ಬದುಕು ಅಸುರಕ್ಷಿತ ಅದ್ದರಿಂದ ಅದು ಮುಕ್ತ. ಬದುಕು ಏನಾದರೂ ಸುರಕ್ಷಿತವಾಗಿದ್ದರೆ ಅಲ್ಲಿ ಬಂಧನಗಳಿರುತ್ತಿದ್ದವು ; ಎಲ್ಲವೂ ಖಚಿತವಾಗಿದ್ದರೆ ಅಲ್ಲಿ ಸ್ವಾತಂತ್ರ್ಯಕ್ಕೆ ಜಾಗವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ನಾಳೆ ಫಿಕ್ಸ್ಡ್ ಆಗಿದ್ದರೆ ಅದು ಸುರಕ್ಷಿತ ಆದರೆ ಅಲ್ಲಿ ಸ್ವಾತಂತ್ರ್ಯಕ್ಕೆ ಜಾಗವಿಲ್ಲ. ಆಗ ನೀವು ಥೇಟ್ ಯಂತ್ರ ಮಾನವನಂತೆ. ಈಗಾಗಲೇ ನಿರ್ಧರಿಸಲಾಗಿಬಿಟ್ಟಿರುವ ಕೆಲವು ಸಂಗತಿಗಳನ್ನು ನೀವು ಪೂರೈಸಲೇಬೇಕು. ಆದರೆ ನಾಳೆ ಸುಂದರ ಏಕೆಂದರೆ ನಾಳೆ ಸಂಪೂರ್ಣವಾಗಿ ಸ್ವಂತಂತ್ರವಾಗಿರುವುದು. ನಾಳೆ ಏನಾಗುತ್ತದೆ ಯಾರಿಗೂ ಗೊತ್ತಿಲ್ಲ. ನಾಳೆ ನೀವು ಉಸಿರಾಡುತ್ತಿರುತ್ತೀರೋ, ನಾಳೆ ನೀವು ಬದುಕಿರುತ್ತೀರೋ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಅಲ್ಲೊಂದು ಚೆಲುವು ಇದೆ, ಏಕೆಂದರೆ ಎಲ್ಲವೂ ಅಸ್ತವ್ಯಸ್ತ, ಎಲ್ಲೆಂದರಲ್ಲಿ ಸವಾಲುಗಳು ಮತ್ತು ಎಲ್ಲವೂ ಇರುವುದು ಸಾಧ್ಯತೆಗಳ ರೂಪದಲ್ಲಿ.
ಸಾಂತ್ವನ, ಸಹಾನುಭೂತಿಗಳನ್ನು ನಿರೀಕ್ಷಿಸಬೇಡಿ. ಹಾಗೆ ನಿರೀಕ್ಷಿಸುತ್ತ ಹೋದರೆ, ನೀವು ಅಸುರಕ್ಷಿತರಾಗಿಯೇ ಇರುತ್ತೀರ. ಅಸುರಕ್ಷತೆಯನ್ನು ಪೂರ್ತಿಯಾಗಿ ಒಪ್ಪಿಕೊಂಡಾಗ ಅಸುರಕ್ಷತೆ ಮಾಯವಾಗುತ್ತದೆ. ಇದು ದ್ವಂದ್ವ ಅಲ್ಲ. ಇದು ಸರಳ ವಾಸ್ತವಿಕ ದ್ವಂದ್ವ, ಆದರೆ ಸಂಪೂರ್ಣವಾಗಿ ನಿಜವಾದದ್ದು. ಇಲ್ಲಿಯವರೆಗೆ ನೀವು ಅಸ್ತಿತ್ವವನ್ನು ಹೊಂದಿದ್ದೀರಿ, ನಾಳೆಯ ಬಗ್ಗೆ ಯಾಕೆ ಚಿಂತೆ? ನೀವು ನಿನ್ನೆ ಇದ್ದಿರಾದರೆ, ನೀವು ಇವತ್ತು ಇರುವಿರಾದರೆ, ನಾಳೆ ತನ್ನ ಜವಾಬ್ದಾರಿಯನ್ನು ತಾನು ನಿರ್ವಹಿಸುತ್ತದೆ.
ನಾಳೆಯ ಬಗ್ಗೆ ಯೋಚನೆ ಮಾಡದೇ, ಮುಕ್ತವಾಗಿ ಮುಂದೆ ಸಾಗಿ. Chaos at ease ( ಸಲೀಸಾದ ಅವ್ಯವಸ್ಥೆ) ಮನುಷ್ಯ ಇರಬೇಕಾದದ್ದು ಹೀಗೆ. ಯಾವಾಗ ನೀವು ನಿಮ್ಮೊಳಗೆ ಬಂಡಾಯವನ್ನು ಹೊತ್ತು ಮುನ್ನಡೆಯುತ್ತೀರೋ ಆಗ ಪ್ರತಿಕ್ಷಣ ನಿಮಗೆ ಹೊಸ ಜಗತ್ತನ್ನ, ಹೊಸ ಬದುಕನ್ನ ಸಾಧ್ಯ ಮಾಡುತ್ತದೆ …… ಪ್ರತಿಕ್ಷಣ ಹೊಸದಾಗಿ ಹುಟ್ಟುತ್ತ ಹೋಗುತ್ತೀರಿ.
ಒಬ್ಬ ಯುವ ಸನ್ಯಾಸಿಗೆ ಹೂ, ಗಿಡ ಮರ ಬಳ್ಳಿಗಳ ಬಗ್ಗೆ ತೀವ್ರ ಪ್ರೀತಿ, ಆದ್ದರಿಂದ ಅವನಿಗೆ ಝೆನ್ ದೇವಸ್ಥಾನದ ಗಾರ್ಡನ್ ನ ಜವಾಬ್ದಾರಿ ವಹಿಸಲಾಗಿತ್ತು. ಈ ದೇವಸ್ಥಾನದ ಪಕ್ಕದಲ್ಲಿಯೇ ಇನ್ನೊಂದು ಪುಟ್ಟ ಝೆನ್ ಆಶ್ರಮವಿತ್ತು. ಅಲ್ಲಿ ವಯಸ್ಸಾದ ಝೆನ್ ಮಾಸ್ಟರ್ ಒಬ್ಬರು ವಾಸ ಮಾಡುತ್ತಿದ್ದರು.
ಒಂದು ದಿನ ದೇವಸ್ಥಾನಕ್ಕೆ ವಿಶೇಷ ಅತಿಥಿಗಳು ಬರುವ ಕಾರ್ಯಕ್ರಮವಿದ್ದುದರಿಂದ, ಯುವ ಸನ್ಯಾಸಿ ಗಾರ್ಡನ್ ಬಗ್ಗೆ ವಿಶೇಷ ಕಾಳಜಿ ವಹಿಸಿದ. ಗಾರ್ಡನ್ ನ ಕಸಗುಡಿಸಿ ಸ್ವಚ್ಛ ಮಾಡಿದ. ಬಾಡಿಹೋಗಿದ್ದ ಹೂಗಳನ್ನು ಕಿತ್ತಿದ. ಬಳ್ಳಿಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್ ಮಾಡಿದ. ಶರತ್ಕಾಲದ ಎಲೆಗಳನ್ನು ನೆಲದ ಮೇಲೆ ನೀಟಾಗಿ ಹಾಸಿದ. ಸನ್ಯಾಸಿಯ ಈ ಕಾಳಜಿಯನ್ನು ಗೋಡೆಯಾಚೆ ನಿಂತಿದ್ದ ವೃದ್ಧ ಝೆನ್ ಮಾಸ್ಟರ್ ಗಮನಿಸುತ್ತಿದ್ದ.
ತನ್ನ ಕೆಲಸ ಮುಗಿದ ಮೇಲೆ ಸನ್ಯಾಸಿ ಒಮ್ಮೆ ಹಿಂತಿರುಗಿ ನೋಡಿ ತೃಪ್ತಿಯಿಂದ ಕಣ್ಣರಳಿಸಿದ.
“ ಎಷ್ಟು ಸುಂದರವಾಗಿ ಕಾಣಸ್ತಾ ಇದೆಯಲ್ಲ ಗಾರ್ಡನ್? “ ಗೋಡೆಯಾಚೆ ನಿಂತಿದ್ದ ಮಾಸ್ಟರ್ ನ ಅಭಿಪ್ರಾಯ ಕೇಳಿದ. “ ಹೌದು ಬಹಳ ಚಂದ, ಆದರೆ ಏನೋ ಕೊರತೆ ಅನಿಸ್ತಾ ಇದೆ. ಗೋಡೆಯಾಚೆ ನನ್ನ ಎತ್ತಿಕೋ, ನಾನು ಸರಿ ಮಾಡ್ತೀನಿ” ಎಂದ ಮಾಸ್ಟರ್. ಸನ್ಯಾಸಿ, ಮಾಸ್ಟರ್ ನ ಎತ್ತಿ, ಗಾರ್ಡನ್ ಒಳಗೆ ಇಳಿಸಿಕೊಂಡ.
ನಿಧಾನವಾಗಿ ಗಾರ್ಡನ್ ಒಳಗೆ ಬಂದ ಮಾಸ್ಟರ್ ನೇರವಾಗಿ ಗಾರ್ಡನ್ ನ ನಟ್ಟ ನಡುವೆ ಇದ್ದ ಮರದ ಬಳಿ ಬಂದು, ಅದರ ಟೊಂಗೆಯೊಂದನ್ನು ಜಗ್ಗಿ ಹಿಡಿದು ಜೋರಾಗಿ ಅಲ್ಲಾಡಿಸಿದ. ಹಣ್ಣಾದ ಎಲೆಗಳೆಲ್ಲ ನೆಲದ ಮೇಲೆ ಬಿದ್ದವು. “ ಹಾಂ, ಈಗ ಸರಿಯಾಯಿತು “ ಎನ್ನುತ್ತ ಮಾಸ್ಟರ್ ಗೋಡೆ ಜಿಗಿದು ತನ್ನ ಆಶ್ರಮಕ್ಕೆ ಹೊರಟುಬಿಟ್ಟ.

