ನೀವು ಇರುವಲ್ಲಿಯೇ ಇದೆ ಎಲ್ಲ ದೈವಿಕತೆಯು. ನಿಮ್ಮ ಇರುವಿಕೆಯ ಕೇಂದ್ರವೇ ಅದರ ಕೇಂದ್ರವೂ ಹೌದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದೇವರು ನಿಮ್ಮ ಹುಡುಕಾಟದ ವಸ್ತುವಾಗುವುದು ಸಾಧ್ಯವಿಲ್ಲ ; ಅವನು ವ್ಯಕ್ತಿಗತವಾಗಿಯೇ ಉಳಿದುಕೊಳ್ಳುತ್ತಾನೆ. ಅವನನ್ನು ನೀವು ಎಲ್ಲೋ ಹುಡುಕುವುದು ಸಾಧ್ಯವಿಲ್ಲ ಏಕೆಂದರೆ ಅವನು ಎಲ್ಲೆಲ್ಲೂ ಇದ್ದಾನೆ, ಮತ್ತು ಅವನನ್ನು ನೀವು ಎಲ್ಲೆಲ್ಲೋ ಹುಡುಕುತ್ತಿರುವಿರಾದರೆ ಅವನು ನಿಮಗೆ ಎಲ್ಲೂ ಸಿಗುವುದಿಲ್ಲ. ಇರುವುದೆಲ್ಲವೂ ದೈವಿಕವಾಗಿಯೇ ಇದೆ. ದೇವರು ಎಂದರೆ ಇಡೀ ಅಸ್ತಿತ್ವ , ಸಮಗ್ರತೆ, ನಿಮ್ಮನ್ನು ಸುತ್ತುವರೆದಿರುವ ಮಹಾಸಾಗರ, ಬದುಕಿನ ಸಮುದ್ರ.
ಈ ಆಪ್ತ ಹುಡುಕಾಟ ಮತ್ತು ಪರಿಶೀಲನೆಯಲ್ಲಿ, ನಾವು ನೆನಪಿಡಬೇಕಾದ ಮೆದಲ ಸಂಗತಿಯೆಂದರೆ, ಯಾವ ಆಪ್ತ ಅನುಭವವನ್ನ ಜನ ದೇವರು ಎನ್ನುತ್ತಾರೋ, ಬುದ್ಧ ಎನ್ನುತ್ತಾರೋ, ನಿರ್ವಾಣ ಎನ್ನುತ್ತಾರೋ, ಯಾವದನ್ನ ಜೀಸಸ್ kingdom of God ಎನ್ನುತ್ತಾನೋ, ಹೆಸರು ಬೇರೆ ಬೇರೆಯಾದರೂ ಯಾವುದು ಒಂದೇ ಅನುಭವವನ್ನು ಸಾಧ್ಯ ಮಾಡುತ್ತದೆಯೋ, ಇವುಗಳ ಹುಡುಕಾಟದಲ್ಲಿ ನಾವು ನೆನಪಿಡಬೇಕಾದ ಮೊದಲ ಸಂಗತಿಯೆಂದರೆ, ಇದು ಎಲ್ಲೋ ದೂರ ಇಲ್ಲ, ನೀವು ಇದ್ದಲ್ಲಿಯೇ ಇದೆ. ಈ ಕ್ಷಣದಲ್ಲಿ ಕೂಡ ನೀವು ಅವನ ಜೊತೆಯೇ ಇದ್ದೀರಿ, ಅವನನ್ನೇ ಉಸಿರಾಡುತ್ತಿದ್ದೀರಿ, ಅವನನ್ನು ಅವನ ಮೂಲಕವೇ ಬದುಕುತ್ತಿದ್ದೀರಿ.
ಇದನ್ನು ನೀವು ನಿರಂತರವಾಗಿ ನೆನಪಿಡಬೇಕಾಗುತ್ತದೆ, ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ ; ಒಂದು ಕ್ಷಣವೂ ನೀವು ಇದನ್ನು ಮರೆಯಲು ಹೋಗಬೇಡಿ ಏಕೆಂದರೆ ನೀವು ಇದನ್ನು ಮರೆತ ಕ್ಷಣದಲ್ಲಿಯೇ ದಾರಿತಪ್ಪಿ ಬಿಡುತ್ತೀರಿ. ಆಗ ನೀವು ಇನ್ನೆಲ್ಲೋ ಹುಡುಕಲು ಶುರು ಮಾಡುತ್ತೀರಿ. ದಯವಿಟ್ಟು ಮರೆಯಲು ಹೋಗಬೇಡಿ, ನೀವು ಇರುವಲ್ಲಿಯೇ ಇದೆ ಎಲ್ಲ ದೈವಿಕತೆಯು. ನಿಮ್ಮ ಇರುವಿಕೆಯ ಕೇಂದ್ರವೇ ಅದರ ಕೇಂದ್ರವೂ ಹೌದು.
ಇದು ಸದಾ ನಿಮ್ಮ ನೆನಪಿನಲ್ಲಿದೆಯಾದರೆ ನಿಮ್ಮ ಹುಡುಕಾಟ, ಗುಣಾತ್ಮಕವಾಗಿ ವಿಭಿನ್ನವಾಗಿರುತ್ತದೆ. ಆಗ ನೀವು ಯಾವುದೋ ಹೊರಗಿನದನ್ನು ಹುಡುಕುತ್ತಿಲ್ಲ, ಒಳಗಿನದನ್ನು ಹುಡುಕುತ್ತಿದ್ದೀರಿ. ಆಗ ನೀವು ಮುಂದೆ ಭವಿಷ್ಯದಲ್ಲಿ ಯಾವಾಗಲೋ ಸಂಭವಿಸಲಿರುವುದನ್ನು ಹುಡುಕುತ್ತಿಲ್ಲ, ಅದು ಈ ಕ್ಷಣದಲ್ಲಿ ಆಗಬಹುದು; ಅದು ಈಗಾಗಲೇ ಸಂಭವಿಸುತ್ತಿದೆ. ಆಗ ನಿಮಗೆ ಸಂಬಂಧಿಸಿದ ಎಲ್ಲವೂ ರಿಲ್ಯಾಕ್ಸ್ ಆಗಿರುತ್ತವೆ. ಸತ್ಯ ಎಲ್ಲೋ ಮುಂದೆ ಸಂಭವಿಸಲಿದೆಯಾದರೆ, ಖಂಡಿತ ನೀವು ಟೆನ್ಸ್ ಆಗಲೇಬೇಕು, ಚಿಂತಿತರಾಗಲೇ ಬೇಕು, ಆಳ ಆತಂಕ ನಿಮ್ಮನ್ನು ಆವರಿಸಿಕೊಳ್ಳಲೇ ಬೇಕು. ಭವಿಷ್ಯದಲ್ಲಿ ಅದು ಸಂಭವಿಸುವುದೋ ಇಲ್ಲವೋ ಯಾರಿಗೆ ಗೊತ್ತು? ಭವಿಷ್ಯ ಅನಿಶ್ಚಿತವಾದದ್ದು, ನೀವು ಮಿಸ್ ಮಾಡಿಕೊಂಡುಬಿಡುತ್ತೀರ, ಎಷ್ಟೋ ಸಮಯದಿಂದ ಮಿಸ್ ಮಾಡಿಕೊಳ್ಳುತ್ತಿದ್ದೀರ ಕೂಡ.
ಒಮ್ಮೆ ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.
Osho / Vedanta Seven Steps to Samadhi” / Chapter:1


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/22/osho-480/ […]
LikeLike