ಜಗತ್ತಿನ ಜೊತೆ ಕೂಡಿ ಕೆಲಸ ಮಾಡಬೇಕು ನಿಜ ಆದರೆ ಅದರಲ್ಲೇ ಕಳೆದು ಹೋಗಿ ಬಿಡಬಾರದು. ಐದಾರು ಗಂಟೆಗಳಷ್ಟು ಕೆಲಸ ಮಾಡಿ, ನಂತರ ಆ ಎಲ್ಲವನ್ನೂ ಮರೆತುಬಿಡಿ. ನಿಮ್ಮ ಆಂತರಿಕ ಬೆಳವಣಿಗೆಗಾಗಿ ಕನಿಷ್ಟ ಪಕ್ಷ ಎರಡು ಗಂಟೆಗಳನ್ನಾದರೂ ತೆಗೆದಿಡಿ, ಕೆಲವು ಗಂಟೆಗಳು ನಿಮ್ಮ ಸಂಬಂಧಗಳಿಗೆ , ಪ್ರೇಮಕ್ಕೆ, ಮಕ್ಕಳಿಗೆ, ಗೆಳೆಯರಿಗಾಗಿ ಮತ್ತು ಸಮಾಜಕ್ಕೆ ಮೀಸಲಾಗಿರಲಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ವೃತ್ತಿ ( profession) ನಿಮ್ಮ ಬದುಕಿನ ಕೇವಲ ಒಂದು ಭಾಗವಾಗಿರಬೇಕು. ಸ್ವಾಭಾವಿಕವಾಗಿ ಆಗುವಂತೆ, ಅದು ನಿಮ್ಮ ಬದುಕಿನ ಪ್ರತೀ ಆಯಾಮದ ಜೊತೆ overlap ಆಗಬಾರದು. ಒಬ್ಬ ಡಾಕ್ಟರ್ 24 x 7 ಡಾಕ್ಟರ್ ಆಗಿಬಿಡುತ್ತಾನೆ ಅವನು ಯಾವಾಗಲೂ ತನ್ನ ವೃತ್ತಿಯ ಬಗ್ಗೆಯೇ ಯೋಚಿಸುತ್ತಿರುತ್ತಾನೆ, ಅದರ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಅವನು ಊಟ ಮಾಡುವಾಗಲೂ ಡಾಕ್ಟರ್, ಪ್ರೇಮಿಸುವಾಗಲೂ ಡಾಕ್ಟರ್. ಇದು ಹುಚ್ಚುತನ ; ಇದು ಮೂರ್ಖತನ. ಇಂಥ ಹುಚ್ಚುತನದಿಂದ ಪಾರಾಗಲು ಜನ ಬದುಕಿನಿಂದ ಓಡಿಹೋಗಲು ಬಯಸುತ್ತಾರೆ. ಆಗ ಅವರು 24 x 7 seeker ಆಗುತ್ತಾರೆ. ಮತ್ತೆ ಅವರು ಅದೇ ತಪ್ಪು ಮಾಡುತ್ತಿದ್ದಾರೆ, ಅದೆ 24 x 7 ಏನಾದರೂ ಆಗುವ ತಪ್ಪು.
ನನ್ನ ಪ್ರಯತ್ನ ನೀವು ಲೌಕಿಕ ಜಗತ್ತಿನಲ್ಲಿ ಭಾಗವಹಿಸುತ್ತಿರುವಾಗಲೇ seeker ಆಗುವಂತೆ ಮಾಡುವುದು. ನಿಜ ಇದು ಬಹಳ ಕಠಿಣ ಏಕೆಂದರೆ ಹೊಸ ಹೊಸ ಸವಾಲುಗಳು, ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಡಾಕ್ಟರ್ ಅಥವಾ seeker ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಸುಲಭ. ಎರಡನ್ನೂ ಜೊತೆ ಜೊತೆಯಾಗಿ ಮುಂದುವರೆಸಿಕೊಂಡು ಹೋಗುವುದು ಕಠಿಣ ಏಕೆಂದರೆ, ಇದು ಹಲವು ದ್ವಂದ್ವಗಳನ್ನು ಸೃಷ್ಟಿ ಮಾಡುತ್ತದೆ. ಆದರೆ ಈ ದ್ವಂದ್ವಗಳ ನಡುವೆಯೇ ವ್ಯಕ್ತಿಯ ಬೆಳವಣಿಗೆಯಾಗುತ್ತದೆ. ಈ ದ್ವಂದ್ವಗಳೊಡನೆ ಹೋರಾಡುತ್ತಿರುವಾಗಲೇ ವ್ಯಕ್ತಿಯ ಸಮಗ್ರತೆ ( integrity) ರೂಪಗೊಳ್ಳುತ್ತದೆ.
ನನ್ನ ಸಲಹೆ ಏನೆಂದರೆ, ದಿನದ ಐದಾರು ಗಂಟೆಗಳನ್ನು ನಿಮ್ಮ ವೃತ್ತಿಗೆ ಮೀಸಲಾಗಿಡಿ. ಬಾಕಿ ಸಮಯವನ್ನು ಬೇರೆ ಸಂಗತಿಗಳಿಗಾಗಿ ಬಳಸಿ ; ನಿದ್ದೆ ಮಾಡಲು, ಸಂಗೀತ ಕೇಳಲು, ಕವಿತೆ ಓದಲು- ಬರೆಯಲು, ಧ್ಯಾನಕ್ಕಾಗಿ, ಪ್ರೀತಿ ಪ್ರೇಮಕ್ಕಾಗಿ, ಅಥವಾ ಸುಮ್ಮನೇ ಹರಟೆ ಹೊಡೆಯಲು. ಹರಟೆ ಕೂಡ ಬಹಳ ಅವಶ್ಯಕ. ಏಕೆಂದರೆ ವ್ಯಕ್ತಿ ಅತೀ ಜಾಣನಾಗಿ, ಜನರ ಕಾಲೆಳೆಯುವ ( fool around) ತನ್ನ ಸಹಜ ಸ್ವಭಾವವನ್ನು ಮರೆತುಬಿಟ್ಟರೆ, ಆಗ ಅವನು ಭಾರವಾಗುತ್ತಾನೆ, ಗಂಭೀರನಾಗುತ್ತಾನೆ, ಸಿಡುಕನಾಗುತ್ತನೆ, ಮತ್ತು ಬದುಕನ್ನ ಮಿಸ್ ಮಾಡಿಕೊಳ್ಳುತ್ತಾನೆ.
ಮಹಾ ಸೋಮಾರಿ ನಸ್ರುದ್ದೀನ್ ಗೆ ಕೆಲಸ ಎಂದರೆ ಆಲಸ್ಯ. ಎಷ್ಟೋ ವರ್ಷಗಳಿಂದ ಅವನು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಒಂದು ದಿನ ಸಂಜೆ ನಸ್ರುದ್ದೀನ್ ಹೆಂಡತಿಯೊಂದಿಗೆ ಗಾರ್ಡನ್ ಲ್ಲಿ ಕುಳಿತಿದ್ದಾಗ ವಾತಾವರಣ ಬಹಳ ಸುಂದರವಾಗಿತ್ತು, ಸಂಜೆಯ ಬಿಸಿಲಿನಲ್ಲಿ ಸಣ್ಣಗೆ ಮಳೆ ಹನಿಯುತ್ತಿತ್ತು. ಆಕಾಶದಲ್ಲಿ ಸುಂದರ ಕಾಮನ ಬಿಲ್ಲು ಮೂಡಿತ್ತು. ಪ್ರಕೃತಿಯ ಇಂಥ ಚೆಲುವನ್ನು ಕಂಡು ಉನ್ಮತ್ತನಾದ ನಸ್ರುದ್ದೀನ ಉದ್ಗರಿಸಿದ,
“ ಆಹ್ ! ಎಂಥ ಸುಂದರ ವಾತಾವರಣ, ನಾನೇನಾದರೂ ಕೆಲಸಕ್ಕೆ ಹೋಗುತ್ತಿದ್ದರೆ ಇವತ್ತು ರಜ ಹಾಕಿ ಬಿಡುತ್ತಿದ್ದೆ. “

