ನಿಮ್ಮ ಸ್ಥಾಯಿ ವಿಚಾರಗಳನ್ನ ( fixed ideas ) ಡ್ರಾಪ್ ಮಾಡಿ. ಆಗ ನೀವು ನಿಮ್ಮ ಗೊಂದಲವನ್ನು ಹೆಚ್ಚು ಆನಂದಿಸಬಹುದು. ಆಗ ಅದು ಕೇವಲ ಗೊಂದಲ ಅಲ್ಲ, ಅದು ಸೃಜನಶೀಲ ಅಸ್ತವ್ಯಸ್ತತೆ ( creative chaos). ನಮ್ಮ ಹೃದಯಗಳಲ್ಲಿ ಡಾನ್ಸಿಂಗ್ ಸ್ಟಾರ್ ಗಳು ಹುಟ್ಟಲು ನಮಗೆ ಕ್ರಿಯೇಟಿವ್ ಕೆಯೋಸ್ ಬಹಳ ಅವಶ್ಯಕ. ಇದರಿಂದ ಹೊರತಾದ ಇನ್ನೊಂದು ದಾರಿ ಇಲ್ಲ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮೊಳಗೆ ಫಿಕ್ಸ್ಡ್ ಐಡಿಯಾಗಳು ಇದ್ದಾಗ, ಬದುಕು ನಿಮಗಾಗಿ ಹೆಚ್ಚು ಗೊಂದಲಗಳನ್ನು ಸೃಷ್ಟಿ ಮಾಡುತ್ತದೆ. ಏಕೆಂದರೆ ಬದುಕಿಗೆ ಐಡಿಯಾಗಳಲ್ಲಿ ನಂಬಿಕೆ ಇಲ್ಲ. ಅದು ನಿರಂತರವಾಗಿ ಸಂಗತಿಗಳನ್ನು ಕಲಸುಮೇಲೋಗರ ಮಾಡುತ್ತಿರುತ್ತದೆ. ಅದು ಜನರ ಬದುಕಿನಲ್ಲಿ ಹಸ್ತಕ್ಷೇಪ ಮಾಡುತ್ತ ಹೋಗುತ್ತದೆ. ಅದು ಟ್ರಿಕ್ ಗಳನ್ನು ಪ್ರಯೋಗಿಸುತ್ತ ಮುಂದುವರೆಯುತ್ತದೆ. ಬದುಕು ಎಂದರೆ, ನಿಮ್ಮ ಫರ್ನಿಚರ್ ನ ಎಂದೂ ಬದಲಾಗದಂತೆ ಫಿಕ್ಸ್ ಮಾಡಬಹುದಾದ ನಿಮ್ಮ ಮನೆಯ ಡ್ರಾಯಿಂಗ್ ರೂಮ್ ಅಲ್ಲ. ಬದುಕು ಅತ್ಯಂತ ಕೋಲಾಹಲಕಾರಿ ವಿದ್ಯಮಾನ.
ದೇವರು ಬಹಳ ಅಸ್ತವ್ಯಸ್ತ ಸ್ವಭಾವದವನು. ದೇವರು ಇಂಜಿನೀಯರ್ ಅಲ್ಲ, ಆರ್ಕಿಟೆಕ್ಟ್ ಅಲ್ಲ, ಅವನು ವಿಜ್ಞಾನಿ ಅಲ್ಲ, ಅವನು ಗಣಿತಶಾಸ್ತ್ರಜ್ಞನೂ ಅಲ್ಲ. ಅವನೊಬ್ಬ ಕನಸುಗಾರ. ಮತ್ತು ಕನಸುಗಳ ಲೋಕದಲ್ಲಿ ಏನು ಬೇಕಾದರೂ ಆಗಬಹುದು. ನಿಮ್ಮ ಸಂಗಾತಿ ( boyfriend or girlfriend) ಥಟ್ಟನೇ ಕುದುರೆಯಾಗಬಹುದು…… ಮತ್ತು ಈ ಕುರಿತು ನೀವು ಕನಸುಗಳಲ್ಲಿ ವಾದ ಕೂಡ ಮಾಡುವುದಿಲ್ಲ, “ಇದೇಕೆ ಹೀಗಾಯಿತು?” ಎಂದು ಪ್ರಶ್ನೆ ಮಾಡುವುದಿಲ್ಲ. ಕನಸುಗಳಲ್ಲಿ ನೀವು ಎಲ್ಲವನ್ನು ಸ್ವೀಕರಿಸುತ್ತೀರಿ. ಮತ್ತು ಕನಸುಗಳಲ್ಲಿ ನಿಮಗೆ ಕೊಂಚವೂ ಸಂಶಯ ಇರುವುದಿಲ್ಲ, ಏಕೆಂದರೆ ನೀವು ಕನಸುಗಳಲ್ಲಿ ನಿಮ್ಮ ಐಡಿಯಾಗಳನ್ನು ಕ್ಯಾರಿ ಮಾಡುವುದಿಲ್ಲ.
ಆದರೆ ನಿಮ್ಮ ಎಚ್ಚರಿಕೆಯಲ್ಲಿ, ನಿಮ್ಮ ಸಂಗಾತಿ ಕುದುರೆಯಾಗುವುದನ್ನು ನಂಬುವುದು ನಿಮಗೆ ಅಸಾಧ್ಯ. ಕೆಲವೊಮ್ಮೆ ನಿಜ ಬದುಕಿನಲ್ಲಿ ನಿಮ್ಮ ಸಂಗಾತಿಯ ಮುಖ ಮನುಷ್ಯರದೇ ಆಗಿದ್ದರೂ ಅವರು ಕುದುರೆಯ ಎನರ್ಜಿ ಧರಿಸಿದವರಂತೆ ವರ್ತಿಸುವುದನ್ನು ನೀವು ಗಮನಿಸಿರಬಹುದು. ಆಗ ನಿಮಗೆ ಗೊಂದಲ ಆಗುವುದು ಸಹಜ.
ವಾಸ್ತವದಲ್ಲಿ, ಗೊಂದಲಕ್ಕೊಳಗಾಗಿರುವ ಮನುಷ್ಯ ಎಂದೂ ನನ್ನ ಗಮನಕ್ಕೆ ಬಂದಿಲ್ಲ ಆದರೆ, fixed idea ಗಳ ಮನುಷ್ಯರನ್ನು ನಾನು ಸದಾ ಎದುರುಗೊಂಡಿದ್ದೇನೆ. ನಿಮ್ಮ ಐಡಿಯಾ ಹೆಚ್ಚು ಫಿಕ್ಸ್ಡ್ ಆದಷ್ಟು ನಿಮ್ಮ ಗೊಂದಲ ಹೆಚ್ಚಾಗುತ್ತ ಹೋಗುತ್ತದೆ.
ನೀವು ಗೊಂದಲಕ್ಕೊಳಗಾಗದಿರಲು ಬಯಸುವಿರಾದರೆ, ನಿಮ್ಮ ಫಿಕ್ಸ್ಡ್ ಐಡಿಯಾ ಡ್ರಾಪ್ ಮಾಡಿ, ಆಗ ನಿಮ್ಮ ಗೊಂದಲ ಪರಿಹಾರವಾಗುವುದಿಲ್ಲವಾದರೂ ಅದು ಗೊಂದಲದ ಹಾಗೆ ಅನುಸುವುದಿಲ್ಲ. ಆಗ ಅದು ಜೀವಂತಿಕೆಯ ಬದುಕು.
ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”
ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.
“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .
“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.
“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .
“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ “ ಉತ್ತರಿಸಿದ ನಸ್ರುದ್ದೀನ.
*****************************

