ಪ್ರತೀ ಒಳನೋಟ, ಒಪ್ಪಿಕೊಳ್ಳಲು ಕಠಿಣವಾಗಿದ್ದರೂ ಅದು ಸಹಾಯಕಾರಿ. ಅದು ನಮ್ಮ ಅಹಂ ನ ಚೂರು ಚೂರು ಮಾಡುತ್ತಿದ್ದರೂ ಅದು ನಮಗೆ ಸಹಾಯಕಾರಿ. ಒಳನೋಟ, ನಮ್ಮ ಅತ್ಯುತ್ತಮ ಗೆಳೆಯ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ.
ಯಾವುದೇ ವಾಸ್ತವವನ್ನು ತರ್ಕದ ತಕ್ಕಡಿಯಲ್ಲಿ ಇಡದೇ ಅದು ಇದ್ದ ಹಾಗೆಯೇ ನೋಡುವುದು ನಮಗೆ ಮೊದಲು ಸಾಧ್ಯವಾಗಬೇಕು. ಈ ಒಳನೋಟದ ಮೂಲಕ ಅನೇಕ ಸಂಗತಿಗಳು ಸಾಧ್ಯವಾಗುತ್ತವೆ. ಆದರೆ ಈ ಒಳನೋಟವನ್ನು ಮಿಸ್ ಮಾಡಿದಿರಾದರೆ ನೀವು ಗೊಂದಲಕ್ಕೊಳಗಾಗುತ್ತೀರಿ, ತಬ್ಬಿಬ್ಬುಗೊಳ್ಳುತ್ತೀರಿ. ಸಮಸ್ಯೆಗಳು ಹಲವಾರು ಇರುತ್ತವೆ ಆದರೆ ಸತ್ಯವನ್ನು ಮೊದಲಿನಿಂದಲೂ ನಾವು ಒಪ್ಪಿಕೊಳ್ಳದೇ ಇರುವುದರಿಂದ ಪರಿಹಾರಗಳು ನಮಗೆ ಕಾಣಿಸುವುದಿಲ್ಲ. ಆಗ ನಾವು ನಮ್ಮ ಇರುವಿಕೆಯನ್ನೇ ಸುಳ್ಳಿನ ಪ್ರಮಾಣಕ್ಕೆ ಒಪ್ಪಿಸಿಬಿಡುತ್ತೇವೆ.
ಹಲವಾರು ಸಮಸ್ಯೆಗಳಿರುವ ಬಹಳಷ್ಟು ಜನರು ಇದ್ದಾರೆ ಆದರೆ ಅವರ ಸಮಸ್ಯೆಗಳು ವಾಸ್ತವವಲ್ಲ. 99% ಸಮಸ್ಯೆಗಳು ಸುಳ್ಳು. ಆದ್ದರಿಂದ ಈ ಸಮಸ್ಯೆಗಳ ಪರಿಹಾರವಾಗದಿದ್ದರೆ ನೀವು ತೊಂದರೆಯಲ್ಲಿರುವಿರಿ, ಮತ್ತು ಅವು ಪರಿಹಾರವಾದರೂ ಏನೂ ಬದಲಾಗುವುದಿಲ್ಲ. ಏಕೆಂದರೆ ಅವು ನಿಜದ ಸಮಸ್ಯೆಗಳಲ್ಲ. ಯಾವಾಗ ಸುಳ್ಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೀರೋ ಆಗ ನೀವು ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತೀರಿ. ಆದ್ದರಿಂದ ನಾವು ಮಾಡಬೇಕಾದ ಮೊದಲ ಸಂಗತಿಯೆಂದರೆ, ನಿಜದ ಸಮಸ್ಯೆಯ ಆಳವನ್ನು ಪ್ರವೇಶಿಸಿ ಅದು ಇರುವ ಹಾಗೆ ನೋಡುವುದು. ಸುಳ್ಳನ್ನು ಸುಳ್ಳು ಎಂದು ಗಮನಿಸುವುದು, ಸತ್ಯವನ್ನು ಸತ್ಯ ಎಂದು ನೋಡುವುದರ ಶುರುವಾತು.
“ ಡಾಕ್ಟರ್ ಮೈಯಲ್ಲಿ ಎಲ್ಲಿ ಮುಟ್ಟಿದರೂ ನೋವು “
ನಸ್ರುದ್ದೀನ್ ಡಾಕ್ಟರ್ ಬಳಿ ತನ್ನ ತೊಂದರೆ ಹೇಳಿಕೊಂಡ.
“ ಸರಿಯಾಗಿ, ವಿವರವಾಗಿ ಹೇಳು “ ಡಾಕ್ಟರ್ ನಸ್ರುದ್ದೀನ್ ಮೇಲೆ ರೇಗಿಗರು.
ನಸ್ರುದ್ದೀನ್ ತನ್ನ ತೋರು ಬೆರಳನಿಂದ ಹಣೆ, ಮೂಗು, ಕತ್ತು, ಎದೆ, ಮೂಣಕಾಲು ಮುಟ್ಟಿ ತೋರಿಸಿದ, “ ಎಲ್ಲಿ ಮುಟ್ಟಿದರೂ ನೋವಾಗುತ್ತದೆ ಡಾಕ್ಟರ್ “
ಡಾಕ್ಟರ್ ಗೆ ಸಂಶಯ ಬಂದು ನಸ್ರುದ್ದೀನ್ ನ ತೋರು ಬೆರಳಿನ ಎಕ್ಸರೇ ಮಾಡಿದರು, ಅವನ ತೋರು ಬೆರಳು ಫ್ರ್ಯಾಕ್ಚರ್ ಆಗಿತ್ತು.

