ಒಮ್ಮೆ ನಿಮಗೆ ಪ್ರೇಮ ಏನು ಎನ್ನುವುದು ಗೊತ್ತಾಗಿಬಿಟ್ಚರೆ, ಅದನ್ನು ಕೊಡುವುದರ ಹೊರತಾಗಿ ಬೇರೆ ದಾರಿ ಇಲ್ಲ ನಿಮಗೆ. ಹೆಚ್ಚು ಪ್ರೇಮವನ್ನು ಕೊಟ್ಟಷ್ಟೂ ನೀವು ಹೆಚ್ಚು ಹೆಚ್ಚು ಪ್ರೇಮವನ್ನು ವಾಪಸ್ ಪಡೆಯುವಿರಿ. ನೀವು ಪ್ರೇಮವನ್ನು ಇತರರ ಮೇಲೆ ಹೆಚ್ಚು ಸುರಿಸಿದಷ್ಟು, ಹೆಚ್ಚು ಹೆಚ್ಚು ಪ್ರೇಮ ನಿಮ್ಮೊಳಗೆ ಸೆಲೆ ಒಡೆಯುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಇಷ್ಟು ದಿನಗಳಾದರೂ
ಸೂರ್ಯ,
ಒಮ್ಮೆಯೂ ಹೇಳಿಲ್ಲ ಭೂಮಿಗೆ
“ನೀನು ನನ್ನ ಋಣದಲ್ಲಿರುವೆ “
ನೋಡಿ ಇಂಥ ಪ್ರೀತಿ
ಹೇಗೆ ಬೆಳಕ ಹೊತ್ತಿಸಿದೆ
ಆಕಾಶದಲ್ಲಿ.
– ಹಾಫಿಜ್
ಸ್ವೀಕರಿಸಲು ಇನ್ನೊಬ್ಬರು ಯೋಗ್ಯರೋ ಅಲ್ಲವೋ ಎನ್ನುವುದರ ಬಗ್ಗೆ ಪ್ರೇಮ, ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗೆ ಯೋಚಿಸುವುದು ಜಿಪುಣತನ ಮತ್ತು ಯಾವ ಕಾಲಕ್ಕೂ ಪ್ರೇಮ ಇಂಥ ಜಿಪುಣತನದಿಂದ ಹೊರತಾಗಿರುವಂಥದು. ಮಳೆ ಸ್ವೀಕರಿಸಲು ಭೂಮಿ ಯೋಗ್ಯವೋ ಅಲ್ಲವೋ ಎನ್ನುವುದರ ಕುರಿತು ಮೋಡ ಯೋಚಿಸುವುದಿಲ್ಲ. ಮೋಡ, ಪರ್ವತಗಳ ಮೇಲೆ ಮಳೆ ಸುರಿಸುತ್ತದೆ, ಕಣಿವೆಗಳ ಮೇಲೆ ಮಳೆ ಸುರಿಸುತ್ತದೆ, ಯಾವುದರ ಮೇಲೂ, ಎಲ್ಲದರ ಮೇಲೂ ಮೋಡ ಯಾವ ಕರಾರುಗಳಿಲ್ಲದೆ ಮಳೆ ಸುರಿಸುತ್ತದೆ.
ಪ್ರೇಮ ಇರುವುದೇ ಹೀಗೆ : ಅದು ಸುಮ್ಮನೇ ತನ್ನನ್ನು ತಾನು ಹಂಚಿಕೊಳ್ಳುತ್ತದೆ, ಹಂಚಿಕೊಳ್ಳುವುದೆಂದರೆ ಅದಕ್ಕೆ ಖುಶಿ. ಸ್ವೀಕರಿಸಲು ಯಾರು ಬಯಸುತ್ತಾರೋ ಅವರು ಸ್ವೀಕರಿಸುತ್ತಾರೆ. ಸ್ವೀಕರಿಸಲು ಅವರು ಯೋಗ್ಯರಾಗಿರಬೇಕಿಲ್ಲ, ಅವರು ಯಾವುದೇ ವಿಶೇಷ ವಿಭಾಗದವರಾಗಿರಬೇಕಿಲ್ಲ, ಯಾವ ಅರ್ಹತೆಯನ್ನೂ ಹೊಂದಿರಬೇಕಿಲ್ಲ. ಸ್ವೀಕರಿಸುವವರು ಈ ಎಲ್ಲ ಕರಾರುಗಳನ್ನು ಪೂರೈಸಲೇಬೇಕಾಗಿದ್ದರೆ, ನೀವು ಕೊಡುತ್ತಿರುವುದು ಪ್ರೇಮವಲ್ಲ, ಬೇರೆ ಏನೋ.
ಒಮ್ಮೆ ನಿಮಗೆ ಪ್ರೇಮ ಏನು ಎನ್ನುವುದು ಗೊತ್ತಾಗಿಬಿಟ್ಚರೆ, ಅದನ್ನು ಕೊಡುವುದರ ಹೊರತಾಗಿ ಬೇರೆ ದಾರಿ ಇಲ್ಲ ನಿಮಗೆ. ಹೆಚ್ಚು ಪ್ರೇಮವನ್ನು ಕೊಟ್ಟಷ್ಟೂ ನೀವು ಹೆಚ್ಚು ಹೆಚ್ಚು ಪ್ರೇಮವನ್ನು ವಾಪಸ್ ಪಡೆಯುವಿರಿ. ನೀವು ಪ್ರೇಮವನ್ನು ಇತರರ ಮೇಲೆ ಹೆಚ್ಚು ಸುರಿಸಿದಷ್ಟು, ಹೆಚ್ಚು ಹೆಚ್ಚು ಪ್ರೇಮ ನಿಮ್ಮೊಳಗೆ ಸೆಲೆ ಒಡೆಯುವುದು.
ಸಾಮಾನ್ಯ ಅರ್ಥಶಾಸ್ತ್ರದ ತಿಳುವಳಿಕೆ ಸಂಪೂರ್ಣವಾಗಿ ವಿಭಿನ್ನ. ಅದರ ಪ್ರಕಾರ, ನೀವು ಏನನ್ನಾದರೂ ಕೊಡುವಿರಾದರೆ, ನೀವು ಅದನ್ನ ನಿಮ್ಮಿಂದ ಕಳೆದುಕೊಳ್ಳುವಿರಿ. ಏನನ್ನಾದರೂ ಉಳಿಸಿಕೊಳ್ಳಬೇಕಾದರೆ ನೀವು ಅದನ್ನ ಕೊಡಬಾರದು, ಹಂಚಬಾರದು. ಸಂಗ್ರಹಿಸಬೇಕು, ಜಿಪುಣರಾಗಬೇಕು. ಆದರೆ ಪ್ರೇಮದ ಅರ್ಥಶಾಸ್ತ್ರ ಅದಕ್ಕೆ ಸಂಪೂರ್ಣವಾಗಿ ವಿರುದ್ಧ : ಪ್ರೇಮವನ್ನು ಉಳಿಸಿಕೊಳ್ಳಲು ನೀವು ಅದನ್ನು ಕೊಡಲೇಬೇಕು, ಹಂಚಲೇಬೇಕು. ಈ ವಿಷಯದಲ್ಲಿ ಜಿಪುಣರಾದರೆ ನೀವು ಜೀವಂತಿಕೆಯನ್ನು ಕಳೆದುಕೊಳ್ಳುತ್ತೀರಿ. ಆಗ ನಿಮ್ಮ ಪ್ರೇಮ ಹಳಸಿ ಹೋಗುತ್ತದೆ.
ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ
ಮಾತು ಹೇಳುತ್ತಾನೆ….
ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ
ವಾಪಸ್ ಪಡೆಯಲಾಗುವುದು.
ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ ,
ಪ್ರತಿಗಾಮಿ ಅನಿಸಬಹುದು.
ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ
ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.
ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ
ಕಸಿದುಕೊಳ್ಳಲಾಗುವುದು.
ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.
ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.
ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.
ಈ ಬದುಕು ಈಗಾಗಲೇ ಅಪಾರ.
ಅಪರಿಮಿತ ಬದುಕಿನ ಬಗ್ಗೆ,
ಬದುಕಿನ ಚಿಕ್ಕ ಪುಟ್ಚ ಸಂಗತಿಗಳ ಬಗ್ಗೆ ಕೂಡ
ಉನ್ಮತ್ತರಾಗಿರಿ.
ಪ್ರತಿ ಆಹಾರವೂ ದಿವ್ಯ ಸಂಸ್ಕಾರವಾಗಲಿ,
ಇನ್ನೊಬ್ಬರ ಕೈ ಕುಲುಕುವುದೂ ಪ್ರಾರ್ಥನೆಯಾಗಲಿ,
ಸುತ್ತಲಿನ ಜನರೊಡನೆಯ ಸಹವಾಸ
ಪರಮ ಆನಂದ ನೀಡಲಿ,
ಏಕೆಂದರೆ, ನಿಮಗೆ ಲಭ್ಯವಾಗಿರುವುದು
ಎಲ್ಲಿಯೂ, ಇನ್ನಾರಿಗೂ ಸಾಧ್ಯವಾಗಿಲ್ಲ.
ಪ್ರೇಮವನ್ನು ಕೊಡುತ್ತಲೇ ಹೋದಾಗ, ಪ್ರೇಮದ ಹೊಸ ಹೊಸ ಸ್ರೋತಗಳು ನಿಮ್ಮೊಳಗೆ ಅನಾವರಣಗೊಳ್ಳುತ್ತ ಹೋಗುತ್ತವೆ. ಹೊಸ ಹೊಸ ಸೆಲೆಗಳು ನಿಮ್ಮ ಮೂಲಕ ಹರಿಯತೊಡಗುತ್ತವೆ. ಪ್ರೇಮದ ನಿಮ್ಮ ಕೊಡುವಿಕೆ ಪೂರ್ಣವಾಗಿದ್ದಾಗ, ಕರಾರುರಹಿತವಾಗಿದ್ದಾಗ ಇಡೀ ಅಸ್ತಿತ್ವ, ನಿಮ್ಮೊಳಗೆ ಇನ್ನಷ್ಟು ಮತ್ತಷ್ಟು ಪ್ರೇಮವನ್ನು ತುಂಬುತ್ತ ಹೋಗುತ್ತದೆ.

