ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ಮತ್ತು ಭಗವಂತನ ನಡುವೆ
ಯಾವ ಇಮಾಮ್, ಪುರೋಹಿತ,
ಪಾದ್ರಿ, ರಬ್ಬಿಗೂ
ಜಾಗ ಇರದಿರಲಿ.
ಯಾವ ಅಧ್ಯಾತ್ಮಿಕ ಗುರುಗಳೂ
ಯಾವ ನೈತಿಕತೆ ಮತ್ತು ಧಾರ್ಮಿಕತೆಯ ಪಹರೆದಾರರೂ
ನಿಮ್ಮ ನಡುವೆ ಮಧ್ಯವರ್ತಿಗಳಾಗದಿರಲಿ.
ನಿಮ್ಮ ಮೌಲ್ಯಗಳ ಬಗ್ಗೆ
ನೀವು ಪಾಲಿಸುತ್ತಿರುವ ನಿಯಮಗಳ ಬಗ್ಗೆ
ನಂಬಿಕೆಯಿರಲಿ,
ಆದರೆ ನಿಮ್ಮ ಮೌಲ್ಯ ಮತ್ತು ನಂಬಿಕೆಗಳನ್ನು
ಆಯುಧಗಳಂತೆ ಬಳಸದಿರಿ
ಇನ್ನೊಬ್ಬರ ಮೇಲೆ.
ಯಾವ ಧಾರ್ಮಿಕ ಆಚರಣೆಯೂ
ಯಾವ ಅಧ್ಯಾತ್ಮಿಕ ಸಾಧನೆಯೂ
ನಿಮ್ಮನ್ನು ಭಗವಂತನ ಹಾದಿಯಲ್ಲಿ ಮುನ್ನಡೆಸುವುದಿಲ್ಲ,
ನೀವು ಹೃದಯಗಳನ್ನು ಘಾಸಿ ಮಾಡುವದ
ನಿಲ್ಲಿಸುವ ತನಕ.
ಕೇವಲ ಭಗವಂತ,
ಕೇವಲ ಭಗವಂತ ಮಾತ್ರ
ನಿನ್ನ ಮಾರ್ಗದರ್ಶಿಯಾಗಲಿ.
ಸತ್ಯವನ್ನು ಹುಡುಕಿ
ಆದರೆ ಜಾಗರೂಕರಾಗಿರಿ.
ಸತ್ಯ, ನಿಮ್ಮ ಆರಾಧನೆಯ ಭಾಗವಾಗದಿರಲಿ
ಬದಲಿಗೆ, ಸ್ವತಃ ಅಂತಃಕರಣವಾಗಲಿ.
~ ಶಮ್ಸ್ ತಬ್ರೀಝಿ
*******************
ಮುಲ್ಲಾ ನಸ್ರುದ್ದೀನ್ ನ ಕತೆಯೊಂದನ್ನ ಕೇಳಿದ್ದೀರಾ?
ಹಬ್ಬ ಇನ್ನೂ ತಿಂಗಳಿರುವಾಗಲೇ ಮುಲ್ಲಾ ನಸ್ರುದ್ದೀನ ಬಟ್ಟೆ ಅಂಗಡಿಗೆ ಹೋಗಿ ಎರಡು ಅಂಗಿಗಳಿಗೆ ಸಾಕಾಗುವಷ್ಟು ಬಟ್ಟೆ ಖರೀದಿ ಮಾಡಿ ದರ್ಜಿಯ ಅಂಗಡಿಗೆ ಬಟ್ಟೆ ತೆಗೆದುಕೊಂಡು ಹೋದ.
ಮುಲ್ಲಾನ ಅಂಗಿ ಹೊಲೆಯಲು ಅಳತೆ ತೆಗೆದುಕೊಂಡ ದರ್ಜಿ “ ಮುಂದಿನ ವಾರ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ ಕೃಪೆ ಇದ್ದರೆ “ ಎಂದ.
ಒಂದು ವಾರದ ಬಳಿಕ ಮುಲ್ಲಾ ದರ್ಜಿಯ ಅಂಗಡಿಗೆ ಹೋದ. “ ದುರದೃಷ್ಟವಶಾತ್ ನಿನ್ನ ಅಂಗಿ ಇನ್ನೂ ತಯಾರಾಗಿಲ್ಲ, ನಾಳೆ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ ಕೃಪೆ ಇದ್ದರೆ “ ದರ್ಜಿ ಸಮಜಾಯಿಶಿ ನೀಡಿದ.
ಮರುದಿನ ನಸ್ರುದ್ದೀನ ಮತ್ತೆ ದರ್ಜಿಯ ಅಂಗಡಿಗೆ ಹೋದ. “ ಕ್ಷಮಿಸು, ನಿನ್ನ ಅಂಗಿಯ ಕೆಲಸ ಇನ್ನೂ ಸ್ವಲ್ಪ ಬಾಕಿ ಇದೆ, ನಾಳೆ ಸಂಜೆ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹನ ಕೃಪೆ ಇದ್ದರೆ “ ದರ್ಜಿ ಮತ್ತೆ ಕಾರಣ ಕೊಟ್ಟ.
ಈ ಮಾತು ಕೇಳಿತ್ತಿದ್ದಂತೆಯೇ ಮುಲ್ಲಾನ ಸಿಟ್ಟು ನೆತ್ತಿಗೇರಿತು, “ ಅಲ್ಲಾಹ್ ನನ್ನು ಈ ಅಂಗಿ ಹೊಲೆಯುವ ಕೆಲಸದಿಂದ ಹೊರಗಿಟ್ಟರೆ, ಎಷ್ಟು ಸಮಯ ಬೇಕು ನಿನಗೆ ಅಂಗಿ ಹೊಲೆಯಲು ? “
ಮುಲ್ಲಾ ಮುಖ ಕೆಂಪಗೆ ಮಾಡಿಕೊಂಡು ದರ್ಜಿಯನ್ನು ಪ್ರಶ್ನಿಸಿದ.
ದೇವರನ್ನು ಅವನ ಪಾಡಿಗೆ ಬಿಟ್ಟುಬಿಡುವುದು ಒಳ್ಳೆಯದು. ಸ್ವಾಭಾವಿಕವಾಗಿ ನಮಗೆ ಯಾವುದಾದರೂ ವಿಷಯ ಗೊತ್ತಿಲ್ಲವಾದರೆ, “ ದೇವರಿಗೆ ಗೊತ್ತು “ ಎಂದು ಹೇಳಿ ಬಿಡುತ್ತೇವೆ. ನಮಗೆ ವಿಷಯದ ಬಗ್ಗೆ ಗೊತ್ತಿಲ್ಲದಿರುವುದನ್ನು ಮುಚ್ಚಿಟ್ಟುಕೊಳ್ಳಲು ನಾವು “ದೇವರಿಗೆ ಗೊತ್ತು” ಎಂದು ಹೇಳುತ್ತೇವೆ. ಆದರೆ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ನೇರವಾಗಿ ಹೇಳಿಬಿಡುವುದು ಒಳ್ಳೆಯದು. ಏಕೆಂದರೆ, “ದೇವರಿಗೆ ಗೊತ್ತು” ಎಂದು ಹೇಳಿದ ತಕ್ಷಣವೇ ನಾವು ಅಜ್ಞಾನಕ್ಕೆ ಜ್ಞಾನದ ಮುಖವಾಡ ಹಾಕಿಬಿಡುತ್ತೇವೆ. ಇದು ಬಹಳ ಅಪಾಯಕಾರಿ.

