ಅಂಗಳದಲ್ಲಿಯ ಹಸಿರು ಮರ ( Cypress in the courtyard ): ಓಶೋ 365 #Day 78

ನಿಜವಾದ ಧರ್ಮ ಯಾವುದೆಂದರೆ, ಅದು ಈ ಕ್ಷಣದ ವಾಸ್ತವ ಮಾತ್ರ. ಆದ್ದರಿಂದ ನಿಮಗೆ ದುಃಖವಾಗುತ್ತಿದೆಯಾದರೆ, ಆಗ ಅದು ಅಂಗಳದಲ್ಲಿಯ ಸೈಪ್ರಸ್ ಮರ ( ನಿತ್ಯ ಹರಿದ್ವರ್ಣ ವೃಕ್ಷ) ನೋಡಿ ಅದನ್ನು …. ಸುಮ್ಮನೇ ನೋಡಿ ಅದನ್ನು. ಮಾಡುವುದು ಬೇರೆ ಏನೂ ಇಲ್ಲ ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ

ಪ್ರತೀ ಓದುಗನೂ
ವಿಶ್ಲೇಷಣೆ ಮಾಡುತ್ತಾನೆ
ಪವಿತ್ರ ಗ್ರಂಥಗಳನ್ನು
ತನ್ನ ಸಾಮರ್ಥ್ಯಕ್ಕನುಗುಣವಾಗಿ

ಪವಿತ್ರ ಗ್ರಂಥದ ಪುಟಗಳನ್ನು
ತೆರೆಯುತ್ತಿದ್ದಂತೆಯೇ,
ನಮ್ಮನ್ನು ಸ್ವಾಗತಿಸುತ್ತವೆ
ನಾಲ್ಕು ಹಂತದ ಒಳನೋಟಗಳು

ಮೊದಲನೇಯದೇ,
ಹೊರಗಿನ ಸಾಮಾನ್ಯ ಅರ್ಥ,
ಬಹುತೇಕ ಎಲ್ಲರೂ ಇಷ್ಟಕ್ಕೇ ಸಂತೃಪ್ತರು.
ಎರಡನೇಯದು ಒಳ ಅರ್ಥ,
ಬುದ್ಧಿಗೆ ತಾಕುವಂಥದು.
ಮೂರನೇಯದು ಈ ಒಳ ಅರ್ಥದ
ಹೊಟ್ಟೆಯಲ್ಲಿರುವಂಥದು, ಕರುಳಿನಂಥದು.
ನಾಲ್ಕನೇಯದು
ಎಷ್ಟು ಆಳದಲ್ಲಿದೆಯೆಂದರೆ
ಯಾವ ಮಾತಿಗೂ ನಿಲುಕುವುದಿಲ್ಲ
ವರ್ಣಿಸಲೂ ಆಗದು.

ಯಾವುದನ್ನ
ಹೇಳಲಿಕ್ಕೆ ಆಗುವುದಿಲ್ಲವೋ
ಅದನ್ನು ಆಚರಿಸುವುದೇ ಧರ್ಮ,
ಅಂತೆಯೇ ಪ್ರೇಮಕ್ಕೆ ಧರ್ಮದ
ಉಪಾಧಿ.

~ ಶಮ್ಸ್ ತಬ್ರೀಝಿ

ಝೆನ್ ಮಾಸ್ಟರ್ ಚಾಉ ಚಾಉ ಕುರಿತಾದ ಒಂದು ಪ್ರಸಿದ್ಧ ಕಥೆಯಿದೆ. ಒಮ್ಮೆ ಒಬ್ಬ ಸನ್ಯಾಸಿ,  ಝೆನ್ ಮಾಸ್ಟರ್ ಚಾಉ ಚಾಉ  ನ ಪ್ರಶ್ನೆ ಮಾಡಿದ, “ ನಿಜದ ಧರ್ಮ ಯಾವುದು?”

ಅದು ಹುಣ್ಣಿಮೆಯ ರಾತ್ರಿ. ಆಕಾಶದಲ್ಲಿ ಪೂರ್ಣ ಚಂದ್ರ ಉದಯಿಸುತ್ತಿದ್ದ. ಬಹಳ ಹೊತ್ತು ಮಾಸ್ಟರ್ ಸುಮ್ಮನೇ ಇದ್ದ, ಒಂದೂ ಮಾತನಾಡದೇ. ನಂತರ ಥಟ್ಟನೇ ಧ್ಯಾನದಿಂದ ಎದ್ದವನಂತೆ ಮಾತನಾಡಿದ, “ಅಂಗಳದಲ್ಲಿಯ ಸೈಪ್ರಸ್ ಮರವನ್ನು ನೋಡು”.  ಸುಂದರ ತಂಗಾಳಿ ಸೈಪ್ರಸ್ ಮರದೊಂದಿಗೆ ಆಟ ಆಡುತ್ತಿತ್ತು ಮತ್ತು ಆಗತಾನೇ ಚಂದ್ರ ಮರದ ರೆಂಬೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆ ದೃಶ್ಯ ಸುಂದರವಾಗಿತ್ತು, ಅದ್ಭುತವಾಗಿತ್ತು. ಇಂಥ ಚೆಂದದ ದೃಶ್ಯ ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ಅಪರೂಪದ್ದಾಗಿತ್ತು.

ಆದರೆ ಮಾಸ್ಟರ್ ಮಾತಿನಿಂದ ಸಮಾಧಾನಗೊಳ್ಳದ ಸನ್ಯಾಸಿ ಮಾತನಾಡಿದ, “ನನ್ನ ಪ್ರಶ್ನೆ ಅದಲ್ಲ. ನಾನು ಅಂಗಳದಲ್ಲಿಯ ಸೈಪ್ರಸ್ ಮರದ ಬಗ್ಗೆ ಕೇಳುತ್ತಿಲ್ಲ ಅಥವಾ ಚಂದ್ರನ ಬಗ್ಗೆ ಅಥವಾ ಆ ಚೆಲುವಿನ ಬಗ್ಗೆ ಕೇಳುತ್ತಿಲ್ಲ. ನನ್ನ ಪ್ರಶ್ನೆ ಈ ಯಾವುದರ ಬಗ್ಗೆಯೂ ಅಲ್ಲ. ನನ್ನ ಪ್ರಶ್ನೆ ನಿಜದ ಧರ್ಮ ಯಾವುದು ಎನ್ನುವುದು, ನನ್ನ ಪ್ರಶ್ನೆ ಮರೆತು ಹೋಯಿತಾ ನಿಮಗೆ?”.

ಮತ್ತೆ ಮಾಸ್ಟರ್ ಬಹಳ ಹೊತ್ತು ಸುಮ್ಮನೇ ಇದ್ದ. ಮತ್ತೆ ಧ್ಯಾನದಿಂದ ಎದ್ದು ಬಂದವನಂತೆ ಮಾತನಾಡಿದ, “ಅಂಗಳದಲ್ಲಿಯ ಸೈಪ್ರಸ್ ಮರವನ್ನು ನೋಡು”. 

ನಿಜದ ಧರ್ಮದಲ್ಲಿರುವುದು ಈಗ ಮತ್ತು ಇಲ್ಲಿ (now & here). ನಿಜವಾದ ಧರ್ಮ ಯಾವುದೆಂದರೆ, ಅದು ಈ ಕ್ಷಣದ ವಾಸ್ತವ ಮಾತ್ರ. ಆದ್ದರಿಂದ ನಿಮಗೆ ದುಃಖವಾಗುತ್ತಿದೆಯಾದರೆ, ಆಗ ಅದು ಅಂಗಳದಲ್ಲಿಯ ಸೈಪ್ರಸ್ ಮರ. ನೋಡಿ ಅದನ್ನು … ಸುಮ್ಮನೇ ನೋಡಿ ಅದನ್ನು. ಬೇರೆ ಮಾಡುವುದು ಏನೂ ಇಲ್ಲ. ಆ ನೋಟವೇ ಹಲವಾರು ರಹಸ್ಯಗಳನ್ನು ಅನಾವರಣಗೊಳಿಸುವುದು. ಎಷ್ಟೋ ಬಾಗಿಲುಗಳನ್ನು ತೆರೆಯುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.