ಬದುಕು ನಿಯಂತ್ರಣದ ಪರಿಧಿಯಿಂದಾಚೆ. ಬದುಕನ್ನ ಆನಂದಿಸಬಹುದು ಆದರೆ ನಿಯಂತ್ರಿಸುವುದು ಸಾಧ್ಯವಿಲ್ಲ ಬದುಕನ್ನ ಬಾಳಬಹುದು ಆದರೆ ನಿಯಂತ್ರಿಸುವುದು ಸಾಧ್ಯವಿಲ್ಲ. ಬದುಕನ್ನ ಸಂಭ್ರಮಿಸಬಹುದು ಆದರೆ ನಿಯಂತ್ರಿಸುವುದು ಸಾಧ್ಯವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಾಧಾರಣವಾಗಿ “ನಾವು ಉಸಿರಾಡುತ್ತೇವೆ” ಎಂದು ಹೇಳುತ್ತೇವೆಯಾದರೂ , ಆದರೆ ಅದು ನಿಜವಲ್ಲ, ಬದುಕು ನಮ್ಮನ್ನು ಉಸಿರಾಡುತ್ತಿರುತ್ತದೆ. ಆದರೆ ನಾವು, ನಾವೇ ಎಲ್ಲವನ್ನೂ ಮಾಡುತ್ತಿರುವವರು ಎಂದುಕೊಂಡಿರುತ್ತೇವೆ, ಇದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಯಾವಾಗ ನಿಯಂತ್ರಿಸುವವರು ನೀವೇ ಎಂದುಕೊಳ್ಳುತ್ತೀರೋ ಆಗ ನೀವು ಬದುಕಿಗೆ ನಿಮ್ಮನ್ನು ಬಾಳಲು ಅವಕಾಶ ನೀಡುವುದಿಲ್ಲ. ನೀವು ಹಲವಾರು ಕಂಡಿಷನ್ ಗಳನ್ನ ಮುಂದೆ ಮಾಡುತ್ತೀರಿ ಆದರೆ ಬದುಕು ಈ ಯಾವುದನ್ನೂ ಪೂರ್ಣ ಮಾಡಲಾರದು.
ಯಾವಾಗ ನೀವು ಯಾವ ಕರಾರುಗಳನ್ನೂ ಮುಂದೆ ಮಾಡದೇ ಬದುಕನ್ನು ಒಪ್ಪಿಕೊಳ್ಳುತ್ತೀರೋ, ಸ್ವಾಗತಿಸುತ್ತೀರೋ ಆಗ ಬದುಕು ನಿಮ್ಮನ್ನು ಅಪ್ಪಿಕೊಳ್ಳುತ್ತದೆ. ಆಗ ಬದುಕು ಯಾವುದೋ ರೂಪದಲ್ಲಿ ನಿಮ್ಮನ್ನು ಬಾಳುತ್ತದೆ. ಆದರೆ ನಿಯಂತ್ರಣ ಸ್ವಭಾವದ ವ್ಯಕ್ತಿ ಬದುಕು ಒಂದು ನಿರ್ದಿಷ್ಟ ರೂಪದಲ್ಲಿ ಮಾತ್ರ ಸಂಭವಿಸಲಿ ಎಂದು ಬಯಸುತ್ತಾನೆ, ಬದುಕು ತನ್ನ ಕರಾರುಗಳನ್ನು ಪೂರೈಸಲಿ ಎಂದು ಬಯಸುತ್ತಾನೆ. ಆದರೆ ಬದುಕು ಈ ಎಲ್ಲ ಕರಾರುಗಳನ್ನೂ ನಿರ್ಲಕ್ಷಿಸುತ್ತ ಮುಂದೆ ಸಾಗಿಬಿಡುತ್ತದೆ. ಎಷ್ಟು ಬೇಗ ನೀವು ನಿಮ್ಮ ನಿಯಂತ್ರಣ ಸ್ವಭಾವದಿಂದ ಹೊರಗೆ ಬರುತ್ತೀರೋ ಅಷ್ಟು ಒಳ್ಳೆಯದು. ಏಕೆಂದರೆ ಈ ಎಲ್ಲ ನಿಯಂತ್ರಣ ಮೈಂಡ್ ಮೂಲಕ ಸಂಭವಿಸುತ್ತಿದೆ, ಹಾಗು ನೀವು ಮೈಂಡ್ ಗಿಂತ ಹೆಚ್ಚಿನವರು, ಮುಖ್ಯರಾದವರು. ನಿಮ್ಮ ಒಂದು ಸಣ್ಣ ಭಾಗ ನಿಮ್ಮ ಮೇಲೆ ಪೂರ್ಣ ಪ್ರಾಬಲ್ಯ ಸಾಧಿಸಲು, ನಿಮ್ಮನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಬಯಸುತ್ತಿದೆ. ಆದರೆ ಬದುಕಿಗೆ ಈ ಯಾವುದರ ಹಂಗಿಲ್ಲ, ಅದು ನಿಮ್ಮನ್ನು ಹಿಂದೆ ಹಾಕಿ ಮುಂದೆ ಸಾಗುತ್ತಿರುತ್ತದೆ, ಆಗ ನೀವು ಹತಾಶರಾಗುತ್ತೀರ. ಮೈಂಡ್ ನ ಲಾಜಿಕ್ ಏನು ಹೇಳುತ್ತದೆಯೆಂದರೆ, “ ನೋಡು ನೀನು ಸರಿಯಾಗಿ ಕಂಟ್ರೋಲ್ ಮಾಡುತ್ತಿಲ್ಲ, ನಿನ್ನ ನಿಯಂತ್ರಣಗಳನ್ನು ಇನ್ನಷ್ಟು ಬಿಗಿಗೊಳಿಸು”
ಆದರೆ ಸತ್ಯ ಇದಕ್ಕೆ ವಿರುದ್ಧವಾಗಿದೆ : ತಮ್ಮ ನಿಯಂತ್ರಣದ ಸ್ವಭಾವದಿಂದಾಗಿ ಜನ ಬಹಳಷ್ಟನ್ನು ಕಳೆದುಕೊಳ್ಳುತ್ತಾರೆ. ಹುಂಬ ನದಿಯಂತೆ ಬದುಕಿ . ಆಗ ಯಾವುದನ್ನ ಕನಸಿನಲ್ಲೂ ಯೋಚಿಸಿಲ್ಲವೋ, ಯಾವುದರ ಬಗ್ಗೆ ಎಂದೂ ನಿಮಗೆ ಭರವಸೆ ಇರಲಿಲ್ಲವೋ, ಯಾವುದನ್ನ ನೀವು ಎಂದೂ ಕಲ್ಪನೆ ಮಾಡಿಕೊಂಡಿರಲಿಲ್ಲವೋ, ಅದು ನಿಮಗೆ ಅಲ್ಲೇ ತಿರುವಿನಲ್ಲಿ ಲಭ್ಯವಾಗುತ್ತದೆ, ನಿಮ್ಮ ಕೈಯಳತೆಯಲ್ಲಿಯೇ. ಆದರೆ ನೀವು ನಿಮ್ಮ ಮುಷ್ಟಿಯನ್ನ ತೆರೆದಿಟ್ಟುಕೊಂಡಿರಿ, ಮುಷ್ಟಿಯನ್ನು ಮುಚ್ಚಿಕೊಂಡು ಬದುಕುವ ಪ್ರಯತ್ನ ಮಾಡಬೇಡಿ ಏಕೆಂದರೆ ಅದು ನಿಯಂತ್ರಣದ ಬದುಕು. ಮುಷ್ಟಿಯನ್ನು ತೆರೆದುಟ್ಟುಕೊಂಡು ಬದುಕಿ, ಆಗ ಇಡೀ ಆಕಾಶ ನಿಮಗೆ ಲಭ್ಯವಾಗುತ್ತದೆ. ಇದಕ್ಕಿಂತ ಕಡಿಮೆಗೆ ಯಾವತ್ತೂ ಒಪ್ಪಿಕೊಳ್ಳಬೇಡಿ.
ಒಂದು ದಿನ ಸಾರಾಯಿ ಅಂಗಡಿಯಲ್ಲಿ ಅಪರಿಚಿತನೊಬ್ಬ ತನ್ನ ಆರೋಗ್ಯದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ.
“ ಹದಿನೈದು ವರ್ಷಗಳಿಂದ ನನ್ನ ಜೀವನ ಶೈಲಿಯನ್ನ ನಾನು ಕೊಂಚ ಕೂಡ ಬದಲಾಯಿಸಿಕೊಂಡಿಲ್ಲ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ನಿದ್ದೆಯಿಂದ ಏಳುತ್ತೇನೆ, ಅರ್ಧ ಗಂಟೆ ವ್ಯಾಯಾಮ, ಸರಿಯಾಗಿ ೭ ಗಂಟೆಗೆ ಬೆಳಗಿನ ಉಪಹಾರ, ೭.೩೦ ಕ್ಕೆ ಕೆಲಸಕ್ಕೆ ಹಾಜರಿ, ಮಧ್ಯಾಹ್ನ ಸರಿಯಾಗಿ ೧ ಗಂಟೆಗೆ ಊಟ, ಸಂಜೆ ೭ ಗಂಟೆಗೆ ಡಿನ್ನರ್ ಮತ್ತು ರಾತ್ರಿ ೯ ಗಂಟೆಗೆ ನಿದ್ರೆ. ನನ್ನ ಊಟ ಕೂಡ ಬಹಳ ಸರಳ. ಈ ಹದಿನೈದು ವರ್ಷಗಳಲ್ಲಿ ನನಗೆ ಒಮ್ಮೆಯೂ ಕಾಯಿಲೆ ಸತಾಯಿಸಿಲ್ಲ “
“ ಹಾಗೆಯೇ ನೀವು ಜೈಲಿಗೆ ಹೋದ ಕಾರಣವನ್ನೂ ಹೇಳಿಬಿಡಿ ಸ್ವಾಮಿ “
ನಸ್ರುದ್ದೀನ್ ಗಂಭೀರವಾಗಿ ಪ್ರಶ್ನೆ ಮಾಡಿದ.

