ಬದುಕು ಗುರಿ ರಹಿತ; ಮತ್ತು, ಅದೇ ಅದರ ಸೌಂದರ್ಯ! ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿಗೇನಾದರೂ ಗುರಿಗಳಿದ್ದಿದ್ದರೆ ಬದುಕು ಇಷ್ಟು ಸುಂದರವಾಗಿ ಇರುತ್ತಿರಲಿಲ್ಲ, ಏಕೆಂದರೆ ಒಮ್ಮೆ ನೀವು ಗುರಿ ತಲುಪಿಬಿಟ್ಟರೆ ಮುಂದಿನದೆಲ್ಲ ನಿರಸ. ಆಮೇಲೆ ಎಲ್ಲ ರಿಪಿಟೇಶನ್ , ರಿಪಿಟೇಶನ್, ರಿಪಿಟೇಶನ್ ; ಅದೇ ಏಕತಾನತೆಯ ಬದುಕು ಮುಂದುವರೆಯುತ್ತದೆ ಮತ್ತು ಬದುಕಿಗೆ ಏಕತಾನತೆಯೆಂದರೆ ಆಗುವುದಿಲ್ಲ. ಬದುಕಿಗೆ ಸ್ವಂತ ಗುರಿಗಳು ಇಲ್ಲವಾಗಿದ್ದರಿಂದ ಅದು ನಿಮಗಾಗಿ ಹೊಸ ಗುರಿಗಳನ್ನು ಸೃಷ್ಟಿಮಾಡುತ್ತ ಹೋಗುತ್ತದೆ. ಒಮ್ಮೆ ನೀವು ಒಂದು ಸ್ಥಿತಿಯನ್ನು ತಲುಪಿದಿರಾದರೆ, ಬದುಕು ನಿಮಗೆ ಇನ್ನೊಂದು ಗುರಿಯನ್ನು ತೋರಿಸುತ್ತದೆ. ದಿಗಂತ ನಿಮ್ಮ ಎದುರು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ, ಅದನ್ನು ತಲುಪುವುದು ನಿಮಗೆ ಎಂದೂ ಸಾಧ್ಯವಾಗುವುದಿಲ್ಲ. ನೀವು ಯಾವತ್ತೂ ಎಂದೂ ತಲುಪದ ಪ್ರಯಾಣದಲ್ಲಿದ್ದೀರ. ಇದು ನಿಮಗೆ ಅರ್ಥವಾಗುತ್ತದೆಯಾದರೆ, ಮೈಂಡ್ ನ ಎಲ್ಲ ಒತ್ತಡಗಳೂ ಮಾಯವಾಗುತ್ತವೆ. ಏಕೆಂದರೆ ಒತ್ತಡ ಇರುವುದೇ ಗುರಿಯನ್ನು ಮುಟ್ಟಲು, ಏನೋ ಒಂದನ್ನು ಸಾಧಿಸಲು.
ಮೈಂಡ್ ನಿರಂತರವಾಗಿ ತಲುಪಲು ( arrival) ಹಾತೊರೆಯುತ್ತದೆಯಾದರೆ, ಬದುಕು ನಿರಂತರವಾಗಿ ಮುಂದುವರೆಯಲು ( departure). ಬದುಕು ತಲುಪುತ್ತದೆಯೇನೋ ಹೌದು ಆದರೆ ಮತ್ತೆ ಮುಂದುವರೆಯಲು ಮಾತ್ರ. ಬದುಕಿಗೆ ಅಂತಿಮ ಎನ್ನುವ ಯಾವುದೂ ಇಲ್ಲ. ಅದು ಯಾವತ್ತೂ ಪರಿಪೂರ್ಣ ಅಲ್ಲ ಮತ್ತು ಇದೇ ಅದರ ಪರಿಪೂರ್ಣತೆ. ಬದುಕು ಸ್ಥಾಯಿ ಅಲ್ಲ ಅದು ಒಂದು ನಿರಂತರ ಡೈನಾಮಿಕ್ ಪ್ರೊಸೆಸ್.
ಬದುಕು ನಿಂತ ನೀರಲ್ಲ ಅದು ನಿರಂತರವಾಗಿ ಹರಿಸುತ್ತಲೇ ಇರುವಂಥದು, ಅದಕ್ಕೆ ಇನ್ನೊಂದು ದಂಡೆ ಎನ್ನುವುದು ಇಲ್ಲವೇ ಇಲ್ಲ. ಒಮ್ಮೆ ಇದು ನಿಮಗೆ ಅರ್ಥವಾಯಿತೆಂದರೆ ನೀವು ಈ ಪ್ರಯಾಣವನ್ನೇ ಆನಂದಿಸಲು ಶುರು ಮಾಡುತ್ತೀರಿ. ನಿಮ್ಮ ಪ್ರತಿಯೊಂದು ಹೆಜ್ಜೆ ಗುರಿಯತ್ತ ಆದರೆ ಯಾವ ಗುರಿಯೂ ಇಲ್ಲ. ಒಮ್ಮೆ ಈ ತಿಳುವಳಿಕೆ ನಿಮ್ಮೊಳಗೆ ಮನೆಮಾಡಿಕೊಂಡಿತೆಂದರೆ, ಅದು ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ. ಆಗ ನಿಮ್ಮೊಳಗೆ ಯಾವ ಒತ್ತಡವೂ ಇಲ್ಲ, ಆಗ ಎಲ್ಲಿಗೂ ಹೋಗುವ ಪ್ರಶ್ನೆ ಇಲ್ಲ ಮತ್ತು ಯಾವ ದಾರಿ ತಪ್ಪುವ ಸಮಸ್ಯೆಯೂ ಇಲ್ಲ.
ಒಮ್ಮೆ ಒಬ್ಬ ಯುವ ಸನ್ಯಾಸಿ ತನ್ನ ವಿದ್ಯಾಭ್ಯಾಸ ಮುಗಿಸಿ ವಾಪಸ್ ಊರಿಗೆ ಹೊರಟಿದ್ದ. ದಾರಿಯಲ್ಲಿ ಅವನಿಗೆ ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ಭೋರ್ಗರೆಯುತ್ತಾ ಹರಿಯುತ್ತಿದ್ದ ನದಿಯನ್ನು ಹೇಗೆ ದಾಟುವುದು ಎಂದು ಅವ ಚಿಂತಾಕ್ರಾಂತನಾದ. ಗಂಟೆಗಟ್ಟಲೆ ಯೋಚಿಸಿದ ಮೇಲೂ ಯಾವ ಉಪಾಯ ಹೊಳೆಯದಿದ್ದಾಗ ವಾಪಸ್ ಹೋಗಲು ನಿರ್ಧರಿಸಿದ.
ಅಷ್ಟರಲ್ಲಿ ಅವನಿಗೆ ನದಿಯ ಆಚೆ ದಡದಲ್ಲಿ ಒಬ್ಬ ಹಿರಿಯ ಸನ್ಯಾಸಿ ಕಾಣಿಸಿದ. ಅವನ ಹತ್ತಿರ ನದಿ ದಾಟುವ ಉಪಾಯ ಕೇಳಬೇಕೆಂದು ಯುವ ಸನ್ಯಾಸಿ ಕೂಗಿದ
“ ಮಾಸ್ಟರ್, ಆಚೆ ದಡ ಸೇರುವ ಉಪಾಯ ಹೇಳ್ತೀರಾ? “
ಹಿರಿಯ ಸನ್ಯಾಸಿ ಒಂದು ಕ್ಷಣ ಧ್ಯಾನಿಸಿ ಉತ್ತರಿಸಿದ
“ ಹುಡುಗಾ, ನೀನು ಆಚೆ ದಡದಲ್ಲೇ ಇರೋದು “

