ಯಾವಾಗಲೂ ಸಂಗತಿಗಳ ಸಕಾರಾತ್ಮಕ ಭಾಗಗಳ ಬಗ್ಗೆ ಆಲೋಚನೆ ಮಾಡಿ. ಅಪಘಾತ ಆಗಿದ್ದು ವಿಶಾದನೀಯ ಆದರೆ ನಿನಗೆ ಏನೂ ಆಗದೇ ನೀನು ಬದುಕಿಕೊಂಡಿದ್ದು ಸಂತೋಷದ ವಿಷಯ, ಹಾಗಾಗಿ ನೀನು ಅಪಘಾತವನ್ನು ದಾಟಿ ಬಂದಿರುವೆ. ಇದು ಸಕಾರಾತ್ಮಕ ಅಂಶ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಅಪಘಾತಗಳ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳಬೇಡಿ. ಬದಲಾಗಿ ನಿಮಗೆ ಏನೂ ಆಗದೇ ನೀವು ಕುಶಲವಾಗಿರುವುದನ್ನ ಗಮನಿಸಿ. ಇದು ನಿಜವಾದ ಸಂಗತಿ. ನೀವು ಆ ಅಪಘಾತಗಳನ್ನು ಸೋಲಿಸಿ ಜಯಶಾಲಿಯಾಗಿದ್ದೀರಿ, ಬದುಕಿ ಬಂದಿದ್ದೀರಿ. ಹಾಗಾಗಿ ಯಾವ ಚಿಂತೆಗೂ ಅವಕಾಶವಿಲ್ಲ. ಯಾವಾಗಲೂ ಸಂಗತಿಗಳ ಸಕಾರಾತ್ಮಕ ಭಾಗಗಳ ಬಗ್ಗೆ ಆಲೋಚನೆ ಮಾಡಿ. ಅಪಘಾತ ಆಗಿದ್ದು ವಿಶಾದನೀಯ ಆದರೆ ನಿನಗೆ ಏನೂ ಆಗದೇ ನೀನು ಬದುಕಿಕೊಂಡಿದ್ದು ಸಂತೋಷದ ವಿಷಯ, ಹಾಗಾಗಿ ನೀನು ಅಪಘಾತವನ್ನು ದಾಟಿ ಬಂದಿರುವೆ. ಇದು ಸಕಾರಾತ್ಮಕ ಅಂಶ. ನೀವು ಈ ಅಪಘಾತಕ್ಕಿಂತಲೂ ಸಾಮರ್ಥ್ಯಶಾಲಿಗಳು ಎಂದು ಸಾಬೀತು ಮಾಡಿರುವಿರಿ.
ಆದರೆ ಇಂಥ ಅಪಘಾತಗಳು ಮೇಲಿಂದ ಮೇಲೆ ಸಂಭವಿಸಿದಾಗ ಜನ ಹೆದರಿಕೊಳ್ಳುತ್ತಾರೆ ಎನ್ನುವುದನ್ನ ನಾನು ಒಪ್ಪಿಕೊಳ್ಳುತ್ತೇನೆ. ಆಗ ಸಾವಿನ ಭಯ ನಿಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುವುದು ಸಹಜ. ಆದರೆ ಅಪಘಾತವಾಗಲಿ ಆಗದೇ ಇರಲಿ ನೀವು ಒಮ್ಮಿಲ್ಲ ಒಮ್ಮೆ ಸಾಯುವುದಂತೂ ಖಚಿತ. ಆದರೆ ನೀವು ಅವೋಯಿಡ್ ಮಾಡಬೇಕಾದ ಅತ್ಯಂತ ಅಪಾಯಕಾರಿಯಾದ ಸಾವಿನ ಜಾಗ ಎಂದರೆ ಅದು ನಿಮ್ಮ ಹಾಸಿಗೆ. ಏಕೆಂದರೆ ಬಹುತೇಕ ಜನರು ಅಪಘಾತದ ಜಾಗೆಗಳಿಗಿಂತ ಹೆಚ್ಚಾಗಿ ತಮ್ಮ ಹಾಸಿಗೆಯಲ್ಲಿ ಸಾವನ್ನು ಅಪ್ಪುತ್ತಾರೆ. ಒಮ್ಮಿಲ್ಲ ಒಮ್ಮೆ ಎಲ್ಲರೂ ಸಾಯುವುದು ನಿಜ, ಹಾಗಾಗಿ ಹೇಗೆ ಸಾವು ಸಂಭವಿಸುತ್ತದೆ ಎನ್ನುವುದು ಅಷ್ಟು ಮಹತ್ವದ್ದಲ್ಲ.
ಹಾಸಿಗೆ ಮತ್ತು ಅಪಘಾತಗಳ ನಡುವೆ ಯಾವುದು ಸಾವಿಗೆ ಒಳ್ಳೆಯ ಸ್ಥಳ ಎಂದು ಯಾರಾದರೂ ನನ್ನ ಕೇಳಿದರೆ ನನ್ನ ಆಯ್ಕೆ ಅಪಘಾತ, ಏಕೆಂದರೆ ಅದಕ್ಕೊಂದು ಚೆಲುವು ಇದೆ.
ಒಂದು ದಿನ ಇಬ್ಬರು ವ್ಯಕ್ತಿಗಳು ಓಡುತ್ತ ನಸ್ರುದ್ದೀನ್ ನ ಮನೆಗೆ ಬಂದರು.
“ ಯಾಕೆ ಏನಾಯ್ತು ? “ ಆ ಇಬ್ಬರನ್ನು ವಿಚಾರಿಸಿದ ನಸ್ರುದ್ದೀನ್.
“ ಮಾರ್ಕೆಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “
ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.
“ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
ನಸ್ರುದ್ದೀನ್.
“ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “
“ ನನ್ನ ಹಾಗೇ ಇತ್ತಾ ಅವನ ಗಡ್ಡ ? “
“ ಥೇಟ್ ನಿನ್ನ ಹಾಗೆ “
“ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “
“ ಪಿಂಕ್ ಕಲರ್ ಶರ್ಟ್ “
“ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “
ನಿಟ್ಟುಸಿರು ಬಿಟ್ಟ ನಸ್ರುದ್ದೀನ್.

