ಧ್ಯಾನದ ಸಂಪೂರ್ಣ ರಹಸ್ಯ ಎಂದರೆ, ಯಾವುದರ ಪರವಾಗಿ ಅಥವಾ ಯಾವುದರ ವಿರುದ್ಧವಾಗಿಯೂ ಇರದಿರುವುದು, ಶಾಂತವಾಗಿರುವುದು, ಸ್ಥಿತಪ್ರಜ್ಞರಾಗಿರುವುದು, ಯಾವ ಇಷ್ಟ ಮತ್ತು ಇಷ್ಟವಾಗದಿರುವುದು ಇಲ್ಲದೇ, ಯಾವ ಆಯ್ಕೆಗಳಿಗೂ ಜೋತು ಬೀಳದೇ ಇರುವುದು. ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ ಬಹಳ ಸರಳವಾದ ವಿಧಾನ. ನಿಮ್ಮ ಮೈಂಡ್ TV ಪರದೆಯ ಹಾಗೆ. ನೆನಪುಗಳು ಹಾಯ್ದು ಹೋಗುತ್ತಿವೆ, ಇಮೇಜ್ ಗಳು ಬಂದು ಹೋಗುತ್ತಿವೆ, ಆಲೋಚನೆಗಳು, ಬಯಕೆಗಳು ಮತ್ತು ಸಾವಿರಾರು ಸಂಗತಿಗಳು ಹಾಯ್ದು ಹೋಗುತ್ತಿವೆ ; ಇದು ಯಾವಾಗಲೂ rush hour ಟ್ರಾಫಿಕ್. ಮತ್ತು ರಸ್ತೆ ಥೇಟ್ ನಮ್ಮ ಭಾರತದ ರಸ್ತೆಗಳಂತೆ : ಇಲ್ಲಿ ಯಾವ ಟ್ರಾಫಿಕ್ ನಿಯಮಗಳಿಲ್ಲ, ಪ್ರತಿಯೊಬ್ಬರು ತಮಗೆ ಬೇಕಾದ ದಿಕ್ಕಿನಲ್ಲಿ ಮುಂದೆ ಹೋಗುತ್ತಿದ್ದಾರೆ. ನಾವು ಇಂಥ ಮೈಂಡ್ ನ ಮೌಲ್ಯಮಾಪನ ಮಾಡದೇ, ಯಾವ ಜಡ್ಜಮೆಂಟ್ ಇಲ್ಲದೇ, ಯಾವ ಆಯ್ಕೆಗಳನ್ನು ಹೇರದೇ, ಈ ಎಲ್ಲವೂ ನಿಮಗೆ ಸಂಬಂಧವೇ ಇಲ್ಲದಿರುವಂತೆ, ಕೇವಲ ಸಾಕ್ಷಿಯಂತೆ ಗಮನಿಸುತ್ತಿರಬೇಕು. ಇದೇ ಆಯ್ಕೆಗಳಿಲ್ಲದ ಅರಿವು, choice less awareness.
ಅಕಸ್ಮಾತ್ ನೀವು ಯಾವುದೋ ಒಂದನ್ನ ಆಯ್ಕೆ ಮಾಡಿಕೊಳ್ಳುತ್ತ, “ಈ ಆಲೋಚನೆ ಚೆನ್ನಾಗಿದೆ, ಹೀಗೇ ಮಾಡುತ್ತೇನೆ” ಅಥವಾ “ಇದು ಸುಂದರ ಕನಸು, ಇದನ್ನು ಇನ್ನಷ್ಟು ಆನಂದಿಸಬೇಕು” ಎಂದು ಕೊಳ್ಳುವಿರಾದರೆ, ನೀವು ನಿಮ್ಮ ಸಾಕ್ಷಿತನವನ್ನು ಕಳೆದುಕೊಳ್ಳುತ್ತೀರಿ. ಅಥವಾ “ಇದು ಅನೈತಿಕ, ಇದು ತಪ್ಪು, ಇದು ಪಾಪ, ನಾನು ಇದನ್ನು ಮಾಡಬಾರದು” ಎಂದುಕೊಳ್ಳುವಿರಾದರೆ, ಆಗಲೂ ನೀವು ನಿಮ್ಮ ಸಾಕ್ಷಿತನವನ್ನು ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ಸಾಕ್ಷಿತನವನ್ನು ಎರಡು ರೀತಿಯಲ್ಲಿ ಕಳೆದುಕೊಳ್ಳಬಹುದು : ಒಂದನ್ನು ಆಯ್ಕೆ ಮಾಡಿಕೊಳ್ಳುತ್ತ ಅಥವಾ ಒಂದನ್ನು ತಿರಸ್ಕರಿಸುತ್ತ. ಆದರೆ, ಧ್ಯಾನದ ಸಂಪೂರ್ಣ ರಹಸ್ಯ ಎಂದರೆ, ಯಾವುದರ ಪರವಾಗಿ ಅಥವಾ ಯಾವುದರ ವಿರುದ್ಧವಾಗಿಯೂ ಇರದಿರುವುದು, ಶಾಂತವಾಗಿರುವುದು, ಸ್ಥಿತಪ್ರಜ್ಞರಾಗಿರುವುದು, ಯಾವ ಇಷ್ಟ ಮತ್ತು ಇಷ್ಟವಾಗದಿರುವುದು ಇಲ್ಲದೇ, ಯಾವ ಆಯ್ಕೆಗಳಿಗೂ ಜೋತು ಬೀಳದೇ ಇರುವುದು.
ನಿಮಗೆ ಸಾಕ್ಷಿತನದ ಕೆಲವು ಕ್ಷಣಗಳನ್ನಾದರೂ ಮ್ಯಾನೇಜ್ ಮಾಡುವುದು ಸಾಧ್ಯವಾಗಬಹುದಾದರೆ, ನಿಮಗೇ ಆಶ್ಚರ್ಯವಾಗುತ್ತದೆ, ನೀವು ಅನುಭವಿಸುತ್ತಿರುವ ಆನಂದದ ಬಗ್ಗೆ.
ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.
“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.
ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,
“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “
ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”

