ಯಾವಾಗ ನೀವು ಎಲ್ಲ ಕಂಡಿಷನಿಂಗ್ ನಿಂದ ಹೊರತಾಗುತ್ತೀರೋ ಆಗ ನೀವು ಮುಕ್ತರಾಗುತ್ತೀರಿ, ಆಗ ನೀವು ಮೂಲ ಮನುಷ್ಯನಾಗುತ್ತೀರಿ. ಆಗ ನೀವು ನಿಮ್ಮನ್ನು ಸುತ್ತುವರೆದಿದ್ದ ಕಠಿಣ ಚಿಪ್ಪನ್ನು ನಿಮ್ಮ ಜೊತೆ ಹೊತ್ತು ಪ್ರಯಾಣ ಮಾಡುವುದಿಲ್ಲ. ನಿಮ್ಮನ್ನು ಸುತ್ತುವರೆದಿದ್ದ ಚಿಪ್ಪು ಈಗ ಒಡೆದು ಹೋಗಿದೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.
ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು
ಒಳಕ್ಕಿಳಿದಾಗ ಮಾತ್ರ.
ಕೈದಿಗಳಿಗಂತೂ ಇರಲೇಬೇಕು
ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ
ನಮ್ಮ ಇಷ್ಟದ ಜಾಗ ತಲುಪುತ್ತೇವೆ,
ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ ಎದುರಾಗುತ್ತೇವೆ,
ಎಲ್ಲ ಗಾಯ, ಬಾಕಿಗಳಿಂದ
ಮುಕ್ತರಾಗುತ್ತೇವೆ.
ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.
ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?
ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .
-ಹಾಫಿಜ್
ಹಕ್ಕಿ ಮೊಟ್ಟೆಯೊಳಗಿದ್ದಾಗ ಅದು ಹಾರುವುದಿಲ್ಲ. ಯಾವಾಗ ನಾವು ಇಂಡಿಯನ್ನರೋ, ಜರ್ಮನ್ನರೋ, ಬ್ರಿಟೀಷರೋ ಅಥವಾ ಅಮೇರಿಕನ್ನರೋ- ಆಗ ನಾವು ಚಿಪ್ಪಿನೊಳಗಿನ ಪ್ರಾಣಿಗಳು. ಆಗ ನಾವು ಹಾರುವುದಿಲ್ಲ. ನಮ್ಮ ರೆಕ್ಕೆಗಳು ಬಿಚ್ಚಿಕೊಳ್ಳುವುದಿಲ್ಲ, ಆಗ ನಮಗೆ ಅಸ್ತಿತ್ವದಿಂದ ಲಭ್ಯವಾಗಿರುವ ಪ್ರಚಂಡ ಸ್ವಾತಂತ್ರ್ಯವನ್ನು ಬಳಕೆ ಮಾಡುವುದು ಸಾಧ್ಯವಾಗುವುದಿಲ್ಲ.
ನಮ್ಮ ಮೇಲೆ ಹಲವಾರು ಲೇಯರ್ ಗಳ ಕಂಡಿಷನಿಂಗ್ ಇದೆ. ಒಬ್ಬರು ಜರ್ಮನ್ ಎಂದು ಕಂಡಿಷನ್ ಆಗಿದ್ದರೆ, ಇನ್ನೊಬ್ಬರು ಕ್ರಿಶ್ಚಿಯನ್ ಎಂದು ಕಂಡಿಷನ್ ಆಗಿದ್ದಾರೆ ಮತ್ತು ಈ ಕಂಡಿಷನಿಂಗ್ ಹಾಗೇ ಹಲವಾರು ರೂಪಗಳಲ್ಲಿ ಮುಂದುವರೆಯುತ್ತದೆ. ಒಬ್ಬರು ಗಂಡು ಎಂದು ಕಂಡಿಷನ್ ಆಗಿದ್ದರೆ, ಇನ್ನೊಬ್ಬರು ಹೆಣ್ಣು ಎಂದು ಕಂಡಿಷನ್ ಆಗಿದ್ದಾರೆ. ನಾನು ಜೈವಿಕ ವ್ಯತ್ಯಾಸಗಳ ಬಗ್ಗೆ ಮಾತನಾಡುತ್ತಿಲ್ಲ, ಅದು ಸರಿ, ಅವಕ್ಕೂ ಕಂಡಿಷನಿಂಗ್ ಗೂ ಏನೂ ಸಂಬಂಧವಿಲ್ಲ – ಆದರೆ ಗಂಡು, ಗಂಡು ಎನ್ನುವ ಕಂಡಿಷನಿಂಗ್ ಒಳಗಾಗಿದ್ದಾನೆ. ನೀವು ನಿರಂತರವಾಗಿ ನೆನಪು ಮಾಡಿಕೊಳ್ಳುತ್ತಿರುತ್ತೀರಿ, ನೀವು ಹೆಣ್ಣು ಅಲ್ಲ, ಗಂಡು ಎಂದು. ನೀವು ಗಂಡಸಿನ ಹಾಗೆ ಬಿಹೇವ್ ಮಾಡಬೇಕೆಂದು, ನೀವು ಅಳುವ ಹಾಗಿಲ್ಲವೆಂದು, ಕಣ್ಣೀರು ಹೆಣ್ಣುತನದ ಗುರುತು ಎಂದು. ಇದು ಕಂಡಿಷನಿಂಗ್, ಇದು ನಿಮ್ಮನ್ನು ಸುತ್ತುವರೆದಿರುವ ಕಠಿಣ ಚಿಪ್ಪು.
ನೈಜ ಮನುಷ್ಯ, ಗಂಡೂ ಅಲ್ಲ ಹೆಣ್ಣೂ ಅಲ್ಲ – ಹೀಗೆ ಹೇಳಿದ ತಕ್ಷಣ ಜೈವಿಕ ವ್ಯತ್ಯಾಸಗಳು ಮಾಯವಾಗುತ್ತವೆ ಎಂದಲ್ಲ, ಆದರೆ ಮಾನಸಿಕ ವ್ಯತ್ಯಾಸಗಳು ಮಾಯವಾಗುತ್ತವೆ. ನೈಜ ಮನುಷ್ಯ ಕಪ್ಪೂ ಅಲ್ಲ, ಬಿಳಿಯೂ ಅಲ್ಲ. ಹಾಗೆಂದ ಮಾತ್ರಕ್ಕೆ ಕಪ್ಪು ಬಿಳಿಯಾಗುತ್ತದೆ, ಬಿಳಿ ಕಪ್ಪಾಗುತ್ತದೆ ಎಂದಲ್ಲ. ಚರ್ಮ ಹಾಗೆಯೇ ಇರುತ್ತದೆ ಮೊದಲಿನ ಹಾಗೆ, ಆದರೆ ಮಾನಸಿಕ ಬಣ್ಣ ಮಾಯವಾಗುತ್ತದೆ.
ಯಾವಾಗ ಈ ಎಲ್ಲ ಸಂಗತಿಗಳು ನಿಮ್ಮಿಂದ ಹೊರತಾಗುತ್ತವೆಯೋ ಆಗ ನಿಮ್ಮ ಮೇಲೆ ಭಾರ ಇಲ್ಲವಾಗುತ್ತದೆ. ಆಗ ನೀವು ನೆಲದಿಂದ ಒಂದು ಅಡಿ ಮೇಲೆ ನಡೆಯಲು ಶುರು ಮಾಡುತ್ತೀರಿ. ಆಗ ನಿಮ್ಮ ಮೇಲೆ ಮೈಂಡ್ ನ ಮಾನಸಿಕ ಗುರುತ್ವಾಕರ್ಷಣ ಶಕ್ತಿ ಕೆಲಸ ಮಾಡುವುದಿಲ್ಲ, ಆಗ ನಿಮ್ಮ ರೆಕ್ಕೆಗಳು ಬಿಚ್ಚಿಕೊಳ್ಳುತ್ತವೆ, ಆಗ ನೀವು ಹಾರಲು ಶುರು ಮಾಡುತ್ತೀರಿ.
ಒಂದು ದಿನ ಸೂಫೀ ಜುನೈದ್ ತನ್ನ ಶಿಷ್ಯರೊಂದಿಗೆ ರಸ್ತೆಯ ಮೂಲಕ ಪ್ರಯಾಣ ಮಾಡುತ್ತಿದ್ದ. ರಸ್ತೆಯಲ್ಲಿ ಅವನಿಗೆ ಒಬ್ಬ ಮನುಷ್ಯ ಆಕಳೊಂದನ್ನು ಹಗ್ಗದಿಂದ ಎಳೆದುಕೊಂಡು ಬರುತ್ತಿರುವುದು ಕಾಣಿಸಿತು. ಸೂಫೀ ತನ್ನ ಶಿಷ್ಯರಿಗೆ ಹೇಳಿದ, “ ಆ ಮನುಷ್ಯನನ್ನು ಹಿಡಿದು ನಿಲ್ಲಿಸಿ, ನಿಮಗೆಲ್ಲ ಒಂದು ಪ್ರಶ್ನೆ ಕೇಳಬೇಕು ನಾನು”
ಶಿಷ್ಯರು ಆಕಳನ್ನು ಎಳೆದುಕೊಂಡು ಹೋಗುತ್ತಿದ್ದ ಮನುಷ್ಯನನ್ನು ತಡೆದು ನಿಲ್ಲಿಸಿದರು.
ಜುನೈದ್ ತನ್ನ ಶಿಷ್ಯರಿಗೆ ಪ್ರಶ್ನೆ ಮಾಡಿದ. “ ಹೇಳಿ , ಇಲ್ಲಿ ಯಾರು ಯಾರನ್ನು ಕಟ್ಟಿ ಹಾಕಿದ್ದಾರೆ? ಮನುಷ್ಯ ಆಕಳನ್ನು ಹಗ್ಗದಿಂದ ಕಟ್ಟಿದ್ದಾನೋ ಅಥವಾ ಆಕಳು ಮನುಷ್ಯನನ್ನು ಹಗ್ಗದಿಂದ ಕಟ್ಟಿ ಹಾಕಿದೆಯೋ? “
“ ಇದೆಂಥ ಪ್ರಶ್ನೆ ? ಮನುಷ್ಯ ತಾನೇ ಆಕಳನ್ನು ಕಟ್ಟಿ ಹಾಕಿರುವುದು” ಶಿಷ್ಯನೊಬ್ಬ ಉತ್ತರಿಸಿದ.
“ ಓಹ್ ಹೌದಾ ! ಈಗ ನೋಡಿ “ ಎನ್ನುತ್ತಾ ಜುನೈದ್ ಚಾಕುವಿನಿಂದ ಆಕಳನ್ನು ಕಟ್ಟಿ ಹಾಕಿದ್ದ ಹಗ್ಗ ಕತ್ತರಿಸಿಬಿಟ್ಟ. ಹಗ್ಗ ಕತ್ತರಿಸಿದೊಡನೆ ಆಕಳು ಅಲ್ಲಿಂದ ಓಡತೊಡಗಿತು. ಆಕಳ ಮಾಲಿಕನಿಗೆ ಸಿಟ್ಟು ಬಂತು, ಅವನೂ ಆಕಳ ಹಿಂದೆ ಓಡತೊಡಗಿದ.
“ ಈಗ ಹೇಳಿ ? ಆಕಳಿಗೆ ಆ ಮನುಷ್ಯನ ಬಗ್ಗೆ ಆಸಕ್ತಿ ಇಲ್ಲ, ಬದಲಾಗಿ ಅದು ಇವನಿಂದ ತಪ್ಪಿಸಿಕೊಳ್ಳಲು ಬಯಸುತ್ತಿದೆ. ಆದರೆ ಆ ಮನುಷ್ಯ ತನ್ನ ಲಾಭಕ್ಕಾಗಿ ಆಕಳನ್ನು ಬಯಸುತ್ತಿದ್ದಾನೆ. ಹೀಗೆಯೇ ನಮ್ಮ ಮತ್ತು ನಮ್ಮ ಮನಸ್ಸಿನೊಡನೆಯ ಸಂಬಂಧ. ನಮ್ಮ ಮನಸ್ಸಿನಲ್ಲಿ ಬರುತ್ತಿರುವ ನೂರಾರು ವಿಚಾರಗಳಿಗೆ ನಮ್ಮ ಬಗ್ಗೆ ಆಸಕ್ತಿ ಇಲ್ಲ. ನಾವೇ ಆ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆ. ಆ ವಿಚಾರಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಕ್ಷಣದಲ್ಲಿಯೇ ಅವು ಆ ಆಕಳು ಓಡಿ ಹೋದಂತೆ ಓಡಿ ಹೋಗುತ್ತವೆ “

