ಓಕೆ ( Okay ) ಓಶೋ 365 #Day 66

OK ಅಷ್ಟೇ ಸಾಕಾಗುವುದಿಲ್ಲ. OK ಎನ್ನುವುದು ಆನಂದಪರವಶತೆಯ ಮಾತಲ್ಲ, ಅದು ಒಂದು ಸಮಾಧಾನಕರ ಪ್ರತಿಕ್ರಿಯೆ. ಆದ್ದರಿಂದ ಯಾವಾಗಲೂ ಸಂತುಷ್ಟಿಯನ್ನು ಫೀಲ್ ಮಾಡಿ ( feel blessed ). ನೀವು ಯಾವುದನ್ನ ಫೀಲ್ ಮಾಡುತ್ತೀರೋ ನೀವು ಅದೇ ಆಗುತ್ತೀರಿ. ಫೀಲ್ ಮಾಡಿಕೊಳ್ಳುವುದು ಮಾತ್ರ ನಿಮ್ಮ ಜವಾಬ್ದಾರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

    “ಇದು ನಿನ್ನ ಕರ್ಮ” ಎಂದು ನಾವು ಇಂಡಿಯಾದಲ್ಲಿ ಹೇಳುವಾಗ, ನಾವು ಹೇಳುವುದೇನೆಂದರೆ : ಕರ್ಮ ಎಂದರೆ ನೀನು ಮಾಡಿದ್ದು, ಇದು ನಿನಗೆ ನೀನೇ ಮಾಡಿಕೊಂಡಿದ್ದು. ಹಾಗು ನಿನಗೆ ನೀನು ಮಾಡಿಕೊಂಡಿದ್ದು ನಿನಗೆ ಅರ್ಥವಾದಮೇಲೆ, ನೀನು ಅದನ್ನ ಡ್ರಾಪ್ ಮಾಡಬಹುದು. ಇದು ನಿನಗೆ ಬಿಟ್ಟದ್ದು, ಹಾಗೆ ಮಾಡುವಂತೆ ಯಾರೂ ನಿನ್ನನ್ನು ಒತ್ತಾಯ ಮಾಡುತ್ತಿಲ್ಲ. ಅದನ್ನು ಆಯ್ಕೆ ಮಾಡಿದ್ದು ನೀನು, ಬಹುಶಃ ಪ್ರಜ್ಞಾಪೂರ್ವಕವಾಗಿ, ಬಹುಶಃ ಯಾವುದೂ ಸೂಕ್ಷ್ಮ ಕಾರಣಗಳಿಗಾಗಿ, ಆಗ ಅದು ನಿನಗೆ ಒಳ್ಳೆಯದು ಅನಿಸಿತ್ತು ಆದರೆ ಆಮೇಲೆ ಅದೇ ನಿನಗೆ ಕಹಿ ಅನಿಸುತ್ತದೆ. ಆದರೆ ಅದನ್ನು ಆಯ್ಕೆ ಮಾಡಿದ್ದು ಮಾತ್ರ ನೀನೇ.

    ಒಮ್ಮೆ ಇದು ನಿನಗೆ ಅರ್ಥವಾದಮೇಲೆ ಯಾಕೆ ಕೇವಲ OK ಗೆ ಸೆಟಲ್ ಆಗಬೇಕು? ಆಗ ನಿನ್ನ ಬದುಕು ಹಾಡು, ಕುಣಿತ, ಸಂಭ್ರಮಗಳ ಬದುಕು ಆಗುವುದಿಲ್ಲ. ಕೇವಲ OK ಇಂದಾಗಿ ನೀನು ಸಂಭ್ರಮಿಸುವುದು ಹೇಗೆ ಸಾಧ್ಯವಾಗುತ್ತದೆ? ಕೇವಲ OK ಇಂದಾಗಿ ನೀನು ಪ್ರೇಮಿಸುವುದು ಹೇಗೆ ಸಾಧ್ಯವಾಗುತ್ತದೆ? ಯಾಕೆ ಈ ಕುರಿತು ಈ ಜಿಪುಣತನ? ಆದರೆ ಬಹಳಷ್ಟು ಜನ ಕೇವಲ OK ಯಲ್ಲೇ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ. ಅವರು ತಮ್ಮ ಐಡಿಯಾಗಳ ಕಾರಣವಾಗಿ ತಮ್ಮ ಎನರ್ಜಿಯನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾರೆ. OK ಮನುಷ್ಯ ಎಂದರೆ ಅವನು ರೋಗಿಯೂ ಅಲ್ಲ, ಆರೋಗ್ಯವಂತನೂ ಅಲ್ಲ. ಅವನು ರೋಗಿ ಅಲ್ಲ ಆದರೆ ಅವನಲ್ಲಿ ತುಂಬು ಆರೋಗ್ಯ ಮತ್ತು ಜೀವಂತಿಕೆ ಇಲ್ಲ, ಅವನು ಸಂಭ್ರಮಿಸುವುದು ಹೇಗೆ ಸಾಧ್ಯ?

    ನನ್ನ ಸಲಹೆ ಏನೆಂದರೆ ನಿಮಗೆ ಸಂಭ್ರಮದಲ್ಲಿ, ಖುಶಿಯಿಂದ ಇರುವುದು ಸಾಧ್ಯವಾಗುತ್ತಿಲ್ಲವೆಂದರೆ ಕೊನೆಪಕ್ಷ ಶೋಚನೀಯವಾಗಿಯಾದರೂ ಫೀಲ್ ಮಾಡಿ. ಆಗ ಏನೋ ಒಂದು ಆಗುತ್ತದೆ ; ಆಗ ಕೊನೆಪಕ್ಷ ಅಲ್ಲಿ ಶಕ್ತಿಯ ಪ್ರವಾಹ ಇದೆ. ಆಗ ನೀವು ಅಳಬಹುದು, ಕಿರುಚಾಡಬಹುದು. ನಿಮಗೆ ನಗು ಸಾಧ್ಯವಾಗದಿರಬಹುದು ಆದರೆ ಖಂಡಿತ ಕಣ್ಣೀರು ಸಾಧ್ಯವಾಗುತ್ತದೆ. ಅದು ಕೂಡ ಬದುಕು. ಆದರೆ ಈ ಓಕೆ ತನ ( okayness) ಬಹಳ ಕೋಲ್ಡ್. ಮತ್ತು ನಿಮಗೆ ಆಯ್ಕೆಗಳಿದ್ದರೆ, ಯಾಕೆ ಶೋಚನೀಯ ಪರಿಸ್ಥಿತಿಯನ್ನು ಆಯ್ಕೆ ಮಾಡುತ್ತೀರಿ, ಖುಶಿಯನ್ನೇ ಆಯ್ಕೆ ಮಾಡಿ.

    “ ಮಾರ್ಕೇಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “

    ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.

    “ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
    ನಸ್ರುದ್ದೀನ್.

    “ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “

    “ ನನ್ನ ಹಾಗೇ ಇತ್ತಾ ಅವನ ಗಡ್ಡ ? “

    “ ಥೇಟ್ ನಿನ್ನ ಹಾಗೆ “

    “ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “

    “ ಪಿಂಕ್ ಕಲರ್ ಶರ್ಟ್ “

    “ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “

    ನಿಟ್ಟುಸಿರು ಬಿಟ್ಟ ನಸ್ರುದ್ದೀನ್.


    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

    Leave a Reply

    This site uses Akismet to reduce spam. Learn how your comment data is processed.