ಒಮ್ಮೊಮ್ಮೆ ನಾವು ಪ್ರೀತಿಸುವುದಿಲ್ಲ. ಆದರೆ ಸಮಸ್ಯೆ ಅದಲ್ಲ. ಸಮಸ್ಯೆಯೆಂದರೆ ನಾವು ಪ್ರೀತಿಯನ್ನು ಹಿಂತೆಗೆದುಕೊಳ್ಳುವುದು (Unlove). ಆದ್ದರಿಂದ ನಾವು ಮೊದಲು ನಮಗೆ ಏನೆಲ್ಲ unlove ಮಾಡಬೇಕೆಂದನಿಸುತ್ತದೆಯೋ ಅದೆಲ್ಲವನ್ನೂ ಡ್ರಾಪ್ ಮಾಡಬೇಕು. ನಿಮ್ಮ ಸ್ವಭಾವಕ್ಕನುಸಾರವಾಗಿ ನೀವು ಬಳಸಿದ ಯಾವುದೇ ನೋಟ, ಯಾವುದೇ ಪದ, ಯಾವುದೆಲ್ಲ ಈಗ ನಿಮಗೆ ಕ್ರೂರ ಅನಿಸುತ್ತಿದೆಯೋ ಆ ಎಲ್ಲವನ್ನೂ ತಕ್ಷಣ ಡ್ರಾಪ್ ಮಾಡಬೇಕು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗಲೂ I am Sorry ಎಂದು ಹೇಳಲು ತಯಾರಾಗಿರಿ. ಬಹಳ ಕಡಿಮೆ ಜನ ಹೀಗೆ ಹೇಳುವಷ್ಟು ಸಮರ್ಥರಾಗಿರುತ್ತಾರೆ. ಕೆಲವರು ಹೀಗೆ ಬಾಯಿಯಿಂದ ಹೇಳಬಲ್ಲರಾದರೂ ಹಾಗೆಂದು ಮನಸ್ಸಿನಿಂದ ಒಪ್ಪಿಕೊಳ್ಳುವುದಿಲ್ಲ. ಕೆಲವೊಮ್ಮೆ ಇದು ಕೇವಲ ಸಾಮಾಜಿಕ ಔಪಚಾರಿಕತೆಯಾಗಿರುತ್ತದೆ. ನಿಜವಾಗಿಯೂ ಭಾವಿಸಿಕೊಂಡು I am Sorry ಎಂದು ಹೇಳುವುದು ಬಹಳ ದೊಡ್ಡ ತಿಳುವಳಿಕೆ. ನೀವು ಏನೋ ಒಂದು ತಪ್ಪು ಮಾಡಿದ್ದೀರಿ ಎಂದು ನೀವು ಹೇಳುತ್ತಿದ್ದೀರಿ ಮತ್ತು ನೀವು ಕೇವಲ ಸೌಜನ್ಯಕ್ಕಾಗಿ ಹಾಗೆ ಹೇಳುತ್ತಿಲ್ಲ. ನೀವು ಏನೋ ಒಂದನ್ನ ಹಿಂತೆಗೆದುಕೊಳ್ಳುತ್ತಿದ್ದೀರಿ. ನೀವು ಮುಂದೆ ಆಗಬೇಕಾಗಿರುವ ಸಂಗತಿಯೊಂದನ್ನ ಹಿಂತೆಗೆದುಕೊಳ್ಳುತ್ತಿದ್ದೀರಿ, ನೀವು ಆಡಿದ ಮಾತೊಂದನ್ನು ಹಿಂತೆಗೆದುಕೊಳ್ಳುತ್ತಿದ್ದೀರಿ.
ಪ್ರತಿಯೊಂದು ಹೃದಯದಲ್ಲೂ ಪ್ರೀತಿಯಿದೆ. ಪ್ರೀತಿಯಿಲ್ಲದೆ ಬದುಕುವುದು ಯಾರಿಗೂ ಸಾಧ್ಯವಿಲ್ಲ ; ಅದು ಅಸಾಧ್ಯ. ಪ್ರತಿಯೊಬ್ಬರಲ್ಲೂ ಪ್ರೀತಿಯಿರುವುದು, ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಸಾಮರ್ಥ್ಯವಿರುವುದು ಮೂಲಭೂತ ಸತ್ಯ. ಆದರೆ ಕೆಲವರ ಬೆಳವಣಿಗೆಯಲ್ಲಿ ತೊಂದರೆಯಿರುತ್ತದೆ, ತಪ್ಪು ಮನೋವೃತ್ತಿ, ತಪ್ಪು ದೃಷ್ಟಿಕೋನ, ಜಾಣತನ, ಮೋಸಗಾರಿಕೆ ಹೀಗೆ ನೂರಾರು ಸಂಗತಿಗಳು ಅವರ ಪ್ರೀತಿಯ ದಾರಿಯಲ್ಲಿ ಅಡಚಣಿಗಳನ್ನು ನಿರ್ಮಿಸಿರುತ್ತವೆ. ಇಂಥ unloving ಕ್ರಿಯೆಗಳನ್ನ, unloving ಪದಗಳನ್ನ unloving ವರ್ತನೆಯನ್ನ ನೀವು ಹಿಂತೆಗೆದುಕೊಂಡಾಗ ಥಟ್ಟನೇ ನಿಮ್ಮೊಳಗೆ ಏನೋ ಒಂದು ಉಕ್ಕುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ, ಅದು ಪ್ರೀತಿ, ಕೆಲ ಕ್ಷಣಗಳ ಮಟ್ಟಿಗಾದರೂ ಅದು ಪ್ರೀತಿ. ನಿಧಾನಕ್ಕೆ ಇಂಥ ಕ್ಷಣಗಳು ದೀರ್ಘವಾಗುತ್ತ ಹೋಗುತ್ತವೆ.
ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.
ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.
ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.
“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತು ಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.
ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”
ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.

