾಡಬಾರದು. ಹಾಗೇನಾದರೂ ಚಿಂತೆ ಮಾಡಿದರಾದರೆ, ಆ ಚಿಂತೆ ನಿಮ್ಮನ್ನು ಕೇಂದ್ರದಲ್ಲಿ ಸ್ಥಿರವಾಗಿರಲು ಬಿಡುವುದಿಲ್ಲ ; ನಿಮ್ಮ ಮನಸ್ಸು ಚಿಂತೆಯಿಂದ ಹೊರತಾಗಬೇಕು.
ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದನ್ನು ನಿಲ್ಲಿಸಿ. ಜಯ – ಮತ್ತು ಶರಣಾಗತಿಗಳ ಐಡಿಯಾ ಮತ್ತು ಈ ಕುರಿತಾದ ಬಿಕ್ಕಟ್ಟುಗಳಿಗೆ ಕೊನೆ ಹೇಳಿ. ನೀವು ಶರಣಾಗುತ್ತಿದ್ದೀರಾದರೆ ಬೇರೇನು ಮಾಡಲು ಸಾಧ್ಯ ನಿಮ್ಮಿಂದ? ಮೈಂಡ್ ದಾರಿತಪ್ಪುತ್ತಿದೆಯಾದರೆ, ಹಿಂಬಾಲಿಸಿ, ಹಾಗಾಗುತ್ತಿಲ್ಲವಾದರೆ ಅದು ಕೂಡ ಒಳ್ಳೆಯದೇ. ಕೆಲವೊಮ್ಮೆ ಏಕಾಗ್ರತೆ ಸಾಧ್ಯ, ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಅಂತರಾಳದಲ್ಲಿ ನೀವು ಕೇಂದ್ರದಲ್ಲಿ ಸ್ಥಿರವಾಗಿದ್ದೀರಿ ಏಕೆಂದರೆ ನೀವು ಈ ಕುರಿತಾದ ಯಾವ ಚಿಂತೆಗೂ ಒಳಗಾಗಿಲ್ಲ. ಇಲ್ಲವಾದರೆ ಎಲ್ಲವೂ ಚಿಂತೆಯ ಪರಿಧಿಯಲ್ಲಿ ಇರುತ್ತಿದ್ದವು. ಆಗ ದಾರಿತಪ್ಪುವುದೆಂದರೆ ಪಾಪ ಮಾಡಿದಂತೆ. ಹೀಗಾದಾಗ ಮತ್ತೊಂದು ಸಮಸ್ಯೆ ಉದ್ಭವವಾಗುತ್ತದೆ.
ನಿಮ್ಮೊಳಗೆ ಯಾವ ದ್ವಂದ್ವವನ್ನೂ ಹುಟ್ಟುಹಾಕಿಕೊಳ್ಳಲಿಕ್ಕೆ ಹೋಗಬೇಡಿ. ಯಾವಾಗಲೂ ಸತ್ಯವಾಗಿರಬೇಕೆಂದು ನೀವು ಬಯಸುತ್ತೀರಾದರೆ ಅಸತ್ಯದ ಕುರಿತಾದ ಆಕರ್ಷಣೆ ನಿಮ್ಮನ್ನು ಸೆಳೆಯುತ್ತದೆ. ನೀವು ಅಹಿಂಸಾವಾದಿಯಾದರೆ ಆಗ ಹಿಂಸೆಯನ್ನು ನೀವು ಪಾಪ ಎಂದು ಪರಿಗಣಿಸುತ್ತೀರಿ. ಬ್ರಹ್ಮಚರ್ಯವನ್ನು ನೀವು ಪವಿತ್ರ ಎಂದು ತಿಳಿದಾಗ, ಸೆಕ್ಸ್ ನ ನೀವು ಪಾಪ ಎಂದು ತಿಳಿಯುತ್ತೀರಿ. ನೀವು ಕೇಂದ್ರದಲ್ಲಿ ಸ್ಥಿರವಾಗ ಬಯಸುವಿರಾದರೆ ಆಗ ನಿಮಗೆ ದಾರಿತಪ್ಪುವುದು ಪಾಪ ವಾಗುತ್ತದೆ. ಹೀಗೆಯೇ ಎಲ್ಲ ಧರ್ಮಗಳು ಮೂರ್ಖತನದ ಕೂಪಗಳಾಗಿವೆ. ದಾರಿತಪ್ಪುವುದನ್ನು ಸ್ವೀಕಾರ ಮಾಡಿ ; ಇದರಲ್ಲಿ ಯಾವ ತಪ್ಪೂ ಇಲ್ಲ.
ನಸ್ರುದ್ದೀನ್ ನ ಗರ್ಲಫ್ರೆಂಡ್ ನಾಸ್ತಿಕಳಾದ್ದರಿಂದ, ಅವನ ಮನೆಯಲ್ಲಿ ಎಲ್ಲರಿಗೂ ನಸ್ರುದ್ದೀನ್ ಆ ಹುಡುಗಿಯನ್ನ ಮದುವೆಯಾಗುವುದರ ಬಗ್ಗೆ ಹಿಂಜರಿಕೆಯಿತ್ತು. ಒಂದು ದಿನ ನಸ್ರುದ್ದೀನ್ ನ ತಾಯಿ ನಸ್ರುದ್ದೀನ್ ಜೊತೆ ಮಾತನಾಡಿದಳು,
“ ನಮ್ಮದು ದೇವರನ್ನು ನಂಬುವ ಕುಟುಂಬ ಹಾಗಾಗಿ ಆ ಹುಡುಗಿ ನಮ್ಮ ಕುಟುಂಬದಲ್ಲಿ ಸೇರಿದಾಗ ಅವಳಿಗೆ ತೊಂದರೆ ಆಗಬಹುದು. ನೀನು ಅವಳಿಗೆ ದೇವರ ಬಗ್ಗೆ, ಧರ್ಮದ ಬಗ್ಗೆ ಪಾಠ ಮಾಡಿ ಮನ ಬದಲಿಸು “
ತಾಯಿಯ ಮಾತಿನಂತೆ ನಸ್ರುದ್ದೀನ್ ತನ್ನ ಗೆಳತಿಗೆ ದೇವರು-ಧರ್ಮದ ಬಗ್ಗೆ ತಲೆ ತುಂಬತೊಡಗಿದ, ವಿವಿಧ ಧಾರ್ಮಿಕ ಗ್ರಂಥಗಳ ಪರಿಚಯ ಮಾಡಿಕೊಟ್ಟ, ಹಿರಿಯ ಧಾರ್ಮಿಕ ವಿದ್ವಾಂಸರ ಪರಿಚಯ ಮಾಡಿಕೊಟ್ಟ.
ಕೆಲ ದಿನಗಳ ನಂತರ ನಸ್ರುದ್ದೀನ್ ನ ತಾಯಿ ವಿಚಾರಿಸಿದಳು, “ ನಸ್ರುದ್ದೀನ್ , ನಿನ್ನ ಗೆಳತಿಯನ್ನ ಆಸ್ತಿಕಳನ್ನಾಗಿ ಬದಲಾಯಿಸಲು ನೀನು ಮಾಡುತ್ತಿರುವ ಪ್ರಯತ್ನಗಳನ್ನ ನೋಡುತ್ತಿರುವೆ, ಖಂಡಿತ ನಿನ್ನ ಪ್ರಯತ್ನದಲ್ಲಿ ಸಫಲನಾಗುತ್ತೀಯ, ಯಾವಾಗ ಮದುವೆ ಇಟ್ಟುಕೊಳ್ಳುವುದು ? “
“ ಆಕೆಯೊಡನೆ ಮದುವೆ ಈಗ ಸಾಧ್ಯವಿಲ್ಲ , ಆಕೆಯನ್ನ ಧಾರ್ಮಿಕ ವ್ಯಕ್ತಿಯಾಗಿಸಲು ನಾನು ಮಾಡಿದ ಪ್ರಯತ್ನ ಸ್ವಲ್ಪ ಜಾಸ್ತಿ ಆಯಿತು ಅನಿಸುತ್ತದೆ. ಈಗ ಆಕೆ ನನ್ ( ಕ್ರೈಸ್ತ ಸನ್ಯಾಸಿನಿ ) ಆಗುವ ನಿರ್ಧಾರ ಮಾಡಿದ್ದಾಳೆ “
ನಸ್ರುದ್ದೀನ್ ನಿರಾಶೆಯಿಂದ ತಾಯಿಗೆ ಎಲ್ಲ ವಿವರಿಸಿದ.

