ಕವಿತೆಯಲ್ಲಿ ನಂಬಿಕೆಯಿರಲಿ ( Belive in Poetry) : ಓಶೋ 365 #Day43

ಬದುಕು ಎಂದೂ ತೀರದ ನಿಧಿ
ಆದರೆ ಇದು ಕವಿಯ ಹೃದಯಕ್ಕೆ ಮಾತ್ರ ಗೊತ್ತು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೇಮವೊಂದೇ ನಿಜವಾದ ಕವಿತೆ. ಬಾಕಿ ಎಲ್ಲವೂ ಇದರ ಪ್ರತಿಫಲನಗಳು. ಧ್ವನಿಯಲ್ಲಿ ಕವಿತೆಯಿರಬಹುದು, ಕಲ್ಲಿನಲ್ಲಿ ಕವಿತೆಯಿರಬಹುದು, ವಾಸ್ತುಶಿಲ್ಪದಲ್ಲಿ ಕವಿತೆಯಿರಬಹುದು ಆದರೆ ಈ ಎಲ್ಲವೂ ಮೂಲಭೂತವಾಗಿ ಪ್ರೇಮ, ಬೇರೆ ಬೇರೆ ಮಾಧ್ಯಮಗಳಲ್ಲಿ ತನ್ನನ್ನು ತಾನು ಕಂಡುಕೊಂಡ ರೀತಿ. ಆದರೆ ಕವಿತೆಯ ಆತ್ಮ, ಪ್ರೇಮ. ಮತ್ತು ಯಾರು ಪ್ರೇಮವನ್ನು ಬದುಕುತ್ತಾರೋ ಅವರು ಮಾತ್ರ ನಿಜವಾದ ಕವಿಗಳು. ಅವರು ಎಂದೂ ಕವಿತೆಯನ್ನು ಬರೆಯದಿರಬಹುದು, ಎಂದೂ ಸಂಗೀತ ಸಂಯೋಜನೆ ಮಾಡದಿರಬಹುದು, ಅವರು ಜನ ಸಾಧಾರಣವಾಗಿ ಯಾವುದನ್ನ ಕಲೆ ಎನ್ನುತ್ತಾರೋ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರಬಹುದು ಆದರೆ, ಯಾರು ಪ್ರೇಮವನ್ನು ಬದುಕುತ್ತಾರೋ. ಅದಮ್ಯವಾಗಿ ಪ್ರೇಮಿಸುತ್ತಾರೋ ಅವರು ಮಾತ್ರ ನಿಜವಾದ ಕವಿಗಳು.

ಯಾವುದೇ ಒಂದು ಧರ್ಮ, ಅದು ನಿಮ್ಮೊಳಗೆ ಒಬ್ಬ ಕವಿಯನ್ನು ಹುಟ್ಚುಹಾಕುತ್ತದೆಯೆಂದರೆ ಅದು ನಿಜವಾದ ಧರ್ಮ. ಅಕಸ್ಮಾತ್ ಅದು ನಿಮ್ಮೊಳಗಿನ ಕವಿಯನ್ನು ಕೊಂದು ಸೋ ಕಾಲ್ಡ್ ಸಂತನನ್ನು ಹುಟ್ಟುಹಾಕುತ್ತದೆಯೆಂದರೆ, ಅದು ಧರ್ಮ ಅಲ್ಲ. ಅದು  ಒಂದು ರೋಗ, ಧಾರ್ಮಿಕ ಪದಗಳಿಂದ ಅಲಂಕರಿಸಲ್ಪಟ್ಟ ಮಾನಸಿಕ ವ್ಯಾಧಿ. ನಿಜವಾದ ಧರ್ಮ ಯಾವಾಗಲೂ ನಿಮ್ಮೊಳಗಿನ ಕವಿಯನ್ನು ಅನಾವರಣಗೊಳಿಸುತ್ತದೆ, ಮತ್ತು ಪ್ರೇಮ, ಕಲೆ, ಸೃಜನಶೀಲತೆಯನ್ನು ಉದ್ದೀಪಿಸುತ್ತ ನಿಮ್ಮನ್ನು ಹೆಚ್ಚು ಹೆಚ್ಚು ಸಂವೇದನಾಶೀಲರನ್ನಾಗಿಸುತ್ತದೆ. ಆಗ ನೀವು ಹೆಚ್ಚು ಮಿಡಿಯುತ್ತೀರಿ, ನಿಮ್ಮ ಹೃದಯ ಮಿಡಿಯಲು ಹೆೊಸ ತಾಳವೊಂದನ್ನು ಕಂಡುಕೊಳ್ಳುತ್ತದೆ.

ಈಗ ನಿಮ್ಮ ಬದುಕು ನೀರಸವಲ್ಲ, ಹಳಸಲು ವಿದ್ಯಮಾನವಲ್ಲ. ಅದು ನಿರಂತರವಾಗಿ ಬೆರಗಿನಿಂದ ಕೂಡಿರುವಂಥದು, ಮತ್ತು ಪ್ರತಿ ಗಳಿಗೆ ಹೊಸ ಹೊಸ ಪವಾಡಗಳಿಗೆ ತೆರೆದುಕೊಳ್ಳುವಂಥದು. ಬದುಕು ಎಂದೂ ತೀರದ ನಿಧಿ, ಆದರೆ ಇದು ಕವಿಯ ಹೃದಯಕ್ಕೆ ಮಾತ್ರ ಗೊತ್ತು.  ನನಗೆ ಅಧ್ಯಾತ್ಮದಲ್ಲಿ ನಂಬಿಕೆಯಿಲ್ಲ, ನನಗೆ ಧಾರ್ಮಿಕತೆಯಲ್ಲಿ ನಂಬಿಕೆಯಿಲ್ಲ ಆದರೆ ಕವಿತೆಯನ್ನು ಮಾತ್ರ ನಾನು ಬಲವಾಗಿ ನೆಚ್ಚಿಕೊಂಡಿದ್ದೇನೆ.

ಯಾವ ಕೆಲಸ ಮಾಡಲಿ ನಾನು
ಈ ಬದುಕಿನಲ್ಲಿ?

ನಿಯಮಗಳನ್ನು ಮೀರುವ
ಜನರಲ್ಲಿನ ಆಕರ್ಷಣೆಯನ್ನೂ,
ಕಲಾವಿದನ ಉನ್ಮಾದವನ್ನೂ
ತೀವ್ರ ಕಾಮಿಯನ್ನೂ
ಅಪಾರವಾಗಿ ಪ್ರೀತಿಸುವ
ಈ ಪವಿತ್ರ ಭೋಳೆ ಮುದುಕನನ್ನು
ಕೆಲಸಕ್ಕಿಟ್ಟುಕೊಳ್ಳುವ ಉದಾರಿಗಳು
ಯಾರಿದ್ದಾರೆ ಇಲ್ಲಿ?

ಬಹುಶಃ ನಾನು
ಕವಿಯಾಗಬಹುದೇನೋ,

ನನ್ನ ಸುಂದರ ಖಾಲಿ ಕಾಗದಗಳ ಮೇಲೆ
ಭಗವಂತ ಬಂದು ಕೂಡಲಿದ್ದಾನೆ,
ಬಹುಶಃ ಅದಕ್ಕೇ ಅನಿಸುತ್ತದೆ ಅವನು
ಇಷ್ಟು ಶುದ್ಧವಾಗಿಟ್ಟಿದ್ದಾನೆ ನನ್ನ ಪ್ರೇಮವನ್ನು.
ನೀವು ಆ ಪುಟಗಳನ್ನು ಕಾಣಲು ಬಂದಾಗ
ಆತ ಒದ್ದರೂ ಒದೆಯಬಹುದು ನಿಮ್ಮನ್ನ
ತನ್ನ ದಿವ್ಯ ಪಾದಗಳಿಂದ.

– ಹಾಫಿಜ್

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.