ಯಾವಾಗ ನೀವು ಏನನ್ನಾದರೂ ಬಯಸುತ್ತೀರೋ ( seek ) ಆಗ ನಿಮಗೆ ಭವಿಷ್ಯ ಮುಖ್ಯವಾಗುತ್ತದೆ. ಯಾವಾಗ ನೀವು ಏನನ್ನೂ ಬಯಸುವುದಿಲ್ಲವೋ ಆಗ ನಿಮಗೆ ಇರುವ ವರ್ತಮಾನವನ್ನು ಬಿಟ್ಟರೆ ಬೇರೆ ಏನೂ ಇಲ್ಲ, ಭವಿಷ್ಯವಿಲ್ಲ. ಆಗ ನೀವು ಯಾವುದನ್ನೂ ಮುಂದೂಡುವ ಹಾಗಿಲ್ಲ, ನಾಳೆ ನಾನು ಖುಶಿಯಾಗಿರುತ್ತೇನೆ ಎಂದು ಹೇಳುವ ಹಾಗಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾಳೆಯ ಮೂಲಕ ನಾವು ಇವತ್ತನ್ನು ನಾಶ ಮಾಡುತ್ತಿದ್ದೇವೆ ; ಕಾಲ್ಪನಿಕದ ಮೂಲಕ ನಾವು ವಾಸ್ತವವನ್ನು ನಾಶ ಮಾಡುತ್ತಿದ್ದೇವೆ. ನೀವು ಹೇಳಬಹುದು, “ಸರಿ ನಾನು ಇವತ್ತು ದುಃಖಿಯಾಗಿರಬಹುದು ಆದರೆ ನಾಳೆ ಖಂಡಿತ ಖುಶಿ ನನ್ನದಾಗುತ್ತದೆ” ಎಂದು. ಹೀಗೆ ಹೇಳುವ ಮೂಲಕ ನೀವು ಇವತ್ತಿನ ದುಃಖವನ್ನು ಸಹಿಸಿಕೊಳ್ಳಬಹುದು. ಆದರೆ ನಿಮಗೆ “ನಾಳೆ” ಯೇ ಇಲ್ಲವಾದರೆ, ಬಯಸಲು ಮತ್ತು ಹುಡುಕಲು ಭವಿಷ್ಯವೇ ಇಲ್ಲವಾದರೆ, ಆಗ ನಿಮಗೆ ಮುಂದೂಡಲು ಅವಕಾಶವೇ ಇಲ್ಲ. ಆಗ ಈ ಮುಂದೂಡುವಿಕೆ ಎನ್ನುವುದೇ ಮಾಯವಾಗಿಬಿಡುತ್ತದೆ. ಆಗ ಈ ಕ್ಷಣದಲ್ಲಿ ಖುಶಿಯಾಗಿರುವುದು ಅಥವಾ ದುಃಖಿಯಾಗಿರುವುದು ನಿಮಗೆ ಬಿಟ್ಟದ್ದು. ಇದನ್ನು ನೀವು ನಿರ್ಧರಿಸಬೇಕಾದದ್ದು ಈ ಕ್ಷಣದಲ್ಲಿಯೇ. ಮತ್ತು ಇಂಥ ಸಂದರ್ಭದಲ್ಲಿ ಯಾರು, ಯಾಕೆ ತಾನೇ ದುಃಖಿಯಾಗಿ ಇರಲು ಬಯಸುತ್ತಾರೆ ಹೇಳಿ.
ಈಗ ನಿಮಗೆ ಪಾಸ್ಟ್ ಇಲ್ಲ, ಫ್ಯೂಚರ್ ಎನ್ನುವುದು ಇರುವುದೇ ಇಲ್ಲ, ನಿಮಗೆ ಉಳಿದಿರುವುದು ಈ ಕ್ಷಣ ಮಾತ್ರ. ಈ ಕ್ಷಣವನ್ನು ನೀವು ಸಂಭ್ರಮಿಸಬಹುದು : ನೀವು ಪ್ರೇಮಿಸಬಹುದು, ಪ್ರಾರ್ಥಿಸಬಹುದು, ಹಾಡಬಹುದು, ಡಾನ್ಸ್ ಮಾಡಬಹುದು , ಧ್ಯಾನ ಮಾಡಬಹುದು, ನಿಮಗೆ ಹೇಗೆ ಬೇಕೋ ಹಾಗೆ ಬಳಸಬಹುದು. ಮತ್ತು ಈ ಕ್ಷಣ ಎಷ್ಟು ಚಿಕ್ಕದಾಗಿರುತ್ತದೆಯೆಂದರೆ, ನೀವು ಎಚ್ಚರಿಕೆಯಿಂದ ಇರದೇ ಹೋದರೆ, ಅದು ನಿಮ್ಮ ಕೈಯಿಂದ ಜಾರಿ ಹೋಗಿಬಿಡುತ್ತದೆ. ಆದ್ದರಿಂದ ಇಂಥ ಇರುವಿಕೆಗೆ ನೀವು ಜಾಗೃತರಾಗಿರುವುದು ಬಹಳ ಅವಶ್ಯಕ.
ಕಾಯೋಣ ಎನ್ನುವ ಪದವನ್ನು ಯಾವತ್ತೂ ಉಪಯೋಗಿಸಬೇಡಿ, ಏಕೆಂದರೆ ನೀವು ಹಾಗೆ ಹೇಳಿದಾಗ, ಭವಿಷ್ಯದ ಕಲ್ಪನೆ ಹಿತ್ತಲ ಬಾಗಿಲಿನಿಂದ ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತದೆ. ಕಾಯಬೇಕು ಎಂದು ನಿಮಗೆ ಅನಿಸುತ್ತಿದೆಯಾದರೆ, ಆಗ ಮತ್ತೆ ನೀವು ಭವಿಷ್ಯಕ್ಕಾಗಿ ಕಾಯುತ್ತಿದ್ದೀರಿ. ಕಾಯುವಂಥಹದು ಏನು ಇಲ್ಲ ಯಾವುದೂ ಇಲ್ಲ. ಅಸ್ತಿತ್ವ ಈ ಕ್ಷಣದಲ್ಲಿ ತನ್ನ ಎಂದಿನಷ್ಟೇ ಪರಿಪೂರ್ಣವಾಗಿದೆ. ಅದು ಇದಕ್ಕಿಂತ ಹೆಚ್ಚು ಮುಂದೆ ಯಾವತ್ತೂ ಪರಿಪೂರ್ಣವಾಗಿರುವುದಿಲ್ಲ.
ಒಂದು ದಿನ ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.
ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ.
ವೃದ್ಧ ಸನ್ಯಾಸಿ ಉತ್ತರಿಸಿದ.
ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು
ಎರಡನೇಯದು, ಇವತ್ತು ನನ್ನ ಬದುಕಿನ ಕೊನೆಯ ದಿನ.

