ಎಲ್ಲ ನಿರಾಳವಾಗಿ ಮುಂದುವರೆಯುತ್ತಿದೆ ಎಂದಾಗ ಪ್ರೇಮಿಗಳಿಗೆ ಭಯವಾಗುತ್ತದೆ. ಎಲ್ಲಿ ತಮ್ಮ ನಡುವಿನ ಪ್ರೇಮ ಮಾಯವಾಗುತ್ತಿದೆಯೋ ಎನ್ನುವ ಭಾವನೆ ಅವರಲ್ಲಿ ಶುರುವಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮ ನೆಲೆಯೂರಿದಾಗ ( settle) ಎಲ್ಲವೂ ನಿರಾಳವಾಗುತ್ತದೆ. ಆಗ ಪ್ರೇಮಕ್ಕೆ ಗೆಳೆತನದ ರೂಪ ಪ್ರಾಪ್ತವಾಗುತ್ತದೆ ಮತ್ತು ಇಂಥ ಗೆಳೆತನಕ್ಕೆ ತನ್ನದೇ ಆದ ಸೌಂದರ್ಯವಿದೆ. ಗೆಳೆತನ, ಪ್ರೇಮದ ಕ್ರೀಮ್, ಪ್ರೇಮದ ತಿರುಳು. ಆದ್ದರಿಂದ ಪ್ರೇಮ ನೆಲೆಯೂರಿದಾಗ ಗಾಬರಿಯಾಗಬೇಡಿ. ಈ ಕುರಿತು ಚಿಂತೆ ಮಾಡುವಿರಾದರೆ ಆದಷ್ಟು ಬೇಗ ನೀವು ನಿಮಗಾಗಿ ತೊಂದರೆಯೊಂದನ್ನು ಸೃಷ್ಟಿ ಮಾಡಿಕೊಳ್ಳಲಿದ್ದೀರಿ.
ಮೈಂಡ್ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲು ಯಾವಾಗಲೂ ಸಮಸ್ಯೆಗಳನ್ನು ಹುಟ್ಚುಹಾಕಲು ಬಯಸುತ್ತದೆ ; ಸಮಸ್ಯೆ ಇಲ್ಲವಾದರೆ ಮೈಂಡ್ ಗೆ ತಾನು ಅಮುಖ್ಯ ಎನ್ನುವ ಭಾವ ಕಾಡುತ್ತದೆ. ಮೈಂಡ್ ಒಂದು ಥರ ಪೋಲೀಸ್ ಡಿಪಾರ್ಟಮೆಂಟಿನ ಹಾಗೆ. ಶಹರದಲ್ಲಿ ಯಾವ ಕೊಲೆ, ದರೋಡೆ ಇಲ್ಲ ಎಂದಾಗ ಡಿಪಾರ್ಟಮೆಂಟಿಗೆ ಯಾವ ಕೆಲಸ ಇಲ್ಲ, ಯಾವ ಪ್ರಾಮುಖ್ಯತೆ ಇಲ್ಲ. ಹಾಗೆಯೇ ಬದುಕಿನಲ್ಲಿ ಎಲ್ಲ ಪ್ರಶಾಂತ, ಎಲ್ಲ ಸಮಾಧಾನ ನೆಲೆಗೊಂಡಾಗ ಮೈಂಡ್ ಗೆ ಚಿಂತೆ ಶುರುವಾಗುತ್ತದೆ. ಏಕೆಂದರೆ ನೀವು ನಿಜವಾಗಿ ಸೆಟಲ್ ಆದಾಗ ಮೈಂಡ್ ಇದ್ದೂ ಇಲ್ಲದ ಹಾಗೆ.
ನೆನಪಿರಲಿ, ಮೈಂಡ್ ಮಾಯವಾಗಬೇಕು, ಏಕೆಂದರೆ ಅದು ನಮ್ಮ ಗುರಿ ಅಲ್ಲ. ನಮ್ಮ ಗುರಿ ಮೈಂಡ್ ನ ಮೀರಿ ಹೋಗುವುದು. ಆದ್ದರಿಂದ ಪ್ರೇಮಿಗಳೇ ಪ್ರಶಾಂತತೆ, ಸಮಾಧಾನ ನೆಲೆಗೊಳ್ಳಲು ಒಬ್ಬರಿಗೊಬ್ಬರು ಸಹಾಯ ಮಾಡಿ. ಯಾರಾದರೂ ಆತಂಕಕ್ಕೊಳಗಾದರೆ ಇನ್ನೊಬ್ಬರು ಅವರ ಕೈ ಹಿಡಿದು ಅವರ ಆತಂಕವನ್ನು ಇಲ್ಲವಾಗಿಸಿ.
“ಸಮಾಜದಲ್ಲಿ ನೈತಿಕ ಮೌಲ್ಯಗಳು ಕಡಿಮೆ ಆಗ್ತಾ ಇವೆ, ಜನರು ಪರಸ್ಪರರನ್ನು ನಂಬುತ್ತಿಲ್ಲ, ದೇವರನ್ನು ನಂಬುತ್ತಿಲ್ಲ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ, ಈ ನೈತಿಕ ಅಧಪತನ ಕಾರಣವಾಗಿ ಜನರಲ್ಲಿ ಅಶಾಂತಿ ಹೆಚ್ಚಾಗಿದೆ. ನಿಮಗೆ ಗೊತ್ತಾ ಯಾಕೆ ವಿವಾಹ ವಿಚ್ಛೇದನಗಳಿಗೆ ಮುಖ್ಯ ಕಾರಣ?”
ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಧರ್ಮೋಪದೇಶಕ ಮುಂದೆ ನೆರೆದಿದ್ದ ಜನರನ್ನು ಪ್ರಶ್ನೆ ಮಾಡಿದ.
“ನನಗೆ ಗೊತ್ತು“ ಮುಂದೆ ಕುಳಿತಿದ್ದ ನಸ್ರುದ್ದೀನ್ ಕೈ ಮೇಲೆತ್ತಿದ್ದ.
“ಹಾಗಾದರೆ ಹೇಳು, ವಿವಾಹ ವಿಚ್ಛೇದನಗಳಿಗೆ ಮುಖ್ಯ ಕಾರಣ ಏನು“
ಧರ್ಮೋಪದೇಶಕ, ನಸ್ರುದ್ದೀನ್ ನನ್ನು ಕೇಳಿಕೊಂಡ.
“ಮದುವೆ ಆಗೋದು“
ನಸ್ರುದ್ದೀನ್, ವಿವಾಹ ವಿಚ್ಛೇದನಗಳಿಗೆ ತನಗೆ ಗೊತ್ತಿದ್ದ ಮುಖ್ಯ ಕಾರಣ ಹೇಳಿದ.

