ಬದುಕು ಬಹಳ ಚಿಕ್ಕದು, ಮತ್ತು ಕಲಿಯುವುದು ಬಹಳ ಇದೆ ; ಯಾರು ಸಂಗತಿಗಳನ್ನು ಮುಂದೂಡುತ್ತ ಹೋಗುತ್ತಾರೋ ಅವರು ಅವುಗಳನ್ನ ಮಿಸ್ ಮಾಡಿಕೊಳ್ಳುತ್ತ ಹೋಗುತ್ತಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿನ ಈ ಎರಡು ದಿನ ಮಾತ್ರ
ನಿಮ್ಮಿಂದ ಏನೂ ಸಾಧ್ಯವಾಗುವುದಿಲ್ಲ.
ಒಂದು ನಿನ್ನೆಯ ದಿನ
ಇನ್ನೊಂದು ನಾಳೆಯ ದಿನ.
ಆದರೆ ಇಂದು, ಇವತ್ತಿನ ದಿನ ಮಾತ್ರ
ಸರಿಯಾದ ದಿನ
ಪ್ರೇಮಿಸಲು, ನಂಬಲು,
ನೀವು ಬಯಸಿದ್ದನ್ನೆಲ್ಲ ಸಾಧ್ಯ ಮಾಡಲು
ಮತ್ತು ಬಹುತೇಕ
ಇಡಿಯಾಗಿ ಬದುಕಲು.
~ ದಲಾಯಿ ಲಾಮಾ
ನೀವು ಹೆಚ್ಚು ಆನಂದಮಯ ಸ್ಥಿತಿಯತ್ತ ಚಲಿಸುತ್ತಿರುವಿರೋ ಇಲ್ಲವೋ ಎನ್ನುವ ಪ್ರಶ್ನೆಯನ್ನು, ನಿಮ್ಮನ್ನು ನೀವು ನಿರಂತರವಾಗಿ ಕೇಳಿಕೊಳ್ಳುತ್ತ ಹೋಗಿ. ನೀವು ಹೆಚ್ಚು ಹೆಚ್ಚು ಆನಂದಮಯ ಸ್ಥಿತಿಯತ್ತ ಮೂವ್ ಆಗುತ್ತಿರುವುರಾದರೆ, ನೀವು ಸರಿಯಾದ ದಾರಿಯಲ್ಲಿ ಇರುವಿರಿ. ಇನ್ನೂ ಆ ದಾರಿಯಲ್ಲಿ ಮುಂದುವರೆಯಿರಿ, ಇನ್ನೂ ಹೆಚ್ಚು ಆನಂದವನ್ನು ನಿಮ್ಮದಾಗಿಸಿಕೊಳ್ಳಿ. ಆದರೆ ನಿಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿದೆಯಾದರೆ, ಗಮನಿಸಿ ; ನೀವು ಎಲ್ಲೋ ದಾರಿ ತಪ್ಪಿದ್ದೀರಿ. ಏನೋ ಒಂದು ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಿದೆ; ನೀವು ಈಗ ಸಹಜವಾಗಿಲ್ಲ, ಸ್ವಾಭಾವಿಕವಾಗಿಲ್ಲ, ಪ್ರಕೃತಿಯಿಂದ ಹೊರತಾಗಿ ಪರಕೀಯತೆಯನ್ನು ಅನುಭವಿಸುತ್ತಿದ್ದೀರಿ, ಹಾಗಾಗಿ ಸಂಕಟದಲ್ಲಿದ್ದೀರಿ. ನಿಮ್ಮ ಸ್ಥಿತಿಯನ್ನು ಗಮನಿಸಿ, ವಿಶ್ಲೇಷಣೆ ಮಾಡಿ, ಮತ್ತು ನಿಮ್ಮ ಸಂಕಟಕ್ಕೆ ಕಾರಣವಾದವುಗಳನ್ನು ಡ್ರಾಪ್ ಮಾಡಿ. ಇದನ್ನು ಮುಂದೂಡಬೇಡಿ ; ತಕ್ಷಣ ಡ್ರಾಪ್ ಮಾಡಿ.
ಬದುಕು ಬಹಳ ಚಿಕ್ಕದು, ಮತ್ತು ಕಲಿಯುವುದು ಬಹಳ ಇದೆ ; ಯಾರು ಸಂಗತಿಗಳನ್ನು ಮುಂದೂಡುತ್ತ ಹೋಗುತ್ತಾರೋ ಅವರು ಅವುಗಳನ್ನ ಮಿಸ್ ಮಾಡಿಕೊಳ್ಳುತ್ತ ಹೋಗುತ್ತಾರೆ. ಇವತ್ತನ್ನು, ನೀವು ನಾಳೆಗೆ ಮುಂದೂಡುತ್ತೀರಿ ಮತ್ತು ನಾಳೆಯನ್ನು, ಮತ್ತೆ ನಾಳೆಗೆ. ನಿಧಾನಕ್ಕೆ, ಮುಂದೂಡುವುದು ನಿಮ್ಮ ಹವ್ಯಾಸವಾಗಿಬಿಡುತ್ತದೆ. ಯಾವತ್ತೂ ನಿಮ್ಮ ಹತೋಟಿಯಲ್ಲಿರುವುದು today ಮಾತ್ರ, ಎಂದೂ tomorrow ನಿಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಆದ್ದರಿಂದ ನೀವು ಸಂಗತಿಗಳನ್ನು ಮುಂದೂಡುತ್ತಲೇ ಹೋಗುತ್ತೀರಿ. ನಿಮ್ಮ ಶೋಚನೀಯ ಸ್ಥಿತಿಗೆ ಕಾರಣವಾದ ಸಂಗತಿಗಳು ಯಾವಾಗ ನಿಮ್ಮ ಗಮನಕ್ಕೆ ಬಂದರೂ ತಕ್ಷಣ ಅವುಗಳನ್ನು ಅಲ್ಲೇ ಡ್ರಾಪ್ ಮಾಡಿ, ಒಂದು ಗಳಿಗೆಯೂ ವಿಳಂಬ ಮಾಡಬೇಡಿ. ಇದು ನಿಜವಾದ ಧೈರ್ಯ : ಬದುಕುವುದಕ್ಕೆ ಬೇಕಾದ ಧೈರ್ಯ, ಅಪಾಯಕ್ಕೆ ತೆರೆದುಕೊಳ್ಳಲು ಬೇಕಾದ ಧೈರ್ಯ, ಸಾಹಸಕ್ಕೆ ಬೇಕಾದ ಧೈರ್ಯ. ಮತ್ತು ಯಾರು ನಿಜವಾದ ಧೈರ್ಯಶಾಲಿಗಳೋ ಅವರಿಗೆ ಮಾತ್ರ “ಸಮಸ್ತ” (whole) ಬಳುವಳಿ ನೀಡುತ್ತದೆ, ಬೆಳಕಿನ ಮೂಲಕ, ಪ್ರೇಮದ ಮೂಲಕ, ಆನಂದದ ಮೂಲಕ ಮತ್ತು ಹಾರೈಕೆಯ ಮೂಲಕ.
ಪೌರ್ವಾತ್ಯ ದೇಶಗಳಲ್ಲಿ ಮಂಗಗಳನ್ನು ಹಿಡಿಯಲು ಒಂದು ಕುತೂಹಲಕಾರಿ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.
ಒಂದು ತೆಂಗಿನಕಾಯಿನ್ನು ಖಾಲಿ ಮಾಡಿ ಅದನ್ನ ಮರಕ್ಕೆ ಜೋತು ಬಿಡುತ್ತಾರೆ. ಆ ತೆಂಗಿನಕಾಯಿಯಲ್ಲಿ ರಂಧ್ರ ಕೊರೆದು ಅದರಲ್ಲಿ ಒಂದಿಷ್ಟು ಅನ್ನ ತುಂಬುತ್ತಾರೆ. ತೆಂಗಿನಕಾಯಿಯಲ್ಲಿ ಕೊರೆದ ರಂಧ್ರ ಎಷ್ಟು ದೊಡ್ಡದಾಗಿರುತ್ತದೆ ಎಂದರೆ, ಒಂದು ಮಂಗದ ಕೈ ಒಳಗೆ ಹೋಗುವಷ್ಟು ಮಾತ್ರ.
ಹಸಿದ ಮಂಗ , ಜೋತು ಬಿಟ್ಟ ತೆಂಗಿನಕಾಯಿ ನೋಡಿ, ಮರ ಏರಿ , ಆ ಕೊರೆದ ರಂಧ್ರದಲ್ಲಿ ಕೈ ಹಾಕಿ , ಅದರೊಳಗಿನ ಅನ್ನವನ್ನು ತನ್ನ ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕೈ ಹೊರ ತೆಗೆಯಲು ಪ್ರಯತ್ನಿಸುತ್ತದೆ. ಆದರೆ ಸಾಧ್ಯವಾಗುವುದೇ ಇಲ್ಲ. ಆಗಲೇ ಮಂಗ ಸಿಕ್ಕಿಹಾಕಿಕೊಳ್ಳುತ್ತದೆ.
ತಾನು ಕೈಯಲ್ಲಿ ಹಿಡಿದುಕೊಂಡಿರುವುದೇ ತನ್ನನ್ನು ಸಿಕ್ಕಿ ಹಾಕಿಸಿದೆ ಅನ್ನೋದು ಕೊನೆಗೂ ಗೊತ್ತೇ ಆಗುವುದಿಲ್ಲ ಆ ಮಂಗನಿಗೆ.

