ಸಾವಿನ ಕುರಿತು ಭಯ ಪಡುವ ಯಾವುದೇ ಕಾರಣ ಇಲ್ಲ. ಸಾವು ಬಂದೇ ಬರುತ್ತದೆ ; ಇದೊಂದೇ ಬದುಕಿನ ಖಚಿತ ಸಂಗತಿ. ಬಾಕಿ ಎಲ್ಲವೂ ಅನಿಶ್ಚಿತ, ಆದ್ದರಿಂದ ನಿಶ್ಚಿತತೆಯ ಬಗ್ಗೆ ಚಿಂತೆ ಯಾಕೆ? ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿನ ಎಲ್ಲ ನಿಗೂಢಗಳನ್ನ
ಬೇಧಿಸಿದ ಮನುಷ್ಯ
ಸಾವಿಗೆ ಹತ್ತಿರವಾಗುತ್ತಾನೆ.
ಸಾವು ಬದುಕಿನ
ಕೊನೆಯ ರಹಸ್ಯ.
~ ಖಲೀಲ್ ಜಿಬ್ರಾನ್
ಸಾವು ಅತ್ಯಂತ ನಿಖರವಾದ ಖಚಿತತೆ. ಪ್ರತಿಶತ ನೂರಕ್ಕೆ ನೂರು ಜನ ಸಾಯುತ್ತಾರೆ, ತೊಭಂತೊಂಭತ್ತು ಅಲ್ಲ. ಎಲ್ಲ ವೈಜ್ಞಾನಿಕ ಬೆಳವಣಿಗೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಹೊಸ ಸಂಶೋಧನೆಗಳು ಸಾವಿನ ಇರುವಿಕೆಯ ಮೇಲೆ ಯಾವ ಪರಿಣಾಮವನ್ನು ಬೀರುವಲ್ಲೂ ಯಶಸ್ವಿಯಾಗಿಲ್ಲ : ಹೇಗೆ ಸಾವಿರಾರು ವರ್ಷಗಳ ಹಿಂದೆ ಜನ ಸಾಯುತ್ತಿದ್ದರೋ ಇನ್ನೂ ಹಾಗೆಯೇ ನೂರಕ್ಕೆ ನೂರು ಜನ ಸಾಯುತ್ತಾರೆ. ಯಾರು ಹುಟ್ಟಿದ್ದಾರೋ ಅವರೆಲ್ಲ ಸಾಯಲೇಬೇಕು; ಇದರಲ್ಲಿ ಯಾವ ವಿನಾಯತಿಯೂ ಇಲ್ಲ.
ಆದ್ದರಿಂದ ಸಾವಿನ ಬಗ್ಗೆ ನಾವು ಖಂಡಿತವಾಗಿ ವಿಸ್ಮೃತಿಯನ್ನು ಬೆಳೆಸಿಕೊಳ್ಳಬಹುದು. ಇದು ನಡೆಯಲೇಬೇಕಾಗಿರುವ ವಿದ್ಯಮಾನ, ಹಾಗಾಗಿ ಯಾವಾಗ ಆಗುತ್ತದೆ ಎನ್ನುವುದು ಸಾಮಾನ್ಯ ಕುತೂಹಲ ಮಾತ್ರ. ನೀವು ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಸಾಯುತ್ತೀರೋ ಅಥವಾ ರಸ್ತೆ ಅಪಘಾತದಲ್ಲಿ ಸಾಯುತ್ತೀರೋ ಎನ್ನುವುದು ಅಷ್ಟು ಮಹತ್ವದ್ದಲ್ಲ. ಒಮ್ಮೆ ಸಾವು ಖಚಿತ ಎನ್ನುವುದು ನಿಮಗೆ ಮನದಟ್ಟಾಗಿಬಿಟ್ಟರೆ, ಹೇಗೆ, ಎಲ್ಲಿ ಎನ್ನುವುದೆಲ್ಲ ಕೇವಲ ಫಾರ್ಮ್ಯಾಲಿಟಿಯ ವಿಷಯಗಳು. ಸಾವು ಖಚಿತ ಎನ್ನುವುದು ಮಾತ್ರ ನಿಶ್ಚಿತ ಸಂಗತಿ. ನಿಧಾನಕ್ಕೆ ನೀವು ಈ ತಿಳುವಳಿಕೆಯನ್ನು ಸ್ವೀಕಾರ ಮಾಡುತ್ತ ಹೋಗುತ್ತೀರಿ. ಸ್ವೀಕಾರ ಮಾಡದೇ ಬೇರೆ ದಾರಿಯೂ ಇಲ್ಲ. ಸಾವಿನ ವಿರುದ್ಧ ಬಂಡೆದ್ದು ಜಯಶಾಲಿಯಾದವರ ಯಾವ ಉದಾಹರಣೆಯೂ ಇಲ್ಲ. ನೀವು ಬದುಕಿರುವಾಗ ಬದುಕನ್ನು ಪೂರ್ಣವಾಗಿ ಸಂಭ್ರಮಿಸಿ, ಆನಂದಿಸಿ ; ಮತ್ತು ಯಾವಾಗ ಸಾವು ಆಗಮಿಸುತ್ತದೆಯೋ ಆಗ ಅದನ್ನೂ ಮುಕ್ತವಾಗಿ ಸ್ವಾಗತಿಸಿ.
ನಸ್ರುದ್ದೀನ್ ನ ಹಳ್ಳಿಯಲ್ಲಿ ಇಬ್ಬರು ಅವಳಿ ಸಹೋದರರಿದ್ದರು. ಈ ಅವಳಿ ಸಹೋದರರಲ್ಲಿ ಒಬ್ಬ ಸತ್ತು ಹೋದ ವಿಷಯ ನಸ್ರುದ್ದೀನ್ ನನ್ನು ಮುಟ್ಟಿತು. ಆದರೆ ತೀರಿಕೊಂಡದ್ದು ಯಾರು ಎನ್ನುವುದು ನಸ್ರುದ್ದೀನ್ ಗೆ ಗೊತ್ತಾಗಿರಲಿಲ್ಲ.
ಒಂದು ದಿನ ಒಬ್ಬ ಸಹೋದರ ರಸ್ತೆಯಲ್ಲಿ ಕಾಣಿಸಿಕೊಂಡಾಗ, ನಸ್ರುದ್ದೀನ್ ಅವನ ಬಳಿ ಧಾವಿಸಿ ಹೋಗಿ ಪ್ರಶ್ನೆ ಮಾಡಿದ.
“ ನಿಮ್ಮಿಬ್ಬರಲ್ಲಿ ತೀರಿಕೊಂಡಿದ್ದು ಯಾರು?”

