ಸಾಚಾತನ ಒಂದು ಕ್ರಿಯಾಪದ. ಯಾವುದೆಲ್ಲ ಸುಂದರವಾಗಿದೆಯೋ ಅದೆಲ್ಲವೂ ಕ್ರಿಯಾಪದ ; ಸತ್ಯ ಕ್ರಿಯಾಪದ ಅದು ನಾಮಪದವಲ್ಲ, ಪ್ರೀತಿ ನಾಮಪದವಲ್ಲ ಅದು ಕ್ರಿಯಾಪದ. ಪ್ರೀತಿ, ಪ್ರೀತಿಸುವಿಕೆಯಲ್ಲಿದೆ, ಅದು ಒಂದು ಪ್ರಕ್ರಿಯೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಾಚಾತನ, ಬದುಕಿನ ಅತ್ಯಂತ ದೊಡ್ಡ ಮೌಲ್ಯಗಳಲ್ಲಿ ಒಂದು. ಅದನ್ನು ಬೇರೆ ಯಾವುದಕ್ಕೂ ಹೋಲಿಸಲಿಕ್ಕಾಗುವುದಿಲ್ಲ. ಹಳೆಯ ತಂತ್ರಜ್ಞಾನದಲ್ಲಿ ಸಾಚಾತನವನ್ನು ( Authenticity ) ಸತ್ಯ ಎಂದು ಕರೆಯಲಾಗುತ್ತಿತ್ತು. ಹೊಸ ತಂತ್ರಜ್ಞಾನ ಇದನ್ನು ಸರಿಯಾಗಿಯೇ ಸಾಚಾತನ ಎಂದು ಗುರುತಿಸುತ್ತದೆ, ಇದು ಸತ್ಯಕ್ಕಿಂತ ಉತ್ತಮವಾದದ್ದು. ಏಕೆಂದರೆ, ಯಾವಾಗ ನಾವು ಸತ್ಯದ ಬಗ್ಗೆ ಮಾತಾನಾಡುತ್ತೇವೆಯೋ, ಆಗ ಯಾವುದೋ ಸಂಗತಿಯ ಬಗ್ಗೆ ಮಾತನಾಡಿದ ಹಾಗೆ ಅನಿಸುತ್ತದೆ, ನೀವು ಹುಡುಕಿದ ಯಾವುದೋ ವಿದ್ಯಮಾನದ ಹಾಗೆ ಅನಿಸುತ್ತದೆ. ಸತ್ಯ ಹೆಚ್ಚು ನಾಮಪದದ ಹಾಗೆ ಅನಿಸುತ್ತದೆ. ಆದರೆ ಸಾಚಾತನ ಕ್ರಿಯಾಪದ. ಅದು ನಿಮಗಾಗಿ ಕಾಯುತ್ತಿರುವ ಸಂಗತಿ ಅಲ್ಲ. ನೀವು ಸಾಚಾ ಆಗಿರುವಾಗ ಮಾತ್ರ ಅದು ಹಾಜರಾತಿಯಲ್ಲಿದೆ. ಅದನ್ನು ನೀವು ಡಿಸ್ಕವರ್ ಮಾಡುವ ಹಾಗಿಲ್ಲ. ನಿರಂತರವಾಗಿ ಸತ್ಯವನ್ನು ಆಚರಿಸುವ ಮೂಲಕ ನೀವು ಅದನ್ನು ಸೃಷ್ಟಿ ಮಾಡಬೇಕಾಗಿದೆ. ಇದು ಒಂದು ಡೈನಾಮಿಕ್ ಪ್ರಕ್ರಿಯೆ.
ಈ ವಿಷಯ ನಿಮ್ಮ ಆಳದಲ್ಲಿ ನೆಲೆಯಾಗಲಿ, ಯಾವುದೆಲ್ಲ ಸುಂದರವೋ ಆ ಎಲ್ಲವೂ ಕ್ರಿಯಾಪದ. ಭಾಷೆ ಸುಳ್ಳಿನ ಆಧಾರದ ಮೇಲೆ ನಿಂತಿದೆ. ಪ್ರೀತಿ ನಾಮಪದವಲ್ಲ ; ಅದು ಕ್ರಿಯಾಪದ. ಪ್ರೀತಿ, ಪ್ರೀತಿಸುವಿಕೆಯಲ್ಲಿದೆ, ಅದು ಒಂದು ಪ್ರಕ್ರಿಯೆ. ಯಾವಾಗ ನೀವು ಪ್ರೀತಿಸುತ್ತೀರೋ ಆಗ ಮಾತ್ರ ಪ್ರೀತಿ ಇದೆ, ಯಾವಾಗ ನೀವು ಪ್ರೀತಿಸುವುದಿಲ್ಲವೋ ಆಗ ಅದು ಮಾಯವಾಗಿಬಿಡುತ್ತದೆ. ಅದು ಡೈನಾಮಿಕ್ ಆಗಿದ್ದಾಗ ಮಾತ್ರ ನಿಖರವಾಗಿ ಅಸ್ತಿತ್ವದಲ್ಲಿರುತ್ತದೆ. ವಿಶ್ವಾಸ ಕ್ರಿಯಾಪದ, ಅದು ನಾಮಪದವಲ್ಲ. ಯಾವಾಗ ನೀವು ವಿಶ್ವಾಸ ಮಾಡುತ್ತೀರೋ ಆಗ ಮಾತ್ರ ಅದು ಇದೆ. ವಿಶ್ವಾಸ ಎಂದರೆ ವಿಶ್ವಾಸ ಮಾಡುವುದು, ಪ್ರೀತಿ ಎಂದರೆ ಪ್ರೀತಿ ಮಾಡುವುದು. ಸತ್ಯ ಎಂದರೆ ಸತ್ಯಾತ್ಮಕವಾಗಿರುವುದು ( being truthful).
ಝೆನ್ ಮಾಸ್ಟರ್ ತಾಜಿ ಸಾವಿನ ಹಾಸಿಗೆಯಲ್ಲಿದ್ದ. ಮಾಸ್ಟರ್ ತಾಜಿಗೆ ಟೋಕಿಯೋದ ಮಾರ್ಕೇಟ್ ನಲ್ಲಿ ಸಿಗುವ ಒಂದು ವಿಶೇಷ ಕೇಕ್ ಎಂದರೆ ತುಂಬಾ ಪ್ರೀತಿ ಎನ್ನುವುದು ಅವನ ಶಿಷ್ಯರಿಗೆ ಗೊತ್ತಿತ್ತು .
ಶಿಷ್ಯರು ಟೋಕಿಯೋದ ಅಂಗಡಿಗಳನ್ನೆಲ್ಲ ಹುಡುಕಾಡಿ ತಾಜಿ ಗಾಗಿ ಆ ವಿಶೇಷ ಕೇಕ್ ಕೊಂಡು ತಂದರು.
ಮಾಸ್ಟರ್ ತಾಜಿ ತುಂಬ ಖುಶಿಯಿಂದ ಶಿಷ್ಯರು ತಂದ ಕೇಕ್ ತಿಂದ. ಅವನು ಕೇಕ್ ತಿಂದಾದ ಮೇಲೆ ಅವರಿಗಾಗಿ ಒಂದು ಕೊನೆಯ ವಾಕ್ಯ ಹೇಳುವಂತೆ ಶಿಷ್ಯರು ವಿನಂತಿ ಮಾಡಿದರು.
ಮಾಸ್ಟರ್ ತಾಜಿ, ತುಟಿಗೆ ಅಂಟಿಕೊಂಡಿದ್ದ ಕೇಕ್ ನ್ನು ನಾಲಿಗೆಯಿಂದ ನೆಕ್ಕುತ್ತಾ ಗಂಟಲು ಸರಿ ಮಾಡಿಕೊಂಡ
“ ಬುದ್ಧನ ಪ್ರಕಾರ……. ಕ್ಷಮಿಸಿ ಕ್ಷಮಿಸಿ….ನೀವು ತಂದ ಕೇಕ್ ತುಂಬ ಚೆನ್ನಾಗಿತ್ತು “
ಮಾತು ಮುಗಿಸುತ್ತ ಮಾಸ್ಟರ್ ತಾಜಿ ನೆಲಕ್ಕೊರಗಿ ತೀರಿಕೊಂಡ.

