ಒಂದು ಸಂಗತಿಯನ್ನು ಸಂಪೂರ್ಣವಾಗಿ ಅರಿಯಲು, ಅದನ್ನು ಕಳೆದುಕೊಳ್ಳುವುದು ಅವಶ್ಯಕ : ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತಮ್ಮ ಅಂತರಂಗದ ಜಗತ್ತಿನಿಂದ, ಅವಕಾಶದಿಂದ ವಿಮುಖರಾದ ಪ್ರತಿಯೊಬ್ಬರು ಅದರ ಸಲುವಾದ ಹಸಿವೆಯನ್ನು ಅನುಭವಿಸುತ್ತಾರೆ. ನಂತರ ಅದರ ಕುರಿತಾದ ಬಯಕೆ, ತೀವ್ರ ದಾಹ ಹುಟ್ಟಿಕೊಳ್ಳುತ್ತದೆ. ಆಗ ಆಂತರ್ಯದ ಆಳದಿಂದ ಬರುವ ಕರೆ ಮತ್ತೆ ಮನೆಗೆ ವಾಪಸ್ ಬರುವಂತೆ ಆಹ್ವಾನ ನೀಡುತ್ತದೆ. ಆಗ ವ್ಯಕ್ತಿ ಮರಳಿ ತನ್ನ ಪ್ರಯಾಣವನ್ನು ಆರಂಭಿಸುತ್ತಾನೆ. ಸಾಧನೆಯ ಹಾದಿಯಲ್ಲಿ ಮುಂದುವರೆಯುವುದೆಂದರೆ ಇದು. ಈ ಪ್ರಯಾಣ ನೀವು ಒಮ್ಮೆ ಬಿಟ್ಟು ಬಂದ ಆಂತರ್ಯದ ಜಾಗವನ್ನು ಬೆಚ್ಚಗಾಗಿಸುತ್ತದೆ. ನೀವು ಯಾವ ಹೊಸದನ್ನೂ ಪಡೆದುಕೊಳ್ಳುತ್ತಿಲ್ಲ. ನೀವು ಒಮ್ಮೆ ನಿಮ್ಮದಾಗಿದ್ದನ್ನ ಮರಳಿ ಪಡೆದುಕೊಳ್ಳುತ್ತಿದ್ದೀರ. ಇದು ಹೊಸದಲ್ಲವಾದರೂ ನಿಮಗೆ ಇದರಿಂದ ಲಾಭವೇ ಏಕೆಂದರೆ, ಮೊದಲ ಬಾರಿ ನೀವು ಇದು ಏನೆಂದು ಗಮನಿಸುತ್ತಿದ್ದೀರಿ. ಹಿಂದಿನ ಬಾರಿ ನೀವು ಆ ಜಾಗೆಯಲ್ಲಿ ಇದ್ದದ್ದು ನಿಜವಾದರೂ ಆಗ ಅದು ನಿಮಗೆ ಅಪರಿಚಿತವಾಗಿತ್ತು.
ಯಾವುದೇ ಸಂಗತಿಯನ್ನು ಬಿಟ್ಟು ಬರುವ ತನಕ ಆ ಸಂಗತಿಯ ಬಗ್ಗೆ ಪೂರ್ಣ ತಿಳುವಳಿಕೆ ಸಾಧ್ಯವಾಗಲಾರದು. ಆದ್ದರಿಂದ ಆದದ್ದೆಲ್ಲವೂ ಒಳ್ಳೆಯದೇ. ನೀವು ದಾರಿ ತಪ್ಪಿದ್ದೂ ಒಳ್ಳೆಯದು. ಪಾಪ ಮಾಡಿದ್ದೂ ಒಳ್ಳೆಯದು ಏಕೆಂದರೆ, ಇದೊಂದೇ ಸಂತನಾಗುವ ದಾರಿ.
“ ನಸ್ರುದ್ದೀನ್, ನಾನು ಈ ಊರು ಬಿಟ್ಟು ನಾನು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “
ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.
“ ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“
ಮುಲ್ಲಾ ನಗುತ್ತ ಉತ್ತರಿಸಿದ.

