ಯಾವಾಗ ನಿಮ್ಮ ಭಾವನೆಗಳು ಮತ್ತು ತರ್ಕ ಸಮತೋಲನದ ಸ್ಥಿತಿಯಲ್ಲಿರುತ್ತವೆಯೋ ಆಗ ನೀವು ಮುಕ್ತರಾಗುತ್ತೀರಿ. ಆ ಸಮತೋಲನದಲ್ಲಿಯೇ ನಿಮ್ಮ ಸ್ವಾತಂತ್ರವಿದೆ, ನಿಮ್ಮ ಸಂತುಲನ ಇದೆ, ನಿಮ್ಮ ಸೌಹಾರ್ದವಿದೆ, ನಿಮ್ಮ ಸಮಾಧಾನವಿದೆ. – ಓಶೋ ರಜನೀಶ್; ಕನ್ನಡಕ್ಕೆ:ಚಿದಂಬರ ನರೇಂದ್ರ
‘ತರ್ಕ’
ಭಾಷಣ ಮಾಡುತ್ತಿತ್ತು
” ಈ ಜಗತ್ತಿನಲ್ಲಿರೋದೆ ಆರು ದಿಕ್ಕುಗಳು
ಒಂದು ಹೆಚ್ಚಲ್ಲ, ಒಂದು ಕಡಿಮೆಯಲ್ಲ”
ಪ್ರೇಮ,
ಸುಮ್ಮನಿರಲಾಗದೇ ಬಾಯಿಬಿಟ್ಟಿತು,
” ಈ ಎಲ್ಲವನ್ನೂ ಮೀರಿದ
ದಾರಿಯೊಂದಿದೆ,
ನಾನು ಬೇಕಾದಷ್ಟು ಬಾರಿ
ಆ ದಿಕ್ಕಿನಲ್ಲಿ ಪ್ರಯಾಣ ಮಾಡಿದ್ದೇನೆ”
‘ತರ್ಕ’ ಕ್ಕೆ
ವ್ಯಾಪಾರಕ್ಕೊಂದು ದಾರಿ ಸಿಕ್ಕಿತು
ಆ ದಿಕ್ಕಿನಲ್ಲೊಂದು ಅಂಗಡಿ ಶುರುವಾಯಿತು.
ಆದರೆ
ಪ್ರೇಮದ ವ್ಯಾಪಾರದಲ್ಲಿ
ಬಳಕೆಯಾಗುವ ಕರೆನ್ಸಿಯೇ ಬೇರೆ.
‘ತರ್ಕ’
ಅಂಗಡಿ ಮುಚ್ಚಲೇಬೇಕಾಯಿತು.
– ರೂಮಿ
ಯಾವಾಗ ನಿಮ್ಮ ತರ್ಕ ಅತಿಯಾಗುತ್ತದೆಯೋ, ಯಾವಾಗ ನಿಮ್ಮ ಕಾರಣಗಳು ಮಿತಿ ಮೀರುತ್ತವೆಯೋ ಆಗ ನಿಮ್ಮದು ಕೊಲೆಗಾರನ ಮನಸ್ಥಿತಿಯಾಗುತ್ತದೆ, ಆಗ ನೀವು ಯಾವುದು ಲಾಭಕರವಲ್ಲವೋ ಅದೆಲ್ಲವನ್ನೂ ಬದುಕಲು ಬಿಡುವುದಿಲ್ಲ. ಆದರೆ ಆನಂದ ಲಾಭದಾಯಕವಲ್ಲ ಅದು ಕೇವಲ ಲವಲವಿಕೆ ; ಅದಕ್ಕೆ ಯಾವ ಗುರಿ, ಯಾವ ಉದ್ದೇಶವಿಲ್ಲ. ಪ್ರೇಮ ಕೂಡ ಒಂದು ಪ್ಲೇ, ಅದಕ್ಕೂ ಯಾವ ಉದ್ದೇಶವಿಲ್ಲ; ಹಾಗೆಯೇ ಡಾನ್ಸ್ ಕೂಡ, ಚೆಲುವು ಕೂಡ. ಯಾವುದೆಲ್ಲ ಹೃದಯಕ್ಕೆ ಹತ್ತಿರವೇ, ಮುಖ್ಯವೋ ಆ ಎಲ್ಲವೂ ತರ್ಕಕ್ಕೆ ಅರ್ಥಹೀನ.
ಆದ್ದರಿಂದ ನಾವು ಶುರುವಾತಿನಿಂದಲೇ ಹೃದಯದ ಮೇಲೆ ಹೆಚ್ಚು ಬಂಡವಾಳ ಹೂಡಿ ಬುದ್ಧಿ – ಮನಸ್ಸುಗಳ ನಡುವೆ ಸಂತುಲನವನ್ನು ಸಾಧಿಸಬೇಕು. ಪ್ರತಿಯೊಬ್ಬರು ಹೃದಯದತ್ತ ಹೆಚ್ಚು ಬಾಗಬೇಕು. ಬುದ್ಧಿ ಮತ್ತು ಮನಸ್ಸುಗಳ ನಡುವೆ ಸಮತೋಲನವನ್ನು ಸಾಧಿಸಲು ಅತೀ ಗೆ ಹೋದರೂ ಅದು ಒಳ್ಳೆಯದು. ತರ್ಕ ಮತ್ತು ಬುದ್ಧಿಗಳ ವಿಷಯದಲ್ಲಿ, ಬುದ್ಧಿಯನ್ನು ಬ್ಯಾಲನ್ಸ್ ಮಾಡಲು ಮನಸ್ಸಿಗೆ ಎಕ್ಸಟ್ರೀಮ್ ಗೆ ಹೋಗಬೇಕಾಗಬಹುದು, ಏಕೆಂದರೆ ತರ್ಕ ಕ್ಕೆ ಡಾಮಿನೇಟ್ ಮಾಡುವ ಸ್ವಭಾವ ಹೆಚ್ಚು.
ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.
ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.
ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.
ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.
ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆ ಕಾರಣ ಎಂದು ನಿಜ ಹೇಳಿದಳು.
ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.
ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.

