ಯಾವಾಗಲೂ ಗಾಳಿ, ಮಳೆ ಮತ್ತು ಬಿಸಿಲಿಗೆ ತೆರೆದುಕೊಳ್ಳುವುದು ಒಳ್ಳೆಯದು, ಏಕೆಂದರೆ ಇದೇ ಬದುಕು. ಆದ್ದರಿಂದ ಇವುಗಳ ಕುರಿತಾಗಿ ಚಿಂತೆ ಮಾಡುವುದಕ್ಕಿಂತ, ಇವು ಎದುರಾದಾಗ ಕುಣಿಯುವುದು ಸುಂದರ ! ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
ಬೆಳವಣಿಗೆ ಎಂದರೆ ನೀವು ಪ್ರತಿದಿನ ಏನೋ ಒಂದು ಹೊಸದನ್ನು ಹೀರಿಕೊಳ್ಳುತ್ತಿದ್ದೀರಿ ಮತ್ತು ಹೀರಿಕೊಳ್ಳುವಿಕೆ ಸಾಧ್ಯವಾಗುವುದು ಈ ಎಲ್ಲಕ್ಕೂ ನೀವು ತೆರೆದುಕೊಂಡಿದ್ದಾಗ ಮಾತ್ರ. ಕೆಲವೊಮ್ಮೆ ಮಳೆ ಒಳಗೆ ಬರುತ್ತದೆ, ಕೆಲವೊಮ್ಮೆ ಗಾಳಿ ಮತ್ತು ಒಮ್ಮೊಮ್ಮೆ ಬಿಸಿಲು, ಹೀಗೆ ಬದುಕು ನಿಮ್ಮೊಳಗೆ ದಾಖಲಾಗುತ್ತದೆ. ಆಗ ನೀವು ಕೆಲವೊಂದು ಅಡಚಣೆಗಳನ್ನು ಎದುರುಗೊಳ್ಳುತ್ತೀರಿ : ನಿಮ್ಮ ನ್ಯೂಸ್ ಪೇಪರ್ ಗಾಳಿಯಲ್ಲಿ ಹಾರಲು ಶುರು ಮಾಡುತ್ತದೆ, ಟೇಬಲ್ ಮೇಲಿದ್ದ ಪೇಪರ್ ಗಳು ಹಾರಿ ಕೆಳಗೆ ಬೀಳುತ್ತವೆ. ಮತ್ತು ಮಳೆ ಏನಾದರೂ ಒಳಗೆ ಬಂದರೆ, ನಿಮ್ಮ ಬಟ್ಟೆಗಳೆಲ್ಲ ಒದ್ದೆಯಾಗುತ್ತವೆ. ಅಕಸ್ಮಾತ್ ನೀವು ಯಾವಾಗಲೂ ಮುಚ್ಚಿದ ಕೋಣೆಯಲ್ಲೇ ಇದ್ದವರಾದರೆ “ ಏನಾಗುತ್ತಿದೆ ಇದು “ ಎಂದು ನಿಮಗೆ ಗಾಬರಿಯಾಗುತ್ತದೆ.
ಸುಂದರವಾದದ್ದೇ ಆಗುತ್ತಿದೆ. ಯಾವಾಗಲೂ ಗಾಳಿ, ಮಳೆ ಮತ್ತು ಬಿಸಿಲಿಗೆ ತೆರೆದುಕೊಳ್ಳುವುದು ಒಳ್ಳೆಯದು, ಏಕೆಂದರೆ ಇದೇ ಬದುಕು. ಆದ್ದರಿಂದ ಇವುಗಳ ಕುರಿತಾಗಿ ಚಿಂತೆ ಮಾಡುವುದಕ್ಕಿಂತ, ಇವು ಎದುರಾದಾಗ ಕುಣಿಯುವುದು ಸುಂದರ ! ಬಿರುಗಾಳಿ ಎದುರಾದಾಗ ಕುಣಿಯುರಿ, ಏಕೆಂದರೆ ಮೌನ ಹಿಂಬಾಲಿಸುತ್ತಿದೆ. ಸವಾಲುಗಳು ಎದುರಾಗಿ ನಿಮ್ಮ ಬದುಕಿಗೆ ಅಡಚಣಿಗಳು ಎದುರಾದಾಗ ಕುಣಿಯಿರಿ. ಏಕೆಂದರೆ ಈ ಸವಾಲುಗಳಿಗೆ ಪ್ರತಿಕ್ರಿಯೆ ನೀಡುತ್ತಿರುವಾಗಲೇ ನೀವು ಹೊಸ ಎತ್ತರಗಳನ್ನು ಏರುತ್ತೀರಿ. ನೆನಪಿರಲಿ, ಸಂಕಟಗಳನ್ನು ಅನುಭವಿಸುವುದು ಕೂಡ ಅನುಗ್ರಹ. ಈ ಸಂಕಟಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ಗ್ರಹಿಸಿದಾಗ, ಇವು ನಿಮ್ಮ ಗೆಲುವಿನ ಮೆಟ್ಟಲುಗಳು ಎನ್ನುವುದು ನಿಮಗೆ ಗೊತ್ತಾಗುತ್ತದೆ.
ಯಾರು ಎಂದೂ ಸಂಕಟಗಳನ್ನು ಅನುಭವಿಸಿಲ್ಲವೋ , ಯಾರು ಯಾವತ್ತೂ ಸುಲಭವಾದ, ಆರಾಮದಾಯಕವಾದ ಬದುಕನ್ನು ಬದುಕುತ್ತಿದ್ದಾರೋ ಅವರ ಬದುಕು ಜೀವಂತಿಕೆಯಿಲ್ಲದ್ದು. ಅವರು ಬದುಕು ಖಡ್ಗದಷ್ಟು ಹರಿತವಾಗಿಲ್ಲದ್ದು. ಅದು ತರಕಾರಿ ಕತ್ತರಿಸಲೂ ಯೋಗ್ಯವಲ್ಲದ್ದು. ಸಂಕಟಗಳನ್ನು ಎದುರಿಸಿದಾಗ ನಿಮ್ಮ ಬುದ್ಧಿ ಹರಿತವಾಗುತ್ತದೆ.
“ ನಾಳೆ, ನನಗೆ ಹೆಚ್ಚು ಸವಾಲುಗಳನ್ನು ದಯಪಾಲಿಸು, ಹೆಚ್ಚೆಚ್ಚು ಬಿರುಗಾಳಿಯನ್ನು ಕರುಣಿಸು” ಎಂದು ದೇವರನ್ನು ಪ್ರಾರ್ಥಿಸಿ, ಆಗ ನಿಮ್ಮ ಬದುಕು ಪೂರ್ಣತೆಯನ್ನು ಪಡೆದುಕೊಳ್ಳುತ್ತದೆ.
ತೀವ್ರ ಚಳಿಗಾಲದ ರಾತ್ರಿಯೊಂದರಲ್ಲಿ ಮೈ ತುಂಬ ಬೆಚ್ಚಗಿನ ಬಟ್ಟೆ ಧರಿಸಿದ್ದ ಶ್ರೀಮಂತ ವ್ಯಕ್ತಿಯೊಬ್ಬ ತೆಳುವಾದ ಬಟ್ಟೆ ಧರಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಮುಲ್ಲಾ ನಸ್ರುದ್ದೀನ್ ನನ್ನು ಮಾತನಾಡಿಸಿದ,
“ ನಸ್ರುದ್ದೀನ್ ನಾನು ಇಷ್ಟು ಬೆಚ್ಚಗಿನ ಬಟ್ಟೆ ಹಾಕಿಕೊಂಡಿದ್ದರೂ ನನಗೆ ಚಳಿಯ ತೀವ್ರ ಅನುಭವವಾಗುತ್ತಿದೆ, ನೀನು ಇಷ್ಟು ತೆಳು ಬಟ್ಟೆ ಹಾಕಿಕೊಂಡಿದ್ದೀಯಲ್ಲ ಚಳಿ ಆಗುವದಿಲ್ಲವೆ? “
“ ನನಗೆ ಬೆಚ್ಚಗಿನ ಬಟ್ಟೆ ಹೊಂದುವ ಸೌಕರ್ಯ ಇಲ್ಲ ಆದ್ದರಿಂದ ಚಳಿಯನ್ನು ಅನುಭವಿಸುವ ಸ್ವಾತಂತ್ರ್ಯ ಕೂಡ ಇಲ್ಲ, ನಿಮ್ಮ ಹತ್ತಿರ ಸಾಕಷ್ಟು ಬಟ್ಟೆಯಿದೆ ಆದ್ದರಿಂದ ಚಳಿ ಅನುಭವಿಸುವ ಅದೃಷ್ಟವೂ ಇದೆ “
ನಸ್ರುದ್ದೀನ್ ಉತ್ತರಿಸಿದ.

