ಒಂದು ಹಾಡಿಗಾಗಿ ಸಿನೇಮಾ ಶೂಟಿಂಗ್ ೬ ತಿಂಗಳುಗಳ ಕಾಲ ನಿಂತು ಹೋದ ಘಟನೆ. ಚಿತ್ರ, ರಾಜ್ ಅಭಿನಯದ ಭಕ್ತ ಕುಂಬಾರ. ಈ ಘಟನೆಯನ್ನ ಸಿನೇಮಾ ಪತ್ರಕರ್ತ ಶ್ರೀಧರ ಮೂರ್ತಿಯವರು ಹೀಗೆ ನೆನಪು ಮಾಡಿಕೊಳ್ಳುತ್ತಾರೆ… | ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಚಿತ್ರದ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರಿಗೆ , “ಕಂಡೆ ಹರಿಯ ಕಂಡೆ” ಎನ್ನುವ ಹಾಡನ್ನ ಸಿನೇಮಾದಲ್ಲಿ ಸೇರಿಸುವ ಆಸೆ. ಆದರೆ ಡಾ. ರಾಜ್ ಗೆ ಈ ಹಾಡು ಸಿನೇಮಾಕ್ಕೆ ಯಾಕೋ ಸೂಕ್ತ ಅನಿಸಲಿಲ್ಲ. ಈ ಹಾಡಿನ ಮೂಲಕ ಹುಣಸೂರರಿಗೆ ಕೃಷ್ಣನ ರಾಸಲೀಲೆಯನ್ನ ಸಿನೇಮಾದಲ್ಲಿ ತೋರಿಸುವ ಆಸೆ. ಆದರೆ, ಗೋರಾ ಕುಂಬಾರ ಅನಕ್ಷರಸ್ಥ, ಅವನು ಹೇಗೆ ಆತ್ಮ ಪರಮಾತ್ಮ ಅಂತ ಯೋಚನೆ ಮಾಡಕಾಗತ್ತೆ, ಮೇಲಾಗಿ ಗೋರಾ, ಆತ್ಮ ಬೇರೆಯಲ್ಲ ಪರಮಾತ್ಮ ಬೇರೆಯಲ್ಲ ಅನ್ನೋ ವಿಟ್ಠಲ ಪಂಥದವನು, ಅವನ ಬಾಯಲ್ಲಿ ಆತ್ಮ, ಪರಮಾತ್ಮ ಬೇರೆ ಬೇರೆ ಎನ್ನುವ ಕೃಷ್ಣಪಂಥದ ವಿಚಾರ ಹೇಳಿಸುವುದು ಸರಿಯಲ್ಲ ಅಂತ ರಾಜ್ ವಾದ.
ಈ ಕಾರಣಕ್ಕಾಗಿಯೇ ಸಿನೇಮಾದ ಶೂಟಿಂಗ್ ಆರು ತಿಂಗಳುಗಳ ಕಾಲ ನಿಂತುಹೋಗಿತ್ತು. ನೋಡಿ ರಾಜ್ ಹೇಗೆ ಗಂಭೀರವಾಗಿ ತಮ್ಮ ಪಾತ್ರದ ಕುರಿತು ಆಲೋಚನೆ ಮಾಡುತ್ತಿದ್ದರು.
ಕೊನೆಗೆ ನಿರ್ಮಾಪಕರ ಪರವಾಗಿ ನಟ ರಾಜಾಶಂಕರ, ರಾಜಕುಮಾರ್ ರಿಗೆ ಒಂದು ಸಲಹೆ ನೀಡಿದರು, “ನೋಡಿ ಆಣ್ಣಾ, ಕನಸಲ್ಲಿ ಏನು ಬೇಕಾದರೂ ಆಗಬಹುದಲ್ವಾ, ಈ ಹಾಡನ್ನ ಗೋರಾ ಕುಂಬಾರನ ಕನಸಲ್ಲಿ ತೋರಿಸಿಬಿಡೋಣ, ಆಗ ಯಾರಿಗೂ ಸಮಸ್ಯೆ ಇರೋದಿಲ್ಲ”
ರಾಜ್ ಗೆ ಈ ಐಡಿಯಾ ಒಪ್ಪಿಗೆಯಾಯ್ತು, ನಂತರ ಆ ಹಾಡನ್ನ ಕುಂಬಾರ ಕನಸುವಂತೆ ಚಿತ್ರೀಕರಣ ಮಾಡಲಾಯ್ತು.

