ಗಾಳಿ, ಬೆಳಕು ಎಲ್ಲಕ್ಕೂ ಸುಸ್ವಾಗತ.
ಒಮ್ಮೆ ನೀವು ತೆರೆದ ಹೃದಯದೊಂದಿಗೆ ಬದುಕುವುದನ್ನ ರೂಢಿ ಮಾಡಿಕೊಂಡು ಬಿಟ್ಟರೆ, ನಂತರ ನಿಮ್ಮ ಹೃದಯ ಯಾವತ್ತೂ ಮುಚ್ಚಿಕೊಳ್ಳುವುದಿಲ್ಲ. ಆದರೆ ಇದಕ್ಕೆ ಕೊಂಚ ಸಮಯ ಬೇಕಾಗುತ್ತದೆ. ಮತ್ತು ಹೃದಯ ಈ ತೆರೆದಿರುವಿಕೆಯನ್ನ ಮೆಂಟೇನ್ ಮಾಡಬೇಕಾಗುತ್ತದೆ, ಇಲ್ಲವಾದರೆ ಹೃದಯ ಮತ್ತೆ ಮುಚ್ಚಿಕೊಳ್ಳುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
ಮುಕ್ತತೆ ಬಹಳ ಸೂಕ್ಷ್ಮ. ಯಾವಾಗ ನೀವು ಓಪನ್ ಆಗಿರುತ್ತೀರೋ ಆಗ ಏನೋ ಒಂದು ತಪ್ಪು ಸಂಗತಿ ಒಳಗೆ ಪ್ರವೇಶ ಮಾಡಬಹುದೆಂದು ನಿಮಗೆ ಅನಿಸುತ್ತಿರುತ್ತದೆ. ಇದು ಕೇವಲ ಭಾವನೆ ಅಲ್ಲ ; ಇದು ಒಂದು ಸಾಧ್ಯತೆ. ಆದ್ದರಿಂದಲೇ ಜನ ಕ್ಲೋಸ್ಡ್ ಆಗಿರುತ್ತಾರೆ. ನಿಮ್ಮ ಗೆಳೆಯನಿಗೆಂದು ನೀವು ಬಾಗಿಲು ತೆರೆದಿರುವಾಗ ಅದರ ಮೂಲಕ ನಿಮ್ಮ ವೈರಿಯೂ ಪ್ರವೇಶ ಮಾಡಬಹುದು. ಆದ್ದರಿಂದಲೇ ಜಾಣರು ಯಾವಾಗಲೂ ತಮ್ಮ ಬಾಗಿಲುಗಳನ್ನು ಮುಚ್ಚಿಕೊಂಡಿರುತ್ತಾರೆ. ವೈರಿಯ ಆಗಮನದ ಭಯದಿಂದ ಅವರು ಗೆಳೆಯರಿಗೂ ಬಾಗಿಲು ತೆರೆಯುವುದಿಲ್ಲ. ಆದರೆ ಆಗ ಅವರ ಇಡಿ ಬದುಕು ತನ್ನ ಜೀವಂತಿಕೆಯನ್ನ ಕಳೆದುಕೊಳ್ಳುತ್ತದೆ.
ಆದರೆ ಇದರಿಂದ ಏನೂ ಆಗುವುದಿಲ್ಲ, ಏಕೆಂದರೆ ಮೂಲಭೂತವಾಗಿ ನಾವು ಕಳೆದುಕೊಳ್ಳುವುದು ಏನೂ ಇಲ್ಲ, ಮತ್ತು ನಮ್ಮ ಬಳಿ ಇರುವಂಥದ್ದನ್ನು ಕಳೆದುಕೊಳ್ಳುವುದು ಸಾಧ್ಯವಿಲ್ಲ. ಕಳೆದುಕೊಳ್ಳಬಹುದಾದ್ದು ನಮ್ಮ ಬಳಿ ಏನಾದರೂ ಇರುವುದಾದರೆ, ಅದು ನಮ್ಮ ಬಳಿ ಇರಲು ಯೋಗ್ಯವಲ್ಲ. ಯಾವಾಗ ಈ ತಿಳುವಳಿಕೆ ನಮ್ಮದಾಗುತ್ತದೆಯೋ ಆಗ ನಾವು ಯಾವಾಗಲೂ ಓಪನ್ ಆಗಿರಬಹುದು. ಪ್ರೇಮಿಗಳು ಕೂಡ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನ ನಾನು ನೋಡಿದ್ದೇನೆ. ನಂತರ ಅವರು ಕಷ್ಟಪಡುತ್ತಾರೆ, ಅವರು ಎಲ್ಲ ಕಿಟಕಿ ಬಾಗಿಲುಗಳನ್ನ ಮುಚ್ಚಿಕೊಂಡು ಉಸಿರಾಡಲು ಆಗದೇ ಸಂಕಟ ಅನುಭವಿಸುತ್ತಿದ್ದಾರೆ. ಯಾವ ಹೊಸ ಬೆಳಕೂ ಒಳಗೆ ಬಂದಿಲ್ಲ ಮತ್ತು ಇಂಥ ಸ್ಥಿತಿಯಲ್ಲಿ ಬದುಕು ಅಸಾಧ್ಯವಾಗಿಬಿಡುತ್ತದೆ. ಆದರೂ ಅವರು ಕಷ್ಟಪಟ್ಟು ಎಳೆಯುತ್ತ ಮುನ್ನಡೆದಿದ್ದಾರೆ. ಆದರೂ ಅವರು ಬಾಗಿಲು ತೆರೆಯುವುದಿಲ್ಲ ಏಕೆಂದರೆ ತಾಜಾ ಗಾಳಿ ಅವರಿಗೆ ಅಪಾಯಕರ ಅನಿಸುತ್ತಿರುತ್ತದೆ.
ಆದ್ದರಿಂದ ಯಾವಾಗ ನಿನಗೆ ಓಪನ್ ಆಗಬೇಕು ಅನಿಸುತ್ತದೆಯೋ ಆಗ ನೀವು ಅದನ್ನು ಆನಂದಿಸಿ. ಇವು ಅಪರೂಪದ ಕ್ಷಣಗಳು. ಈ ಕ್ಷಣಗಳಲ್ಲಿ ಹೊರಗೆ ಬಂದು ಮುಕ್ತತೆಯನ್ನು ಅನುಭವಿಸಿ. ಒಮ್ಮೆ ಈ ಅನುಭವ ನಿಮ್ಮದಾದರೆ ಆಗ ನೀವು ಭಯವನ್ನು ಡ್ರಾಪ್ ಮಾಡಬಹುದು. ಆಗ ನಿಮಗೆ ಗೊತ್ತಾಗುತ್ತದೆ ಓಪನ್ ಆಗಿ ಬದುಕುವ ಸಂಪತ್ತನ್ನು ನೀವು ಅನಾವಶ್ಯಕವಾಗಿ ಕಳೆದುಕೊಳ್ಳುತ್ತಿದ್ದಿರಿ ಎನ್ನುವುದು. ಮತ್ತು ಈ ಸಂಪತ್ತು ಎಂಥಹದೆಂದರೆ ಇದನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳುವುದಿಲ್ಲ. ಇದನ್ನು ಹಂಚಿದಂತೆಲ್ಲ ಇದು ಹೆಚ್ಚು ಹೆಚ್ಚು ವೃದ್ಧಿಸುತ್ತ ಹೋಗುತ್ತದೆ. ನೀವು ಹೆಚ್ಚು ಓಪನ್ ಆದಂತೆಲ್ಲ, ಹೆಚ್ಚು ಹೆಚ್ಚು ನೀವಾಗುತ್ತೀರಿ.

