ಪ್ರತಿಯೊಬ್ಬ ಪ್ರೇಮಿಗೂ ಏನೂ ಮಿಸ್ ಆಗಿದೆ ಎಂದು ಅನಿಸುತ್ತಿರುತ್ತದೆ. ಏಕೆಂದರೆ ಪ್ರೇಮ ಯಾವತ್ತಿಗೂ ಮುಗಿಯದಂಥದು. ಅದು ಸಂಗತಿಯಲ್ಲ ಪ್ರಕ್ರಿಯೆ. ಪ್ರತಿಯೊಬ್ಬ ಪ್ರೇಮಿಗೂ ಏನೋ ಒಂದು ಮಿಸ್ ಆಗಿದೆ ಎಂದು ಖಂಡಿತ ಅನಿಸುತ್ತಿರುತ್ತದೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ಪ್ರೇಮ ಡೈನಾಮಿಕ್ ಎಂದು ಮಾತ್ರ ಇದು ಸೂಚಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ನದಿಯ ಒಳಗಿರುವ ಚಂದ್ರ
ಕೇವಲ ಪ್ರತಿಬಿಂಬವಲ್ಲ.
ನದಿಯ ತಳದಿಂದಲೇ ಚಂದ್ರ ಸಂಭಾಷಣೆ.
ನಾನು ಈ ನದಿಯೊಂದಿಗೆ
ಸತತವಾಗಿ ಮಾತನಾಡುತ್ತ
ಪ್ರಯಾಣ ಮಾಡುತ್ತಿದ್ದೇನೆ.
ಯಾವುದು ಮೇಲಿದೆಯೋ
ನದಿಯ ಹೊರಗಿರುವಂತೆ ಕಾಣುತ್ತಿದೆಯೋ
ಆ ಎಲ್ಲವೂ ಮನೆ ಮಾಡಿಕೊಂಡಿರುವುದು
ನದಿಯ ಒಳಗೆ.
ನೀವೂ ಒಂದಾಗಿ
ಇಲ್ಲಿ ಅಥವಾ ಅಲ್ಲಿ ನಿಮಗಿಷ್ಟವಾದಂತೆ.
ಇದು ನದಿಗಳ ನದಿ
ಮತ್ತು ನಿರಂತರ ಸಂಭಾಷಣೆಯ
ಅಪರೂಪದ ಮೌನ.
~ ರೂಮಿ
ಪ್ರೀತಿ ನದಿಯಂತೆ ಅದು ಸದಾ ಹರಿಯುತ್ತಿರುತ್ತದೆ. ಈ ಹರಿಯುವಿಕೆಯಲ್ಲಿಯೇ ನದಿಯ ಜೀವಂತಿಕೆಯಿದೆ. ಒಮ್ಮೆ ಈ ಹರಿಯುವಿಕೆ ನಿಂತು ಹೋದರೆ ಅದು ನದಿ ಎಂದು ಕರೆಯಿಸಿಕೊಳ್ಳುವುದಿಲ್ಲ. ನದಿ ಎನ್ನುವ ಪದದಲ್ಲಿಯೇ ಅದರ ಹರಿಯುವಿಕೆಯ ಸಾಕ್ಷಿಯಿದೆ.
ಪ್ರೀತಿ ನದಿಯಂತೆ. ಆದ್ದರಿಂದ ಏನೋ ಮಿಸ್ ಆಗುತ್ತಿದೆ ಎಂದುಕೊಳ್ಳಬೇಡಿ, ಅದು ಪ್ರೀತಿಯ ಪ್ರಕ್ರಿಯೆಯ ಒಂದು ಭಾಗ ಮಾತ್ರ . ಮತ್ತು ಅದು ಇನ್ನೂ ಮುಗಿದಿಲ್ಲ ಎನ್ನುವುದು ಒಳ್ಳೆಯ ಸಂಗತಿ. ಯಾವಾಗ ನಿಮಗೆ ಏನೋ ಮಿಸ್ಸಿಂಗ್ ಅನಿಸುತ್ತಿರುತ್ತದೆಯೋ ಆಗ ನೀವು ಅದರ ಸಲುವಾಗಿ ಏನೋ ಒಂದು ಮಾಡುತ್ತೀರಿ. ಅದು ಎತ್ತರೋತ್ತರ ಶಿಖರಗಳಿಂದ ಬಂದ ಕರೆ. ಆ ಶಿಖರಗಳನ್ನು ಏರಿದಾಗ ನಿಮಗೆ ಪ್ರೇಮ ಸಿಗುತ್ತದೆ ಎಂದಲ್ಲ, ಪ್ರೇಮ ಯಾವತ್ತಿಗೂ ಪೂರ್ತಿಯಾಗಿ ಸಿಗುವಂಥದಲ್ಲ. ಇದೇ ಅದರ ಸುಂದರತೆ , ಅದು ಯಾವಾಗಲೂ ಜೀವಂತಿಕೆಯಿಂದ ಕಂಗೊಳಿಸುತ್ತಿರುವ ಸೂಚನೆ.
ಮತ್ತು ನಿಮಗೆ ಯಾವಾಗಲೂ ಅನಿಸುತ್ತಿರುತ್ತದೆ ಯಾವುದೋ ಒಂದು ತಾಳಬದ್ಧವಾಗಿಲ್ಲವೆಂದು. ಇದೂ ಕೂಡ ಸ್ವಾಭಾವಿಕ. ಏಕೆಂದರೆ ಯಾವಾಗ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೋ ಆಗ ಎರಡು ವಿಭಿನ್ನ ಜಗತ್ತುಗಳು ಭೇಟಿ ಮಾಡುತ್ತಿರುತ್ತವೆ. ಈ ಎರಡು ವಿಭಿನ್ನತೆಗಳು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತವೆ ಎಂದು ಆಶಿಸುವುದು, ಅಸಾಧ್ಯವನ್ನು ಆಶಿಸಿದಂತೆ, ಮತ್ತು ಇದು ಹತಾಶೆಯನ್ನು ಹುಟ್ಟುಹಾಕುತ್ತದೆ. ಬಹಳ ಎಂದರೆ ಎಲ್ಲವೂ ತಾಳಬದ್ಧವಾದ ಕೆಲವು ಕ್ಷಣಗಳಿರುತ್ತವೆ ಅಷ್ಟೇ, ಕೆಲವು ಅಪರೂಪದ ಕ್ಷಣಗಳು.
ಅದು ಇರಬೇಕಾದದ್ದು ಹೀಗೆಯೇ. ಪ್ರೀತಿಯೆಂಬ ರಾಗವನ್ನು ತಾಳಬದ್ಧವಾಗಿಸುವ ಎಲ್ಲ ಪ್ರಯತ್ನ ಮಾಡಿ, ಆದರೆ ಅದು ಪರಿಪೂರ್ಣವಾಗಿ ಸರಿಹೋಗದೇ ಹೋದರೆ ಅದನ್ನು ಒಪ್ಪಿಕೊಳ್ಳುವ ಸಿದ್ಧತೆಯಿರಲಿ. ಈ ಕುರಿತು ಚಿಂತೆ ಮಾಡದಿರಿ, ಈ ಚಿಂತೆಯಲ್ಲಿ ನೀವು ಮುಳುಗಿ ಹೋದರೆ ಇನ್ನಷ್ಟು out of tune ಆಗುವಿರಿ. ನೀವು ಚಿಂತೆಯಿಂದ ಹೊರತಾದಾಗಲಷ್ಟೇ ಇದು ಸಾಧ್ಯವಾಗಬಹುದು. ಪ್ರಯತ್ನ ಮುಂದುವರೆಯಲಿ, ನೀವು ಆತಂಕರಹಿತರಾಗಿದ್ದಾಗ ಮಾತ್ರ ಪ್ರೀತಿ ಸಂಭವಿಸುವುದು out of blue.

