ಪ್ರತಿಯೊಬ್ಬರೂ ನೆನಪಿಡಬೇಕಾದ ಸಂಗತಿಯೆಂದರೆ, ನಿಮ್ಮ ಜೊತೆ ಕೆಲಸ ಮಾಡುವ ಜನರಿಗೆ ನಿಮ್ಮ ಅಂತರಂಗದ ಬದುಕಿನ ಬಗ್ಗೆ ಯಾವ ಕಾಳಜಿಯೂ ಇರಲಿಕ್ಕಿಲ್ಲ ; ಅದರ ಬಗ್ಗೆ ಕಾಳಜಿ ಮಾಡುವುದು ನಿಮ್ಮ ಕೆಲಸ. ಪ್ರತಿಯೊಬ್ಬರಿಗೂ ಅವರವರ ಅಂತರಂಗದ ಬದುಕು ಇರುತ್ತದೆ ಕಾಳಜಿ ಮಾಡಲು ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ಕೆಲಸದ ಸಹೋದ್ಯೋಗಿಗಳಿಗೆ ಅವರವರದೇ ಆದ ನೆಗೆಟಿವ್ ಮೂಡ್ ಗಳಿರುತ್ತವೆ, ಅವರದೇ ಆದ ವೈಯಕ್ತಿಕ ಸಮಸ್ಯೆಗಳಿರುತ್ತವೆ, ಆತಂಕಗಳಿರುತ್ತವೆ ಎಲ್ಲರಿಗೂ ಇರುವ ಹಾಗೆ, ನಿಮ್ಮನ್ನೂ ಸೇರಿಸಿ. ಆದರೆ ನೀವು ಜೊತೆಗೂಡಿ ಕೆಲಸ ಮಾಡುವಾಗ ಈ ಸಂಗತಿಗಳು ಕೆಲಸದ ನಡುವೆ ಬರದಂತೆ ನೋಡಿಕೊಳ್ಳಬೇಕು. ಏಕೆಂದರೆ ನೀವು ನಿಮ್ಮ ನೆಗೆಟಿವಿಟಿಯೊಂದಿಗೆ, ಅವರು ಅವರ ನೆಗೆಟಿವಿಟಿಯೊಂದಿಗೆ ಜೊತೆಯಾಗುತ್ತಿದ್ದೀರೆಂದರೆ ಅದು ಎಂದೂ ಮುಗಿಯದ ಪ್ರೊಸೆಸ್.
ಕೆಲಸದ ಸಮಯದಲ್ಲಿ ನಿಮ್ಮೊಳಗೆ ನೆಗೆಟಿವ್ ಭಾವನೆಗಳು ಬರುತ್ತಿವೆಯೆಂದರೆ, ಈ ಕುರಿತು ಏನಾದರೂ ಮಾಡಿ ಉದಾಹರಣೆಗೆ, ನಿಮ್ಮ ಮನದ ನೆಗೆಟಿವ್ ಭಾವನೆಯನ್ನು ಒಂದು ಕಾಗದದ ಮೇಲೆ ಬರೆದು ಅದನ್ನು ಸುಟ್ಚು ಹಾಕಿ. ಥೆರಪಿ ರೂಮಿಗೆ ಹೋಗಿ. ತಲೆದಿಂಬಿಗೆ ಜೋರಾಗಿ ಹೊಡೆದು ಎಸೆದುಬಿಡಿ. ಕೆಟ್ಟದಾಗಿ ಡಾನ್ಸ್ ಮಾಡಿ. ನಿಮ್ಮ ನೆಗೆಟಿವಿಟಿಯನ್ನ ದೂರ ಮಾಡಿಕೊಳ್ಳಲು ನೀವೇ ಏನಾದರೂ ದಾರಿ ಕಂಡುಕೊಳ್ಳಬೇಕು, ಇದು ನಿಮ್ಮ ಸಮಸ್ಯೆ.
ಮತ್ತು ಯಾವಾಗಲಾದರೊಮ್ಮೆ ನಿಮ್ಮ ಸಹೋದ್ಯೋಗಿಯೊಂದಿಗೆ ನಿಮ್ಮ ನೆಗೆಟಿವಿಟಿಯ ಬಗ್ಗೆ ಮಾತನಾಡುವುದು ಒಳ್ಳೆಯದು. ನಿಮ್ಮ ವರ್ತನೆಯಿಂದ ಅವರಿಗೇನಾದರೂ ತೊಂದರೆಯಾಗುತ್ತಿದೆಯಾ? ಕೇಳುವುದು ಒಳ್ಳೆಯದು. ಏಕೆಂದರೆ ಕೆಲವೊಮ್ಮೆ ನಿಮ್ಮ ನೆಗೆಟಿವಿಟಿಯ ಬಗ್ಗೆ ನಿಮಗೆ ಗೊತ್ತಾಗುವುದಿಲ್ಲ. ನಿಮ್ಮ ಕೆಲವು ಹಾವಭಾವಗಳು, ಕೆಲವು ಪದಗಳು, ಒಮ್ಮೊಮ್ಮೆ ನಿಮ್ಮ ಮೌನ ಕೂಡ ಇನ್ನೊಬ್ಬರಿಗೆ ನೋವುಂಟು ಮಾಡಬಹುದು ; ನೀವು ಇನ್ನೊಬ್ಬರನ್ನು ನೋಡುವ ರೀತಿಯೇ ಅವರಿಗೆ ನೋವು ನೀಡಬಹುದು. ಆದ್ದರಿಂದ ಯಾವಾಗಲಾದರೂ ಒಮ್ಮೆ ಈ ಬಗ್ಗೆ ಅವರ ಕ್ಷಮೆ ಕೇಳಿ. ಅವರಿಗೆ ಹೇಳಿ, ಪ್ರತಿಬಾರಿ ಈ ಕುರಿತು ನೀವು ಅವರ ಜೊತೆ ಮಾತನಾಡಿದಾಗ ಪ್ರಾಮಾಣಿಕವಾಗಿರಲು ; ಏಕೆಂದರೆ ನೀವೂ ಮನುಷ್ಯರು, ನಿಮ್ಮಿಂದಲೂ ತಪ್ಪುಗಳು ಆಗಬಹುದು. ನೀವು ಸರಿಯಾದ ಫೀಡಬ್ಯಾಕ್ ಕೊಟ್ಟರೆ ಈ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ನಿಮಗೆ ಅವಕಾಶವಾಗುತ್ತದೆಯೆಂದು.
ಒಂದು ದಿನ ಆಫೀಸಿನ ಕೆಲಸಗಾರ ತನ್ನ ಬಾಸ್ ನಸ್ರುದ್ದೀನ್ ನ ಕಾಣಲು ಅವನ ಕ್ಯಾಬಿನ್ ಗೆ ಬಂದ.
ಕೆಲಸಗಾರ : ನನಗೆ ಸಂಬಳ ಜಾಸ್ತಿ ಮಾಡಿ. ಮನೆ ಖರ್ಚು ಜಾಸ್ತಿ ಆಗ್ತಿದೆ.
ನಸ್ರುದ್ದೀನ್ : ಒಮ್ಮಿಂದೊಮ್ಮೆಲೇ ನಿನ್ನ ಖರ್ಚು ಯಾಕೆ ಜಾಸ್ತಿ ಆಯ್ತು?
ಕೆಲಸಗಾರ : ಕಳೆದ ತಿಂಗಳು ನನ್ನ ಮದುವೆ ಆಯ್ತು.
ನಸ್ರುದ್ದೀನ್ : ಕಂಪನಿಯ ಹೊರಗೆ ಆದ ಅಪಘಾತಗಳಿಗೆ ಕಂಪನಿಯಿಂದ ನಷ್ಟ ಪರಿಹಾರ ಕೇಳುವ ಹಾಗಿಲ್ಲ.

