ನಾಟಕ : ಗುಡಿಯ ನೋಡಿರಣ್ಣ
ವಿನ್ಯಾಸ, ನಿರ್ದೇಶನ : ಮಹದೇವ ಹಡಪದ
ರಂಗಪಠ್ಯ : ರಾಜಕುಮಾರ ಮಡಿವಾಳರ
ನಟವರ್ಗ : ಮಹದೇವ ಹಡಪದ, ಗಾಯತ್ರಿ ಹೆಗ್ಗೋಡು, ಈರಣ್ಣ ಐನಾಪುರ, ಮಂಜು ಬಗಲಿ
ಸಂಗೀತ : ವೀರೇಶ ಹಿರೇಮಠ, ಫಕೀರಪ್ಪ ಕೋರಿ
ತಂಡ : ಮಹದೇವ ಹಡಪದ ಅವರ ಆಟಮಾಟ
ನವಲಗುಂದದ ನಾಗಲಿಂಗ ಯತಿ ಶಾಕ್ತ ಪಂಥೀಯ ಹಟ ಯೋಗಿ. ಬಹುಶ: ತನ್ನ ತೀವ್ರ ಅಧ್ಯಾತ್ಮಿಕ ಸಾಧನೆಯಿಂದ ಅಸೀಮ ದೈಹಿಕ ಬಾಧೆಗಳಿಗೆ ಒಳಗಾಗಿ ಚಡಪಡಿಸುತ್ತಿದ್ದಾನೆ. ಅವನಿಗೆ ಈ ನೋವು ಅಸಹನೀಯವಾಗಿದೆ. ತನ್ನ ಈ ನೋವಿಗೆ ಪರಿಹಾರ ಏನೆಂದು ಅವನು ಯೋಚಿಸುತ್ತಿರುವಾಗಲೇ ಗುಡಿಯ ಹೊರಗೆ ಕೆಲಸ ಮಾಡಿಕೊಂಡಿದ್ದ ಕೆಳಜಾತಿಗೆ ಸೇರಿದ ಸಮಗಾರ ಭೀಮವ್ವ ಅವನ ಕಣ್ಣಿಗೆ ಬೀಳುತ್ತಾಳೆ. ಅವಳಲ್ಲಿ ತನ್ನ ಆದಿಶಕ್ತಿ ಕಾಳಿಯನ್ನು ಗುರುತಿಸಿದ ನಾಗಲಿಂಗ ಯೋಗಿ ತನ್ನ ಈ ಚಡಪಡಿಕೆಯನ್ನು ಪರಿಹರಿಸುವಂತೆ ಭೀಮವ್ವಳನ್ನು ಕೇಳಿಕೊಳ್ಳುತ್ತಾನೆ. ದಂತ ಕತೆಯ ಪ್ರಕಾರ ಸಮಗಾರ ಭೀಮವ್ವಳ ಎದೆ ಹಾಲು ಕುಡಿದ ಮೇಲೆಯಷ್ಟೇ ನಾಗಲಿಂಗ ಯತಿಗೆ ಏರಿದ ಜ್ವರ ಇಳಿಯುತ್ತದೆ.
ನಾಗಲಿಂಗ ಮತ್ತು ಭೀಮವ್ವ ರ ನಡುವೆ ನಡೆಯುವ ಸಂವಾದದಲ್ಲಿಯೇ ಹಲವಾರು ಲೌಕಿಕ, ಅಲೌಕಿಕ, ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ನಾಟಕ ಮಾಡುತ್ತದೆ. ನಾಗಲಿಂಗ ಯತಿಯ ಸಮಕಾಲೀನರಾದ ಶಿಶುನಾಳದ ಶರೀಫರು ಮತ್ತು ಯೋಗಿ ಗರಗದ ಮಡಿವಾಳಪ್ಪನವರು
ಮುಂದೆ ಈ ಇಬ್ಬರನ್ನು ಕೂಡಿಕೊಂಡಾಗ ನಡೆಯುವ ಪರಸ್ಪರ ಕಾಲೆಳೆದಾಟ, ಗಂಭೀರ ಸಂವಾದ, ಚುರುಕು ಮಾತುಕತೆ, ಸಧ್ಯದ ಸಾಮಾಜಿಕ ಸ್ಥಿತಿಯ ಮೇಲೆ ಮಾಡುವ ಟಿಪ್ಪಣಿಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿಯೇ ತೀವ್ರ ಯೋಚನೆಗೆ ಹಚ್ಚುತ್ತವೆ.
ಒಟ್ಟಾರೆಯಾಗಿ ಈ ನಾಲ್ವರು ಸಾಧಕರನ್ನು ಜೊತೆಯಾಗಿಸಿ ಅವರ ನಡುವಿನ ಮಾತುಕತೆಯಲ್ಲಿ ಮನುಷ್ಯನ ವೈಯಕ್ತಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ತುಮುಲಗಳಿಗೆ ಸಮಾಧಾನ ಹುಡುಕುವಲ್ಲಿ ನಾಟಕದ ಕರ್ತುೃಗಳು ಮಾಡಿದ ಪ್ರಯತ್ನ ಅತ್ಯುತ್ತಮ. ನಾಗಲಿಂಗ ಯತಿಯಾಗಿ ಮಹದೇವ ಹಡಪದರು ಮತ್ತು ಸಮಗಾರ ಭೀಮವ್ವಳಾಗಿ ಗಾಯತ್ರಿ ಹೆಗ್ಗೋಡು ಅವರ ಅಭಿನಯ ಬಹುಕಾಲ ನೆನಪಿನಲ್ಲಿ ಉಳಿಯುವಂಥದು. ಶರೀಫರ ಪಾತ್ರದಲ್ಲಿ ಮಂಜು ಬಗಲಿ ಮತ್ತು ಗರಗದ ಮಡಿವಾಳಪ್ಪನ ಪಾತ್ರದಲ್ಲಿ ಈರಣ್ಣ ಐನಾಪುರ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಈ ನಾಟಕಕ್ಕೆ ರಂಗಪಠ್ಯ ರಚಿಸಿರುವ ರಾಜಕುಮಾರ ಮಡಿವಾಳರ ಅಧ್ಯಯನ, ಶರೀಫರ ಹಾಡುಗಳನ್ನು ಬಳಸಿಕೊಂಡಿರುವ ರೀತಿ, ನಾಟಕದ ಭಾಷೆ, ದನಿ ಎಲ್ಲವೂ ನಾಟಕದ ಉದ್ದೇಶಕ್ಕೆ ಪೂರಕವಾಗಿ ಮೆರುಗನ್ನ ನೀಡಿವೆ.
ಪ್ರಕಾಶ ರೈಯವರ ನಿರ್ದಿಗಂತ ದ ಸಹಾಯದಿಂದ ಮೂಡಿಬಂದಿರುವ ನಾಟಕ ಹೆಚ್ಚು ಹೆಚ್ಚು ಜನ ನೋಡುವಂತಾಗಲಿ, ಜನ ಈ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುವಂತಾಗಲಿ.

