ಸಾಮರ್ಥ್ಯದೊಂದಿಗೆ ಅಳುಕು ( vulnerability) ಕೂಡ ಹೆಚ್ಚಾಗುತ್ತ ಹೋದಾಗ, ಸಾಮರ್ಥ್ಯವನ್ನು ದುರುಪಯೋಗ ಮಾಡುವ ಯಾವ ಅಪಾಯವೂ ಇರುವುದಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಜನ, ಯಾವ ಅಪಾಯಕ್ಕೂ ತೆರೆದುಕೊಳ್ಳದೆ ತಮ್ಮ ಕನಿಷ್ಟ ಸಾಮರ್ಥ್ಯವನ್ನು ಉಪಯೋಗಿಸುತ್ತ ಬದುಕಲು ಬಯಸುತ್ತಾರೆ. ಯಾವಾಗ ನಿಮ್ಮ ಬಳಿ ಸಾಮರ್ಥ್ಯ ಇರುತ್ತದೆಯೋ ಆಗ ಅದನ್ನು ಬಳಸುವ ಅಪಾಯ ಸದಾ ಇದ್ದೇ ಇರುತ್ತದೆ. ನಿಮ್ಮ ಬಳಿ ಗಂಟೆಗೆ 200 ಮೈಲಿ ವೇಗವಾಗಿ ಓಡುವ ಸ್ಪೋರ್ಟ್ಸ್ ಕಾರ್ ಇರುವಾಗ, ಒಮ್ಮಿಲ್ಲ ಒಮ್ಮೆ ಅಷ್ಟು ವೇಗದಲ್ಲಿ ನೀವು ಕಾರ್ ಓಡಿಸುವ ಅಪಾಯ ಇದ್ದೇ ಇರುತ್ತದೆ. ನಿಮ್ಮ ಬಳಿ ಇರುವ ಸೌಲಭ್ಯವೇ ನಿಮಗೆ ಸವಾಲಾಗುವ ಅಪಾಯಕ್ಕೆ ನೀವು ತೆರೆದುಕೊಂಡಿರುತ್ತೀರಿ. ಆದ್ದರಿಂದ ಜನ ತಮ್ಮ ಕನಿಷ್ಟ ಸಾಮರ್ಥ್ಯಗಳೊಡನೆ ( low key ) ಬದುಕ ಬಯಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ಬಳಿ ಇರುವ ಸಾಮರ್ಥ್ಯದ ಪರಿಚಯವಾಗಿಬಿಟ್ಟರೆ ಅದನ್ನು ರೆಸಿಸ್ಟ್ ಮಾಡಿಕೊಳ್ಳುವುದು ಕಷ್ಟವಾಗಿಬಿಡುತ್ತದೆ. ಪೂರ್ತಿ ಸಾಮರ್ಥ್ಯವನ್ನು ಬಳಸುವ ಪ್ರಲೋಭನೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ.
ಯೋಗ ಶಾಸ್ತ್ರವನ್ನು ರಚಿಸಿದ ಪತಂಜಲಿ, ಇಂಥ ಪರಿಸ್ಥಿತಿಯಲ್ಲಿ ಸಾಧಕನೊಬ್ಬ ( seeker ) ತುಂಬ ಜಾಗರೂಕತೆಯಿಂದ ಹೆಜ್ಜೆ ಇಡಲು ಅನುವಾಗುವಂತೆ, ಈ ಅತಿಯಾದ ಸಾಮರ್ಥ್ಯದ ಕುರಿತಾಗಿಯೇ ಒಂದು ಇಡೀ ಅಧ್ಯಾಯವನ್ನು ತನ್ನ ಯೋಗ ಶಾಸ್ತ್ರದಲ್ಲಿ ಮೀಸಲಾಗಿಟ್ಟಿದ್ದಾನೆ.
ಆದರೆ ಈ ಬಗ್ಗೆ ನನ್ನ ದೃಷ್ಟಿಕೋನ ವಿಭಿನ್ನವಾಗಿದೆ. ಸಾಮರ್ಥ್ಯದೊಂದಿಗೆ ಅಳುಕು ( vulnerability) ಕೂಡ ಹೆಚ್ಚಾಗುತ್ತ ಹೋದಾಗ, ಸಾಮರ್ಥ್ಯವನ್ನು ದುರುಪಯೋಗ ಮಾಡುವ ಯಾವ ಅಪಾಯವೂ ಇರುವುದಿಲ್ಲ. ಆದರೆ ಸಾಮರ್ಥ್ಯದೊಂದಿಗೆ ಅದನ್ನು ಬಳಸುವ ಅಳುಕು ಹೆಚ್ಚಾಗದಿದ್ದರೆ ಆಗ ಏನೋ ಒಂದು ಅಪಾಯ ಆಗೇ ಆಗುತ್ತದೆ. ಈ ಬಗ್ಗೆಯೇ ಪತಂಜಲಿಗೆ ಹೆದರಿಕೆ, ಏಕೆಂದರೆ ಅವನ ವಿಧಾನದಲ್ಲಿ ಅಳುಕಿಗೆ ಜಾಗವಿಲ್ಲ. ಅವನ ವಿಧಾನ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆಯೆನೋ ಹೌದು ಆದರೆ, ಅದು ಆ ಸಾಮರ್ಥ್ಯವನ್ನು ಬಳಸುವಾಗ ಇರಬೇಕಾದಾಗ ಅಳುಕನ್ನು ಹೆಚ್ಚು ಮಾಡುವುದಿಲ್ಲ. ಪತಂಜಲಿಯ ವಿಧಾನ ನಿಮ್ಮನ್ನು ಕಬ್ಬಿಣದ ಹಾಗೆ ಗಟ್ಟಿ ಮಾಡುತ್ತದೆ ಆದರೆ ಗುಲಾಬಿಯ ಹಾಗೆ ಸಾಮರ್ಥ್ಯಶಾಲಿಯಾಗಿಸುವುದಿಲ್ಲ.
ಹಲವಾರು ವರ್ಷಗಳ ಹಿಂದೆ ಒಬ್ಬ ವೃದ್ಧ, ರಸ್ತೆ ಬದಿಯಲ್ಲಿ ಅಂಗಡಿ ಹಾಕಿಕೊಂಡು ಬಡ ಬಗ್ಗರಿಗೆ ಸಂಧಿವಾತದ ಔಷಧಿ ಕೊಡುತ್ತಿದ್ದ. ಒಂದು ದಿನ ಆ ರಸ್ತೆಯಲ್ಲಿ ಓಡಾಡಿಕೊಂಡಿದ್ದ ಒಬ್ಬ ಪುಡಿ ರೌಡಿ ಅಂಗಡಿಗೆ ಬಂದು ವೃದ್ಧ ವೈದ್ಯನನ್ನು ಹಣಕ್ಕಾಗಿ ಪೀಡಿಸತೊಡಗಿದ. ರೌಡಿಯೊಡನೆಯ ಸಂಘರ್ಷ ತಪ್ಪಿಸಿಕೊಳ್ಳಲು ಆ ವೃದ್ಧ ತನ್ನಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡಿ ನೋಡಿದ. ವೃದ್ಧನ ಈ ಪ್ರಯತ್ನಗಳನ್ನು ಆ ರೌಡಿ ಹೇಡಿತನ ಎಂದುಕೊಂಡು ಅವನನ್ನು ಮತ್ತಷ್ಟು ತೀವ್ರವಾಗಿ ಕಾಡಲು ಶುರು ಮಾಡಿದ. ಪರಿಸ್ಥಿತಿ ಕೈಮೀರಿ ಹೋಗುವ ಹಂತಕ್ಕೆ ತಲುಪಿದಾಗ ಆ ವೃದ್ಧ ತನ್ನ ಬೆರಳುಗಳಿಂದ ರೌಡಿಯ ಗಂಟಲು ಹಿಚುಕಿ ನಿಶ್ಚೇತಗೊಳಿಸಿಬಿಟ್ಟ. ಆಶ್ಚರ್ಯವೆಂದರೆ ಮರುಕ್ಷಣದಿಂದಲೇ ಆ ವೃದ್ಧ ಯಾರಿಗೂ ಕಾಣಿಸಿಕೊಳ್ಳಬಾರದೆಂದು ಊರು ಬಿಟ್ಟು ಕಾಣೆಯಾಗಿಬಿಟ್ಟ. ಆತ ತನ್ನ ಶ್ರೇಷ್ಠತೆಯನ್ನು ಸಾಬೀತು ಮಾಡಲು ಮುಂದಾಗಿದ್ದು ಬೇರೆ ಯಾವ ಅವಕಾಶಗಳೂ ಕಾಣದಿದ್ದಾಗ ಮತ್ತು ಹೀಗಾದ ಮೇಲೆ ಆತ ಮಾಯವಾಗಲೇ ಬೇಕಿತ್ತು.

