ಪಾಪ ( Sin ) : ಓಶೋ 365 #Day 59

ಏನನ್ನಾದರೂ ಹತ್ತಿಕ್ಕುವುದು ಅಪರಾಧ : ಇದು ಆತ್ಮಕ್ಕೆ ಹಾನಿ ಮಾಡುತ್ತದೆ. ಇದು ಪ್ರೀತಿಗಿಂತ ಹೆಚ್ಚಾಗಿ ಭಯಕ್ಕೆ ಗಮನ ನೀಡುತ್ತದೆ, ಮತ್ತು ಪಾಪ ಎಂದರೆ ಇದೇ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿನ್ನ ಹಾಯ್ದು ಹೋಗುವಾಗ,
“ದೈವ ವಿರೋಧಿ” ಎಂದು
ನನ್ನ ಛೇಡಿಸುವುದನ್ನ ದಯವಿಟ್ಟು ನಿಲ್ಲಿಸು.
ಇದು ಸಂಪೂರ್ಣ ತಪ್ಪು ಮಾಹಿತಿ.

ಭಗವಂತನೊಡನೆಯ ನನ್ನ ಪ್ರೇಮ ಸಾಚಾ,
ನನ್ನ ಬಗ್ಗೆ ಅವನ ಪ್ರೇಮ ಎಷ್ಚೋ  ಅಪ್ಪಟವೋ ಅಷ್ಟು.
ಎಲ್ಲ ಪ್ರೇಮ ಸಂಬಂಧಗಳಂತೆ ಈ ಸಂಬಂಧವೂ
ಉತ್ಕಟ, ಉನ್ಮತ್ತ ಮತ್ತು ಗೊಂದಲಕರ.
ಭಾವನೆಗಳ ಏರಿಳಿತಗಳು ಇಲ್ಲೂ ಉಂಟು,
ಸಂಘರ್ಷದ ಹಗಲುಗಳು,
ಪಿಸುಮಾತು ಮತ್ತು ಮುದ್ದಾಟದ ರಾತ್ರಿಗಳು
ವಿಜೃಂಭಿಸುತ್ತವೆ ಇಲ್ಲೂ.

ನಾನು ಅವನ ಮೇಲೆ ಸಿಟ್ಟಾಗುತ್ತೆನಾ ?
ಖಂಡಿತ,
ನನ್ನ ಈ ಸಿಟ್ಚನ್ನು ಅವನಿಗೆ ಹೇಳುತ್ತೆನಾ?
ಹೇಳದಿದ್ದರೆ ಅದೆಂಥ ಪ್ರೇಮ ?

ನಿನ್ನ ಆಪ್ತ ರಹಸ್ಯಗಳನ್ನು  ಅವನಿಗೆ ಹೇಳದೆ ಹೋದರೆ,
ನಿನ್ನ ಖಾಸಗಿ ಅನಿಸಿಕೆಗಳ ಬಗ್ಗೆ 
ಅವನೆದುರು ಪ್ರಾಮಾಣಿಕವಾಗಿರಲು
ಭಯವಾಗುತ್ತಿದೆಯಾದರೆ,

ನಿನಗೆ ಅವನ ಬಗ್ಗೆ
ಖಂಡಿತವಾಗಿಯೂ ಏನೂ ಗೊತ್ತಿಲ್ಲ ಎನ್ನಲು
ದುಃಖವಾಗುತ್ತದೆ ನನಗೆ
ನಿಜವಾಗಿ.

ನಜತ್ ನ ಮಾತು ಕೇಳು,
ಮನುಷ್ಯನ ಹೃದಯದಲ್ಲಿ ಪ್ರೇಮ ಮತ್ತು ಭಯ
ಎರಡಕ್ಕೂ ಸಾಕಾಗುವಷ್ಟು ಜಾಗವಿಲ್ಲ,

ಆರಿಸಿಕೋ ಒಂದನ್ನು ಮಾತ್ರ.

ಭಯಕ್ಕೆ ಹೆಚ್ಚು ಆದ್ಯತೆ ನೀಡುವುದು ಪಾಪ, ಪ್ರೀತಿಗೆ ಹೆಚ್ಚು ಆದ್ಯತೆ ನೀಡುವುದು ಮೌಲ್ಯ. ಮತ್ತು  ಪ್ರೀತಿಗೆ ಹೆಚ್ಚು ಆದ್ಯತೆ ನೀಡುವುದು ನಿಮಗೆ ಯಾವಾಗಲೂ ನೆನಪಿರಲಿ, ಏಕೆಂದರೆ ಪ್ರೀತಿಯ ಮೂಲಕವೇ ನಾವು ಬದುಕಿನ ಶಿಖರಗಳನ್ನು ತಲುಪುವುದು, ದೇವರನ್ನು ತಲುಪುವುದು. ಭಯದ ಮೂಲಕ ನಮ್ಮ ಬೆಳವಣಿಗೆ ಸಾಧ್ಯವಿಲ್ಲ. ಭಯ, ಬದುಕನ್ನು ಹಿಂಡಿ ಹಾಕುತ್ತದೆ, ಪ್ಯಾರಾಲೈಸ್ ಮಾಡುತ್ತದೆ, ನರಕವನ್ನು ಸೃಷ್ಟಿಸುತ್ತದೆ.

ಎಲ್ಲ ಮಾನಸಿಕವಾಗಿ, ಅಧ್ಯಾತ್ಮಿಕವಾಗಿ ಪ್ಯಾರಾಲೈಸ್ ಆಗಿರುವ ಜನ ತಮ್ಮ ಬದುಕನ್ನ ನರಕದಲ್ಲಿ ಬದುಕುತ್ತಾರೆ. ಇದು ಹೇಗೆ ಸಾಧ್ಯವಾಗುತ್ತದೆ? ಅವರು ಭಯದಲ್ಲಿ ಬದುಕುತ್ತಿರುವ ಕಾರಣವಾಗಿ. ಭಯವನ್ನು ಮೀರಿದಾಗ ಮಾತ್ರ ಅವರಿಂದ ಕೊಂಚ ಸಾಧನೆಯನ್ನು ನಿರೀಕ್ಷಿಸಬಹುದು ಆದರೆ, ಅಷ್ಟೊತ್ತಿಗಾಗಲೇ ಅವರು ಮಾಡುವುದು ಏನೂ ಉಳಿದಿರುವುದಿಲ್ಲ. ಅವರು ಮಾಡಬಹುದಾದ ಯಾವುದೇ ಮೌಲ್ಯಯುತ ಸಂಗತಿಯನ್ನೂ ಭಯ ಆವರಿಸಿಕೊಂಡಿರುತ್ತದೆ.

ಅವರು ಪ್ರೀತಿಯಲ್ಲಿ ಬೀಳುತ್ತಾರಾದರೆ ಅವರನ್ನು ತಿರಸ್ಕಾರದ ಭಯ ಕಾಡುತ್ತದೆ. ಅವರಿಗೆ ಭಯ ಹೇಳುತ್ತದೆ, “ಪ್ರೀತಿಸಲು ಹೋಗಬೇಡ, ಆಗ ಮಾತ್ರ ಯಾರೂ ನಿನ್ನನ್ನು ತಿರಸ್ಕರಿಸುವುದಿಲ್ಲ”. ಅದು ನಿಜ ನೀವು ಪ್ರೀತಿ ಮಾಡದೇ ಹೋದರೆ ನಿಮ್ಮನ್ನು ಯಾರೂ ತಿರಸ್ಕರಿಸುವುದಿಲ್ಲ, ಆದರೆ ಆಗ ನಿಮ್ಮದು ಪ್ರೀತಿರಹಿತವಾದ ಅಸ್ತಿತ್ವ. ಇಂಥ ಅಸ್ತಿತ್ವ ತಿರಸ್ಕಾರಕ್ಕಿಂತಲೂ ಘೋರವಾದದ್ದು. ಭಯವಿಲ್ಲದೇ ಪ್ರೀತಿ ಮಾಡಬೇಕು, ಒಬ್ಬರು ತಿರಸ್ಕರಿಸಿದರೆ ಇನ್ನೊಬ್ಬರು ಸ್ವೀಕರಿಸಬಹುದು. ಯಾರು ತಪ್ಪು ಮಾಡುವ ಭಯದಲ್ಲಿ ಬದುಕುತ್ತಾರೋ ಅವರಿಂದ ಯಾವ ತಪ್ಪೂ ಘಟಿಸುವುದಿಲ್ಲ ನಿಜ, ಆದರೆ ಅವರು ಏನೂ
ಮಾಡುವುದಿಲ್ಲ ಕೂಡ ; ಅವರ ಬದುಕು ಖಾಲೀ. ಅವರು ಅಸ್ತಿತ್ವಕ್ಕೆ ಯಾವ ಉಡುಗೊರೆಯನ್ನು ಕೊಡಲು ಅಸಮರ್ಥರು. ಅವರು ಹುಟ್ಟುತ್ತಾರೆ, ಅವರು ಇರುತ್ತಾರೆ, ಅವರು ನಾಶವಾಗುತ್ತಾರೆ ಅಷ್ಟೇ.

ಒಂದು ದಿನ ರಾಬಿಯಾ ಬಸ್ರಾದ ರಸ್ತೆಯಲ್ಲಿ, ಒಂದು ಕೈಯಲ್ಲಿ ಬೆಂಕಿಯ ಪಂಜು ಮತ್ತು ಇನ್ನೊಂದು ಕೈಯಲ್ಲಿ ನೀರಿನ ಬಿಂದಿಗೆ ಹಿಡಿದುಕೊಂಡು ಓಡುತ್ತಿದ್ದಳು.

“ಯಾಕೆ ಹೀಗೆ ಓಡುತ್ತಿದ್ದೀಯ ರಾಬಿಯಾ ಏನದು ನಿನ್ನ ಕೈಯಲ್ಲಿ?  “

ದಾರಿಹೋಕರು ಪ್ರಶ್ನೆ ಮಾಡಿದಾಗ, ಉತ್ತರಿಸಿದಳು ರಾಬಿಯಾ,

“ ನಾನು ನರಕದ ವಿಷಮ ಜ್ವಾಲೆಗಳನ್ನು ಆರಿಸಬೇಕು, ಸ್ವರ್ಗದ ಎಲ್ಲ ಐಷಾರಾಮಕ್ಕೆ ಬೆಂಕಿ ಹಚ್ಚಬೇಕು. ಅವು ನಾನು ಅಲ್ಲಾಹ್ ನ ಬಳಿ ಹೋಗುವ ದಾರಿಯನ್ನ ಮುಚ್ಚಿಹಾಕಿವೆ. ನಾನು ನರಕದ ಭಯದಿಂದಾಗಿ ಅಥವಾ ಸ್ವರ್ಗದ ಬಯಕೆಗಾಗಿ ಅಲ್ಲಾಹ್ ನನ್ನು ಆರಾಧಿಸುವುದಿಲ್ಲ. ನನ್ನ ಆರಾಧನೆ ಕೇವಲ ಅಲ್ಲಾಹ್ ನ ಪ್ರೇಮದ ಕಾರಣವಾಗಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.